ಕಲಬುರಗಿ | ಅಫಜಲಪುರ ತಾಲೂಕಿನಾದ್ಯಂತ ವ್ಯಾಪಕ ಮಳೆ : ಪ್ರವಾಹದಿಂದ ಜನಜೀವನ ಅಸ್ತವ್ಯಸ್ತ

ಕಲಬುರಗಿ : ಅಫಜಲಪುರ ತಾಲ್ಲೂಕಿನ ಭೀಮಾ ನದಿ ದಡದ ಅನೇಕ ಗ್ರಾಮಗಳು ಈ ವರ್ಷದ ಭಾರೀ ಮಳೆಯಿಂದ ತತ್ತರಿಸಿವೆ. ಈ ಬಾರಿ ಅತಿಯಾದ ಮಳೆಯಿಂದ ಪರಿಸ್ಥಿತಿ ತೀರ ಗಂಭೀರವಾಗಿದ್ದು, ರೈತರ ಬದುಕು ಸಂಕಷ್ಟಕ್ಕೊಳಗಾಗಿದೆ.
ತಾಲ್ಲೂಕಿನ ಸರಾಸರಿ ಮಳೆ ಪ್ರಮಾಣ 707.4 ಮಿಲಿಮೀಟರ್. ಆದರೆ ಈ ಬಾರಿ ಜುಲೈ–ಆಗಸ್ಟ್ ತಿಂಗಳಲ್ಲಿ ಮಾತ್ರವೇ 189.5 ಮಿಲಿಮೀಟರ್ ಮಳೆ ಸುರಿದು ದಾಖಲೆ ಬರೆದಿದೆ. ಮೇ ಮೊದಲ ವಾರದಲ್ಲೇ ಮಳೆ ಪ್ರಾರಂಭವಾದ ಕಾರಣ ಭೀಮಾ ನದಿ ಹಾಗೂ ಉಪನದಿಗಳಾದ ಬೋರಿ, ಅಮರ್ಜಾ ನದಿಗಳು ಉಕ್ಕಿ ಹರಿಯುತ್ತಿವೆ. ಈ ಉಪನದಿಗಳಿಗೆ ಸಂಪರ್ಕಿಸುವ ಹಳ್ಳ–ಕಾಲುವೆಗಳು ಮೈದುಂಬಿ ಹರಿಯುತ್ತಿರುವುದರಿಂದ ಹೊಲಗದ್ದೆಗಳಲ್ಲಿ ಒಡ್ಡು ದಿಂನೆಗಳು ಒಡೆದು ಮಣ್ಣು ಕೊಚ್ಚಿಕೊಂಡು ಹೋಗಿದೆ.
ಹಿರಿಯಾಳ, ದುದ್ದುಣಗಿ, ಭೋಸಗಾ, ಉಡಚಣ, ಶಿವೂರ, ಕುಡಿಗನೂರ, ಮಣೂರ, ಮಂಗಳೂರು, ಶಿರವಾಳ ಸೇರಿದಂತೆ ನದಿ ತೀರದ ಹಲವಾರು ಗ್ರಾಮಗಳ ಹೊಲಗಳಿಗೆ ನೀರು ನುಗ್ಗಿ ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ ಹಾಗೂ ಪ್ರಮುಖ ವಾಣಿಜ್ಯ ಬೆಳೆಗಳಾದ ಹತ್ತಿ, ತೊಗರಿ ಬೆಳೆಗಳು ಹಾನಿಗೊಂಡಿವೆ.
ಸಿದ್ದನೂರು–ರೇವೂರು ಹಾಗೂ ಜೇವರ್ಗಿ (ಬಿ)–ಜೇವರ್ಗಿ (ಕೆ) ಗ್ರಾಮದ ನಡುವಿನ ಸೇತುವೆಗಳು ಮುಳುಗಡೆಯಾಗಿದ್ದು ಸಂಚಾರ ಸ್ಥಗಿತವಾಗಿದೆ. ಬಗಲೂರು–ಘತ್ತರಗಾ ಬ್ರಿಜ್ ಕಮ್ ಬ್ಯಾರೇಜ್ ಹಾಗೂ ಗಾಣಗಾಪುರ ಸಮೀಪದ ಸೇತುವೆಗಳೂ ಮುಳುಗಡೆಯಾಗಿವೆ.
ಆತನೂರ ಹೋಬಳಿಯ ಕಂದಾಯ ಇಲಾಖೆಯ ಮಾಹಿತಿಯ ಪ್ರಕಾರ, ಸೊನ್ನ ಏತ ನೀರಾವರಿ ಡ್ಯಾಂನಿಂದ 17,000 ಕ್ಯೂಸೆಕ್ಸ್ ನೀರು ಹರಿಯುತ್ತಿದೆ. ಇದರಿಂದ ಪ್ರವಾಹದ ಭೀತಿ ಮುಂದುವರಿದಿದ್ದು, ನದಿ ತೀರದ ಗ್ರಾಮಸ್ಥರು ಎಚ್ಚರಿಕೆಯಿಂದ ಇರಲು ಆಡಳಿತ ಸೂಚಿಸಿದೆ.







