ಕಾಳಗಿ| ಬೆಳೆ ಪರಿಹಾರ: ತಹಸೀಲ್ದಾರ್ ಕಚೇರಿ ಎದುರು ರೈತರ ಆಕ್ರೋಶ

ಕಲಬುರಗಿ: ಸರ್ಕಾರ ಅತಿವೃಷ್ಟಿ ಬೆಳೆ ಹಾನಿಗೆ ಪರಿಹಾರ ಹಣ ರೈತರ ಖಾತೆಗೆ ಜಮೆ ಮಾಡಿದ್ದು, ಕಾಳಗಿ ತಾಲೂಕಿನಲ್ಲಿ ಇನ್ನೂ ಸಾವಿರಾರು ರೈತರಿಗೆ ಬೆಳೆ ಹಾನಿ ಪರಿಹಾರ ಹಣ ಜಮೆ ಬಾರದಿರುವುದರಿಂದ ಸೋಮವಾರ ವಿವಿಧ ಹಳ್ಳಿಯಿಂದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ನೂರಾರು ರೈತರು ತಹಸೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ತಾಲೂಕಾಧ್ಯಕ್ಷ ವೀರಣ್ಣ ಗಂಗಾಣಿ ಮಾತನಾಡಿ,ಅತಿವೃಷ್ಟಿ ಮಳೆಯಿಂದ ಹಾನಿಗೊಳಗಾದ ರೈತ ಸಂಕಷ್ಟದಲ್ಲಿದ್ದಾನೆ. ಜಿಲ್ಲೆಯಲ್ಲಿ ಅತಿವೃಷ್ಟಿ ಪರಿಹಾರಕ್ಕಾಗಿ ನೊಂದಣಿಯಾದ ರೈತರಲ್ಲಿ ಇನ್ನೂ ಸಾವಿರಾರು ರೈತರಿಗೆ ಪರಿಹಾರದ ಹಣವೇ ಬಂದಿಲ್ಲ ಎಂದು ಹೇಳಿದರು
ಬೆಳೆ ಹಾನಿ ಸಮೀಕ್ಷೆ ಮಾಡುವಾಗ ಗ್ರಾಮೀಣ ಪ್ರದೇಶದಲ್ಲಿ ಇರುವ ಗ್ರಾಮ ಲೆಕ್ಕಾಧಿಕಾರಿಗಳು ಸರಿಯಾಗಿ ಸಮೀಕ್ಷೆ ಮಾಡದೆ ತಮ್ಮ ಸಹಾಯಕರಿಂದ ಎಲ್ಲೊ ಕುಳಿತು ಬೆಳೆ ಸಮೀಕ್ಷೆ ಮಾಡಿದರಿಂದ ಈಗ ರೈತರಿಗೆ ಪರಿಹಾರ ಸಮಯದಲ್ಲಿ ತಾರತಮ್ಯ ಆಗಿದೆ. ಇನ್ನೂ ಅನೇಕ ಜನ ರೈತರಿಗೆ ಪರಿಹಾರ ಹಣವೇ ಜಮೆ ಅಗಿಲ್ಲ. ಇದರಿಂದ ಬೆಳೆ ಪರಿಹಾರದ ಹಣ ಬಾರದೆ ರೈತರು ಹತಾಶರಾಗಿದ್ದಾರೆ ಎಂದರು.
ಈ ವರ್ಷ ಅತಿವೃಷ್ಟಿ ಮಳೆಯಿಂದ ರೈತರ ತೊಗರಿ ಬೆಳೆ ನಿರುಪಾಲಾಗಿವೆ ಸಾಲ ಸೂಲ ಮಾಡಿ ಹಿಂಗಾರು ಬಿತ್ತನೆಗೆ ಮಾಡಿದ ರೈತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾನೆ. ಇಂತಹ ಸಮಯದಲ್ಲಿ ರೈತರ ಖಾತೆಗೆ ಅಲ್ಪಸ್ವಲ್ಪ ಜಮೆ ಆದ ಬೆಳೆ ಪರಿಹಾರದ ಹಣಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳು ಬೆಳೆ ಸಾಲ ಕಟ್ಟಿಲ್ಲ, ಸಾಲ ಮರು ಪಾವತಿ ಮಾಡಬೇಕು ಎಂದು ರೈತರ ಖಾತೆಗಳನ್ನು ಸ್ಥಗಿತ ಮಾಡಿ ತೊಂದರೆ ಕೊಡುತ್ತಿದ್ದಾರೆ. ಇದರಿಂದ ರೈತರಿಗೆ ಕೈ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕೂಡಲೇ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು ಬಂದ್ ಮಾಡಿದ ರೈತರ ಖಾತೆಗಳನ್ನು ತೆರವು ಮಾಡಿ ರೈತರಿಗೆ ಹಣ ನೀಡಬೇಕು ಹಾಗೂ ಇನ್ನೂ ಬೆಳೆ ಹಾನಿ ಪರಿಹಾರ ಹಣ ಜಮೆ ಆಗದ ಎಲ್ಲಾ ರೈತರ ಖಾತೆಗೂ ಶೀಘ್ರವೇ ಬೆಳೆ ಹಾನಿ ಹಣ ಜಮೆ ಮಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಂತರ ತಹಶಿಲ್ದಾರ ಪೃಥ್ವಿರಾಜ್ ಪಾಟೀಲ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ರೈತ ಮುಖಂಡರಾದ ಸಿದ್ದು ತೆಂಗಳಿ, ಅರುಣಕುಮಾರ, ಪ್ರಭಾಕಾರ ಇಟಗಿ, ಸಿದ್ದಯ್ಯ ಕೊಡದೂರ, ಅಣ್ಣರಾವ ಮಡಿವಾಳ, ಶಿವಲಿಂಗಪ್ಪ ದುತ್ತರಗಿ, ರಮೇಶ ಸಿದ್ಧನಾಕ, ಉಮೇಶ್ ಕೊನಪ, ಶಿವಕುಮಾರ್ ಮಡಿವಾಳ, ಹಣಮಂತ ಅಲ್ಬಾ, ಮಾಣಿಕಮ್ಮ ರೇವಯ್ಯ, ಜಗನ್ನಾಥ ಬೋವಿ, ಅರ್ಜುನ ಇಟಗಿ, ನಾಗರಾಜ ನಿಪ್ಪಣಿ, ರೇವಣಸಿದ್ದಪ್ಪ ನಾವದಗಿ, ಶಂಕರಪ್ಪ ಸಾವತಖೇಡ, ಬಸವರಾಜ ಜಿವಣಗಿ, ಬಾಬುರಾವ ಭೆಡಸೂರ ಸೇರಿದಂತೆ ಹೆಬ್ಬಾಳ, ಚಿಂಚೋಳಿ(ಎಚ್), ಸೂಗುರ, ಕಣಸೂರ, ಗೋಟೂರ, ಮಲಘಾಣ, ಡೊಣ್ಣೂರ, ಅರಜಂಬಗಾ, ತೆಂಗಳಿ, ಕಲಗುರ್ತಿ, ಕಾಳಗಿ, ಕೊಡದೂರ, ಮಂಗಲಗಿ, ಭರತನೂರ, ರಾಜಾಪೂರ, ಕೋಡ್ಲಿ, ಕುಡ್ಡಳ್ಳಿ, ನಾವದಗಿ, ರುಮ್ಮನಗೂಡ, ಮೋಘ, ಭೆಡಸೂರ, ನಿಪ್ಪಣಿ, ಇವಣಿ, ರಟಕಲ್, ಕಂದಗೂಳ ಸೇರಿದಂತೆ 30ಕ್ಕೂ ಹೆಚ್ಚು ಹಳ್ಳಿಗಳಿಂದ ನೂರಾರು ರೈತರು ಹಾಜರಿದ್ದರು.







