ಚಿತ್ತಾಪುರ | ಭಾರೀ ಮಳೆಗೆ ಮನೆಗಳ ಗೋಡೆ ಕುಸಿತ: ಅಪಾರ ಹಾನಿ

ಕಲಬುರಗಿ : ಕಳೆದ ಕೆಲವು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಅದರಂತೆ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದಲ್ಲಿ ಎರಡು ಮನೆಗಳ ಗೋಡೆ ಕುಸಿದು ಬಿದ್ದು ಅಪಾರ ಹಾನಿಯನ್ನುಂಟಾಗಿದೆ.
ದಂಡೋತಿ ಗ್ರಾಮದ ಮುಹಮ್ಮದ್ ರಫೀಕ್ ರಸೂಲ್ ಸಾಬ್ ಡೋಂಗಾ ಹಾಗೂ ಪುಥಲಿ ಬೇಗಂ ಹುಸೇನ್ ಸಾಬ್ ಡೋಂಗಾ ಎನ್ನುವವರ ಮನೆಯ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.
ಈ ವೇಳೆಯಲ್ಲಿ ಮಾತನಾಡಿದ ಕರವೇ ದಂಡೋತಿ ಗ್ರಾಮ ಘಟಕ ಅಧ್ಯಕ್ಷ ಮೈನೋದ್ದೀನ್, ಕಳೆದ ಕೆಲವು ದಿನಗಳಿಂದ ಬಿಟ್ಟು ಬೀಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ದಂಡೋತಿ ಗ್ರಾಮದಲ್ಲಿ ಎರಡು ಮನೆಗಳ ಗೋಡೆ ಕುಸಿದು ಬಿದ್ದಿದೆ. ಮನೆಯಲ್ಲಿನ ಅಡುಗೆ ಸಾಮಾನು, ಗ್ಯಾಸ್, ರೆಫ್ರಿಜರೇಟರ್ ಸೇರಿದಂತೆ ಒಟ್ಟು 3 ಲಕ್ಷ ರೂ.ಯಷ್ಟು ಹಾನಿ ಸಂಭವಿಸಿದೆ. ಕೂಡಲೇ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸರಕಾರದಿಂದ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





