ಕಲಬುರಗಿ | ಯತ್ನಾಳ್ ಉಚ್ಚಾಟನೆ ದುರಾದೃಷ್ಟಕರ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ಡಾ.ಶರಣಪ್ರಕಾಶ್ ಪಾಟೀಲ್
ಕಲಬುರಗಿ : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ಮಾಡಿದ್ದಾರೆ ಅವರ ಉಚ್ಚಾಟನೆ ಮಾಡಿರೋದು ದುರಾದೃಷ್ಟಕರ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕಾರಣದಲ್ಲಿ ಉಚ್ಚಾಟನೆಯಂತಹ ಘಟನೆಗಳು ನಡೆಯಬಾರದು ಎಂದ ಅವರು, ಕಾಂಗ್ರೆಸ್ ಪಕ್ಷಕ್ಕೆ ಯತ್ನಾಳ್ ಅವರನ್ನು ಕರೆತರಲು ತಾವು ಸಾಮರ್ಥ್ಯ ಹೊಂದಿಲ್ಲ, ಅದಕ್ಕಾಗಿ ಬೇರೆ ವ್ಯಕ್ತಿಗಳು ಇದ್ದಾರೆ ಎಂದು ಹೇಳಿದರು.
ಹಾಲಿನ ದರ ಏರಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಾಲಿನ ದರ ಏರಿಕೆಯಾದರೂ, ಹೆಚ್ಚುವರಿ ನಾಲ್ಕು ರೂಪಾಯಿ ನೇರವಾಗಿ ರೈತರಿಗೆ ಹೋಗುತ್ತದೆ ಎಂದು ಸ್ಪಷ್ಟಪಡಿಸಿದರು. ಈ ಹೆಚ್ಚಳವನ್ನು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಪಡೆದುಕೊಳ್ಳದೇ, ರೈತರಿಗೆ ಲಾಭವಾಗುವಂತೆ ಮಾಡಲಾಗಿದೆ. ಇತರ ರಾಜ್ಯಗಳ ಹಾಲಿನ ದರಗಳೊಂದಿಗೆ ಹೋಲಿಸಿದರೆ, ಉದಾಹರಣೆಗೆ ಗುಜರಾತ್ನಲ್ಲಿ, ನಮ್ಮ ರಾಜ್ಯದ ದರಗಳು ಸಮಾನವಾಗಿವೆ ಎಂದು ವಿವರಿಸಿದರು.
ಕಲಬುರಗಿಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ :
ಕಲಬುರಗಿಯಲ್ಲಿ 210 ಹಾಸಿಗೆ ಸಾಮರ್ಥ್ಯದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಏ.16 ರಂದು ಅಡಿಗಲ್ಲು ಸಮಾರಂಭ ನಡೆಯಲಿದೆ. ಈ ಯೋಜನೆಗೆ 76 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಹಳೆಯ ಕಿದ್ವಾಯಿ ಆಸ್ಪತ್ರೆಯ ಪಕ್ಕದಲ್ಲೇ ಈ ನೂತನ ಆಸ್ಪತ್ರೆ ನಿರ್ಮಾಣವಾಗಲಿದೆ. ಇಲ್ಲಿ 6.2 ಕೋಟಿ ರೂ. ವೆಚ್ಚದಲ್ಲಿ ಬ್ರಾಕಿ ಥೆರಪಿ ಘಟಕ ಸ್ಥಾಪಿಸಲಾಗುವುದು, ಇದು ಗರ್ಭಕಂಠ, ಸ್ತನ, ಪ್ರಾಸ್ಟೇಟ್ ಕ್ಯಾನ್ಸರ್ಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಹಾಯ ಮಾಡಲಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದು ಮೊದಲ ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆಯಾಗಿದ್ದು, ಬೆಂಗಳೂರಿನಲ್ಲಿ ಹೊರತುಪಡಿಸಿ ಕಲಬುರಗಿಯ ಈ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಲಿದೆ ಎಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ನಾವು ತಂದಿರುವ ಆರೋಗ್ಯ ಯೋಜನೆಗಳು ಕಲಬುರಗಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನತೆಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಸಹಾಯ ಮಾಡಲಿವೆ ಎಂದು ಭರವಸೆ ವ್ಯಕ್ತಪಡಿಸಿದರು.







