ಅಮೆರಿಕಕ್ಕೆ ತೆರಳಲು ಕೇಂದ್ರದಿಂದ ನಿರಾಕರಣೆ : ಸ್ಪಷ್ಟನೆ ಕೇಳುವುದಾಗಿ ತಿಳಿಸಿದ ಸಚಿವ ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಕಲಬುರಗಿ : ಅಮೆರಿಕದ ಬೋಸ್ಟನ್ನಲ್ಲಿ ಆಯೋಜಿಸಲಾಗಿರುವ ಬಯೋ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಭಾಗಿಯಾಗಲು ಹೋಗುವುದಕ್ಕೆ ಕೇಂದ್ರ ವಿದೇಶಾಂಗ ಸಚಿವಾಲಯದಿಂದ ಅನುಮತಿ ಸಿಕ್ಕಿಲ್ಲ, ಈ ಬಗ್ಗೆ ಸ್ಪಷ್ಟನೆ ಕೇಳುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಅಮೆರಿಕಕ್ಕೆ ತೆರಳುವ ಕುರಿತು ವಿದೇಶಾಂಗ ಸಚಿವಾಲಯ ನಿರಾಕರಿಸಿದ್ದು, ಇದಕ್ಕೆ ಸ್ಪಷ್ಟ ಕಾರಣ ನೀಡಿಲ್ಲ. ಹಾಗಾಗಿ ಅಮೆರಿಕದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಸದ್ಯ ಸಚಿವರು ಜೂನ್ 11ರಿಂದ ಫ್ರಾನ್ಸ್ ಪ್ರವಾಸದಲ್ಲಿದ್ದು, ಮೂರು ಪ್ರಮುಖ ಜಾಗತಿಕ ವೇದಿಕೆಗಳಾದ ವಿವಾ ಟೆಕ್ನಾಲಜಿ (ವಿವಾಟೆಕ್), ಪ್ಯಾರಿಸ್ ಏರ್ ಫೋರಮ್ ಮತ್ತು ಪ್ಯಾರಿಸ್ ಏರ್ ಶೋಗಳಲ್ಲಿ ಭಾಗವಹಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲಿಂದ ತಾವು ಅಮೆರಿಕದಲ್ಲಿ ನಡೆಯುತ್ತಿರುವ ಬಯೋ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಹೋಗಬೇಕಾಗಿತ್ತು. ಆದರೆ, ಅಲ್ಲಿಗೆ ಹೋಗುವ ಅಗತ್ಯ ಅನುಮತಿ ಸಿಗದೇ ಇರುವುದರಿಂದ ಹೋಗಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಈ ಬಗ್ಗೆ ಯಾವುದೇ ಸಾರ್ವಜನಿಕ ಹೇಳಿಕೆ ಕೊಡುವುದಿಲ್ಲ. ಬೆಂಗಳೂರಿಗೆ ವಾಪಸಾದ ಬಳಿಕ ಅನುಮತಿ ನಿರಾಕರಣೆ ಕುರಿತಾಗಿ ಕೇಂದ್ರ ಸರಕಾರದಿಂದ ಸ್ಪಷ್ಟನೆ ಕೋರುತ್ತೇನೆ. ತಮ್ಮ ಜೊತೆ ಬಂದಿದ್ದ ಐಎಎಸ್ ಅಧಿಕಾರಿಗಳಿಗೆ ತೆರಳಲು ಅನುಮತಿ ಸಿಕ್ಕಿದೆ. ಆದರೆ, ನನಗೆ ಅನುಮತಿ ನಿರಾಕರಣೆ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.





