ಪಠ್ಯದ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ: ವಿದ್ಯಾರ್ಥಿಗಳಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಕಿವಿಮಾತು

ಕಲಬುರಗಿ: ಪ್ರತಿಯೊಬ್ಬ ವಿದ್ಯಾರ್ಥಿಗಳು ಪಠ್ಯದ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು ಹೇಳಿದರು.
ಶುಕ್ರವಾರದಂದು ವಿವೇಕನಾಂದ ವಿದ್ಯಾನಿಕೇತನ ಶಾಲೆಯ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿವೇಕಾನಂದ ವಿದ್ಯಾನಿಕೇತನ ಶಾಲೆ, ಕರುಣೇಶ್ವರ ನಗರ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಚಿಗುರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಹಾಗೂ ವಿದ್ಯಾರ್ಥಿಗಳಿಗೆ ವಿಭಿನ್ನವಾದ ಕಲೆ ಇರುತ್ತದೆ, ಅವರ ಪ್ರತಿಭೆಗಳನ್ನು ಗುರುತಿಸಲು ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು.
ಇಂದಿನ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಕ್ಷಣಾರ್ಧದಲ್ಲಿ ಮಾಹಿತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೋಡುವ ಕಾರಣದಿಂದ ತಮ್ಮ ಪ್ರತಿಭೆಗೆ ತಕ್ಕಂತೆ ಹೆಚ್ಚಿನ ಸಾಧನೆ ಮಾಡಿ ಪೋಷಕರಿಗೆ ತಾವು ಕಲಿತ ವಿದ್ಯಾ ಸಂಸ್ಥೆಗೆ ಗೌರ ತರುವಂತಹ ಸಾಧನೆ ಮಾಡಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾದ ಜಗದೀಶ್ವರಿ ನಾಸಿ, ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ, 8 ರಿಂದ 14 ವರ್ಷದೊಳಗಿನ ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸಲು, ವಿದ್ಯಾರ್ಥಿಗಳ ಕಲೆಯನ್ನು ಅನಾವರಣ ಮಾಡಲು ಮತ್ತು ವಿವೇಕಾನಂದ ವಿದ್ಯಾನಿಕೇತನ ಶಾಲೆಯ ಪ್ರಾಂಶುಪಾಲರು ನೀಡಿದ ಸಹಕಾರದಿಂದ ಇಂತಹ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಯಿತು ಎಂದರು.
ಕಾರ್ಯಕ್ರಮದದಲ್ಲಿ ವಿದ್ಯಾರ್ಥಿಗಳಿಂದ ಸುಗಮ ಸಂಗೀತ, ತಬಲ ವ್ಯಾದ್ಯವೃಂದ, ಜಾನಪದ ಗೀತೆಗಳು, ಸಮೂಹ ನೃತ್ಯ, ನಾಟಕ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.
ವೇದಿಕೆ ಮೇಲೆ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುವರ್ಣ ಭಗವತಿ, ವಿವೇಕಾನಂದ ವಿದ್ಯಾನಿಕೇತನ ಶಾಲೆಯ ಪ್ರಾಂಶುಪಾಲರಾದ ಸಿದ್ದಪ್ಪ ಭಗವತಿ, ವಿವೇಕಾನಂದ ವಿದ್ಯಾನಿಕೇತನ ಶಾಲೆಯ ಎಲ್ಲಾ ಶಿಕ್ಷಕರು, ಕಲಾತಂಡದವರು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಮತ್ತು ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.







