ಕಲಬುರಗಿ | ಪ್ರತ್ಯೇಕ ಘಟನೆ: ಕೊಲೆ ಪ್ರಕರಣದ ಆರೋಪಿಯ ಹತ್ಯೆ; ಮತ್ತೊಬ್ಬ ಯುವಕನಿಗೆ ಮಾರಣಾಂತಿಕ ಹಲ್ಲೆ

ಕಲಬುರಗಿ : ಗುರುವಾರ ರಾತ್ರಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಕೊಲೆ ಪ್ರಕರಣದ ಆರೋಪಿಯ ಬರ್ಬರ ಹತ್ಯೆಯಾಗಿದ್ದು, ಇನ್ನೊಂದೆಡೆ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಬಗ್ಗೆ ವರದಿಯಾಗಿದೆ.
ಫರಹತಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯ ಕೂಡಿ ದರ್ಗಾದ ಸಮೀಪ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ನಡೆಸಿದ ದಾಳಿಯಲ್ಲಿ ಕೊಲೆ ಪ್ರಕರಣದ ಆರೋಪಿಯೊಬ್ಬ ಭೀಕರವಾಗಿ ಹತ್ಯೆಯಾಗಿದ್ದಾನೆ.
ಕಲಬುರಗಿ ನಗರದ ಮಿಲ್ಲತ್ ನಗರದ ನಿವಾಸಿ ನಜಮುದ್ದೀನ್ ಅಬ್ದುಲ್ ಸತ್ತಾರ್ (44) ಮೃತರು ತಿಳಿದುಬಂದಿದೆ.
ಹತ್ಯೆಯಾದ ನಜಮುದ್ದೀನ್, ಕೆಲವು ತಿಂಗಳ ಹಿಂದಷ್ಟೇ ರೌಡಿಶೀಟರ್ ಆಗಿದ್ದ ಖಲೀಲ್ ಎಂಬಾತನನ್ನು ಹತ್ಯೆ ಮಾಡಿರುವ ಪ್ರಕರಣದಲ್ಲಿ 4ನೇ ಆರೋಪಿಯಾಗಿ ಜೈಲು ಸೇರಿದ್ದ ಎನ್ನಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ನಜಮುದ್ದೀನ್ ಈಗ ಹತ್ಯೆಯಾಗಿದ್ದಾನೆ.
ಇನ್ನೊಂದು ಕಡೆ ರೋಜಾ ಪೊಲೀಸ್ ಠಾಣೆಯ ವ್ಯಾಪ್ತಿಯ ಇಸ್ಲಾಮಾಬಾದ್ ಕಾಲೋನಿಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಮಹೀಬೂಬ್ ನಗರದ ನಿವಾಸಿ ಅಬ್ದುಲ್ ರಹೀಂ ಅಬ್ಬಾಸ್ ಅಲಿ (23) ಹಲ್ಲೆಗೊಳಗಾದ ಯುವಕ ಎಂದು ಗುರುತಿಸಲಾಗಿದೆ. ಸದ್ಯ ಆತನನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕಾಗಿ ಅಬ್ದುಲ್ ರಹೀಂ ಮೇಲೆ ಹಾಗರಗಾ ಕ್ರಾಸ್ ಸಮೀಪದ ನಿವಾಸಿ ಎಂ.ಡಿ ಇಸ್ಮಾಯಿಲ್ ಅಹ್ಮದ್ ಅಲಿ ಮತ್ತಿತರರು ಸೇರಿ ಹಲ್ಲೆ ನಡೆಸಿದ್ದಾರೆಂದು ಪೋಲಿಸ್ ಮೂಲಗಳು ತಿಳಿಸಿವೆ.
ಪ್ರತ್ಯೇಕ ಘಟನೆಗಳಲ್ಲಿ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.







