ಅಂಗನವಾಡಿ ನೌಕರರ ಹಕ್ಕುಗಳಿಗಾಗಿ ಸಂಘಟನೆ ಅಗತ್ಯ: ಹೆಚ್.ಎಸ್. ಸುನಂದ

ಕಲಬುರಗಿ : ಅಂಗನವಾಡಿ ನೌಕರರ ಸಮಸ್ಯೆಗಳ ಪರಿಹಾರ ಹಾಗೂ ಹಕ್ಕುಗಳ ರಕ್ಷಣೆಗಾಗಿ ಸಂಘಟನೆ ಬಲಿಷ್ಠವಾಗಬೇಕು ಮತ್ತು ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಸುನಂದ ಹೇಳಿದರು.
ನಗರದ ಕನ್ನಡ ಭವನದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ವಿಭಾಗವಾರು ಸಂಘಟನಾ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಂಗನವಾಡಿ ನೌಕರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟನೆ ಇನ್ನಷ್ಟು ಸದೃಢಗೊಳ್ಳಬೇಕು. ಸರ್ಕಾರದ ಮಟ್ಟದಲ್ಲಿ ನೌಕರರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘಟಿತ ಹೋರಾಟವೇ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಲಬುರಗಿ, ರಾಯಚೂರು, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳ 21 ತಾಲೂಕುಗಳಿಂದ ಆಗಮಿಸಿದ್ದ ಸುಮಾರು 210 ಮಂದಿ ಮಹಿಳಾ ನಾಯಕಿಯರು ಮತ್ತು ಪದಾಧಿಕಾರಿಗಳು ಕಾರ್ಯಗಾರದಲ್ಲಿ ಭಾಗವಹಿಸಿ ಸಂಘಟನಾ ಬಲವರ್ಧನೆ, ಸದಸ್ಯತ್ವ ವೃದ್ಧಿ ಹಾಗೂ ನೌಕರರ ಹಕ್ಕುಗಳ ಕುರಿತಂತೆ ಚರ್ಚಿಸಿದರು.
ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯ ಖಜಾಂಚಿ ಜಿ. ಕಮಲಾ, ರಾಜ್ಯ ಕಾರ್ಯಾಧ್ಯಕ್ಷೆ ಶಾಂತಾ ಘಂಟಿ, ರಾಜ್ಯ ಉಪಾಧ್ಯಕ್ಷೆಯರಾದ ಗೌರಮ್ಮ ಪಾಟೀಲ್, ಶ್ರೀದೇವಿ ಚುಡೆ, ಹೆಚ್. ಪದ್ಮ (ರಾಯಚೂರು), ಅನಿತಾ ಹಿರೇಮಠ (ಯಾದಗಿರಿ) ಸೇರಿದಂತೆ ಇತರರು ಉಪಸ್ಥಿತರಿದ್ದರು.






