ಕಲಬುರಗಿ|ವಿದ್ಯಾರ್ಥಿನಿಯರ ಪ್ರತಿಭೆ ಪ್ರೋತ್ಸಾಹಿಸಲು ಗೋಡೆ ಪತ್ರಿಕೆ ಸಹಕಾರಿ : ಡಾ. ಶಿವರಂಜನ ಸತ್ಯಂಪೇಟೆ

ಕಲಬುರಗಿ : ಇಂದಿನ ಆಧುನಿಕ ಯುಗದಲ್ಲಿ ಎಲ್ಲಾ ವಿದ್ಯಾರ್ಥಿಗಳು ಹೆಚ್ಚು ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಲೇಜಿನ ಗೋಡೆ ಪತ್ರಿಕೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ಸಹಕಾರಿ ಎಂದು ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಹೇಳಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗದವರು ಸಂಚಾಲಿತ "ಮುಕ್ತ ಮನಸು" ಗೋಡೆ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕನ್ನಡ ವಿಭಾಗದವರು ಈ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರಲು ಈ ರೀತಿಯ ಪ್ರಯೋಗ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ರಾಜೇಂದ್ರ ಕೊಂಡಾ, ನಮ್ಮ ಕಾಲೇಜಿನಲ್ಲಿ ಈ ರೀತಿಯ ಪ್ರಯೋಗ ಮೊದಲು ಹಿಂದಿ ವಿಭಾಗದ ವತಿಯಿಂದ ಆರಂಭಿಸಲಾಯಿತು. ಅವರಿಂದ ಪ್ರೋತ್ಸಾಹ ಪಡೆದು ಕನ್ನಡ ವಿಭಾಗದವರು ಮುಕ್ತ ಮನಸು ಗೋಡೆ ಪತ್ರಿಕೆ ಆರಂಭಿಸಿರುವುದು ವಿದ್ಯಾರ್ಥಿಗಳ ಸರ್ವೋತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಚಾರ್ಯರಾದ ಪ್ರೊ.ವೀಣಾ ಎಚ್. ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ಪ್ರೇಮಚಂದ ಚವ್ಹಾಣ, ಸಮಾಜಶಾಸ್ತ್ರದ ಮುಖ್ಯಸ್ಥರಾದ ಡಾ.ಮಹೇಶ ಗಂವ್ಹಾರ, ಆಯಿಕ್ಯೂಎಸಿ ಸಂಯೋಜಕರಾದ ಡಾ. ಶಿವರಾಜ ಜಿ, ಡಾ. ಜ್ಯೋತಿಪ್ರಕಾಶ ದೇಶಮುಖ, ಡಾ.ಸವಿತಾ, ಶಿವಲೀಲಾ ಧೋತ್ರ, ಡಾ. ಮೋಹಸೀನಾ, ಸುಷ್ಮಾ ಕುಲಕರ್ಣಿ, ಡಾ. ರಾಜೇಶ, ಗೀತಾ ಪಾಟೀಲ, ವಿವಿಧ ವಿಭಾಗಗಳ ಉಪನ್ಯಾಸಕರು ಮತ್ತು ಕನ್ನಡ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಕವಿತಾ ಅಶೋಕ ಸ್ವಾಗತಿಸಿದರು. ಬಸಮ್ಮ ಗೊಬ್ಬರ ಕಾರ್ಯಕ್ರಮವನ್ನು ನಿರೂಪಿಸಿದರು. ದಾನಮ್ಮ ಕೋರವಾರ ವಂದಿಸಿದರು.







