ಕಲಬುರಗಿ | ಜನರಿಗೋಸ್ಕರ ಇರುವ ಪ್ರಜಾಪ್ರಭುತ್ವದ ಉಳಿವಿಗೆ ಶ್ರಮಿಸಿ : ಶಾಸಕ ಡಾ.ಅಜಯ್ ಸಿಂಗ್

ಕಲಬುರಗಿ: ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ಇರುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕೆ.ಕೆ.ಅರ್.ಡಿ.ಬಿ. ಅಧ್ಯಕ್ಷ, ಶಾಸಕ ಡಾ.ಅಜಯ್ ಸಿಂಗ್ ಹೇಳಿದ್ದಾರೆ.
ಸೋಮವಾರ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಜಗತ್ ವೃತ್ತದ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ಆಯೋಜಿಸಿದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನ ಪೀಠಿಕೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದಲ್ಲಿ ಅಮೆರಿಕಾ, ಜಪಾನ್, ಆಸ್ಟ್ರೇಲಿಯಾ ಸೇರಿ ವಿವಿಧೆಡೆ ಪ್ರಜಾಪ್ರಭುತ್ವ ಇವೆ. ಅದರೆ ಬಹುತ್ವದ ಸಂಸ್ಕೃತಿ ಜೊತೆಗೆ ವಿವಿಧ ಧರ್ಮ, ಅಸಂಖ್ಯಾತ ಜಾತಿಗಳನ್ನು ಒಳಗೊಂಡ ಭಾರತದಲ್ಲಿ ಇರುವ ಪ್ರಜಾಪ್ರಭುತ್ವ ವ್ಯವಸ್ಥೆ ಸರ್ವರನ್ನು ಸಮನಾಗಿ ಕಾಣುವ, ಅವರ ಧರ್ಮ, ಸಂಸ್ಕೃತಿಯನ್ನು ಆಯ್ಕೆಯನುಸಾರ ಪಾಲಿಸುವ ವ್ಯವಸ್ಥೆ ಇರುವುದು ಭಾರತದಲ್ಲಿ ಮಾತ್ರ. ಇಂತಹ ಸುಮದರ ಪ್ರಜಾಪ್ರಭುತ್ವ ನೀಡಿದ ಸಂವಿಧಾನ ಶಿಲ್ಪಿ ಡಾ.ಬಿ.ಅರ್.ಅಂಬೇಡ್ಕರ್ ಅವರನ್ನು ನಾವು ಎಂದಿಗೂ ಮರೆಯಬಾರದು ಎಂದರು.
ಕಳೆದ ವರ್ಷ ಇದೇ ದಿನದಂದು ಮಾನವ ಸರಪಳಿ ನಿರ್ಮಿಸಿ ರಾಜ್ಯವು ಗಿನ್ನಿಸ್ ದಾಖಲೆ ನಿರ್ಮಿಸಿತ್ತು. ಇದರಲ್ಲಿ ಕಲಬುರಗಿ ಜಿಲ್ಲೆ ಸ್ಥಾನ ಸಹ ಪಡೆದಿರುವುದನ್ನು ಸ್ಮರಿಸಿದ ಅವರು, ಈ ಬಾರಿ ಸಹ ಸರ್ಕಾರ ಅರ್ಥಪೂರ್ಣ ಅಚರಣೆ ಮಾಡುತ್ತಿದೆ ಎಂದರು.
ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ ಮತ್ತಿಮೂಡ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಡಿಸಿ ಬಿ.ಫೌಝಿಯಾ ತರನ್ನುಮ್, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಸಹಾಯಕ ನಿರ್ದೇಶಕ ಗಿರೀಶ ರಂಜೋಳಕರ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸೋಮಶೇಖರ್ ಬಿ. ಸೇರಿದಂತೆ ಅನೇಕ ಮುಖಂಡರು, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಮೇಲ್ವಿಚಾರಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿನಿ ಆರತಿ ಅವರು ಎಲ್ಲರಿಗೂ ಸಂವಿಧಾನ ಪೀಠಿಕೆ ಬೋಧಿಸಿದರು.
ಬೈಕ್ ರ‍್ಯಾಲಿಗೆ ಚಾಲನೆ :
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಗತ್ ವೃತ್ತದಿಂದ ಆರಂಭಗೊಂಡ ಬೈಕ್ ರ‍್ಯಾಲಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಚಾಲನೆ ನೀಡಿದರು. ನಂತರ ಡಾ.ಅಜಯ್ ಸಿಂಗ್, ಬಿ.ಫೌಝಿಯಾ ತರನ್ನುಮ್ ಅವರು ಬೈಕ್ ಹತ್ತಿ ಡಿಸಿ ಕಚೇರಿವರೆಗೆ ಸಾಗಿದರು.







