ಕಲಬುರಗಿ| ಸೇಡಂನ ರಾಜಶ್ರೀ ಸಿಮೆಂಟ್ ಕಂಪನಿಯಲ್ಲಿ ಅಪಘಾತಕ್ಕೀಡಾಗಿ ಕಾರ್ಮಿಕ ಮೃತ್ಯು

ಕಲಬುರಗಿ: ಸೇಡಂನ ರಾಜಶ್ರೀ ಸಿಮೆಂಟ್ ಕಂಪನಿನಲ್ಲಿ ಕರ್ತವ್ಯನಿರತ ಗುತ್ತಿಗೆ ಕಾರ್ಮಿಕನೊಬ್ಬ ಅಪಘಾತಕ್ಕೀಡಾಗಿ ಸೋಮವಾರ ರಾತ್ರಿ ಮೃತಪಟ್ಟಿರುವ ಬೆನ್ನಲ್ಲೇ ಸ್ಥಳೀಯರು, ಕುಟುಂಬಸ್ಥರು ಮಂಗಳವಾರ ಪ್ರತಿಭಟನೆ ನಡೆಸಿ, ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಗ್ಗೆ ವರದಿಯಾಗಿದೆ.
ಮಳಖೇಡದ ಮಲ್ಲಿಕಾರ್ಜುನ ಬೊಮ್ಮನಳ್ಳಿ (30) ಮೃತ ಕಾರ್ಮಿಕ ಎಂದು ತಿಳಿದುಬಂದಿದೆ.
ಕಲ್ಲು ಗಣಿಯಲ್ಲಿ ಟಿಪ್ಪರ್ ಚಾಲಕನಾಗಿದ್ದ ಮಲ್ಲಿಕಾರ್ಜುನ, ಸೋಮವಾರ ತಡರಾತ್ರಿ ಮಳೆಯಿಂದಾಗಿ ಕೆಸರಿನಲ್ಲಿ ಸಿಲುಕಿದ್ದ. ಟಿಪ್ಪರ್ ತೆಗೆಯಲು ಹೋದಾಗ ಲೋಡರ್ ವಾಹನ ತಂದು ತಳ್ಳುವಾಗ ಎರಡು ವಾಹನಗಳ ಮಧ್ಯೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ವಿಷಯ ತಿಳಿಯುತ್ತಲೇ ಸಂಬಂಧಿಕರು, ಗ್ರಾಮಸ್ಥರು ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಂಗಳವಾರ ಬೆಳಗ್ಗೆ ಗೇಟ್ ಹತ್ತಿರ ಪ್ರತಿಭಟನೆ ನಡೆಸಿ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಜತೆಗೆ ಒಬ್ಬರಿಗೆ ಕಾಯಂ ನೌಕರಿ ಕೊಡಬೇಕೆಂದು ಆಗ್ರಹಿಸಿದ್ದಾರೆ. ಪ್ರತಿಭಟನೆಗೆ ಮಣಿದ ಕಂಪನಿ, ಕುಟುಂಬದ ಒಬ್ಬರಿಗೆ ಕಾಯಂ ನೌಕರಿ ಮತ್ತು 33 ಲಕ್ಷ ರೂ. ಪರಿಹಾರ ನೀಡುವುದಾಗಿ ಒಪ್ಪಿಕೊಂಡಿದೆ.
ಸಂಧಾನ ಸಭೆಯಲ್ಲಿ ಕಂಪನಿ ಅಧ್ಯಕ್ಷ ಉದಯ ಪವಾರ್, ಉಪಾಧ್ಯಕ್ಷ ಅಶೋಕ ನೆನಿನ್, ಮೃತನ ತಂದೆ ಮಲ್ಲಿಕಾರ್ಜುನ ಬೊಮ್ಮನಳ್ಳಿ, ಪ್ರಮುಖರಾದ ಮರೆಪ್ಪ ತಾತಾ, ರಾಜಶೇಖರ ಪುರಾಣಿಕ, ಲಚ್ಚಪ್ಪ ಜಮಾದಾರ, ದಿನೇಶ ಸಣ್ಣೂರ, ಶ್ರೀನಾಥ ಪಿಲ್ಲಿ, ಜಮೀಲ್ ಆಲಂಪುರಿ, ರುದ್ರು ಪಿಲ್ಲಿ, ಶರಣು ಸಜ್ಜನ್, ದೇವಾನಂದ ಪಿಲ್ಲಿ, ನಾಗೇಂದ್ರ ಲಿಂಗಂಪಲ್ಲಿ, ಭೀಮಾಶಂಕರ ಕೋಳಕೂರ, ಲಿಂಗರಾಜ ತಳಕಿನ, ಮಲ್ಲಿಕಾರ್ಜುನ ಮೆಕಾನಿಕ್, ರಾಜು ಮುರಾರಿ, ಸಾಬಣ್ಣ ಸೋಲಾಪುರ, ಮಾರುತಿ ಹೊಕ್ಕಳ, ಶರಣು ಯಂಗನ್, ನರಸಪ್ಪ ಟೊಣ್ಣೆ, ಮಹಾದೇವ ಗೋಣಿ ಮತ್ತಿತರು ಇದ್ದರು.
ಈ ಸಂದರ್ಭದಲ್ಲಿ ಡಿವೈಎಸ್‌ಪಿ ಎಸ್.ಎಸ್. ಹಿರೇಮಠ, ಸಿಪಿಐ ಮಹಾದೇವಪ್ಪ ದಿಡ್ಡಿಮನಿ, ಜಗದೇವಪ್ಪ ಪಾಳಾ, ದೌಲತ್ ಕುರಿ, ಪಿಎಸ್‌ಐ ಸಂಗಮೇಶ ಅಂಗಡಿ, ಗೌತಮ್ ಗುತ್ತೇದಾರ್ ಸೇರಿದಂತೆ ಇತರೆ ಪೊಲೀಸ್ ಸಿಬ್ಬಂದಿಯವರು ಭದ್ರತೆ ಒದಗಿಸಿದ್ದರು.







