ಕಲಬುರಗಿ : ಧಾರಾಕಾರ ಮಳೆಗೆ ಗೋಡೆ ಕುಸಿದು ಬಾಲಕಿ ಮೃತ್ಯು; ನಾಲ್ವರು ಮಕ್ಕಳಿಗೆ ಗಂಭೀರ ಗಾಯ

ಕಲಬುರಗಿ: ಧಾರಾಕಾರ ಮಳೆ ಸುರಿದ ಪರಿಣಾಮ ಗೋಡೆ ಕುಸಿದು ಬಾಲಕಿಯೊಬ್ಬಳು ಮೃತಪಟ್ಟಿದ್ದು, ನಾಲ್ವರು ಮಕ್ಕಳಿಗೆ ಗಂಭೀರ ಗಾಯಗೊಂಡಿರುವ ಘಟನೆ ಯಡ್ರಾಮಿ ಪಟ್ಟಣದಲ್ಲಿ ಸೋಮವಾರ ತಡರಾತ್ರಿ 2.30ರ ವೇಳೆಗೆ ನಡೆದಿದೆ.
ಯಡ್ರಾಮಿ ಪಟ್ಟಣದ ಸಾನಿಯಾ ತಾಂಬೋಳಿ (16) ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟ ಬಾಲಕಿಯ ಸಹೋದರಿ, ಸಹೋದರರಾದ ಮೆಹಬೂಬ್ ತಾಂಬೋಲಿ, ನಿಶಾದ್ ತಾಂಬೋಲಿ, ಆಯಿಷಾ ತಾಂಬೋಲಿ ಹಾಗೂ ರಂಝಾನಬೀ ತಾಂಬೋಲಿ ಕಟ್ಟಡದ ಅವಶೇಷಗಳಲ್ಲಿ ಸಿಲುಕಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಭಾರೀ ಮಳೆಯಿಂದಾಗಿ ರಾತ್ರಿ ಗೋಡೆ ಕುಸಿದಿದ್ದು, ಅದರಲ್ಲಿ ಐವರು ಮಕ್ಕಳು ಸಿಲುಕಿದ್ದರು. ಕೂಡಲೇ ನಾಲ್ವರನ್ನು ಎಳೆದು ಹೊರ ತೆಗೆಯಲಾಗಿದ್ದು, ಸಾನಿಯಾಳನ್ನು ಹೊರ ತೆಗೆಯಲು ತಡವಾಯಿತು. ಗಂಭೀರ ಗಾಯಗೊಂಡಿದ್ದ ಸಾನಿಯಾಳನ್ನು ಕೂಡಲೇ ಯಡ್ರಾಮಿ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಯಾವುದೇ ವೈದ್ಯರಿಲ್ಲದೆ ಕಾರಣ ಆಕೆ ಮೃತಪಟ್ಟಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.
ಮೃತ ಬಾಲಕಿ ಕುಟುಂಬಕ್ಕೆ 25 ಲಕ್ಷ ಪರಿಹಾರಕ್ಕೆ ಆಗ್ರಹ:
ಗಂಭೀರ ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಕೊಡದೆ ಆಕೆ ಮೃತಪಟ್ಟಿದ್ದಾಳೆ. ಇದೊಂದು ತಾಲ್ಲೂಕು ಆಗಿದ್ದರೂ ಸಾರ್ವಜನಿಕರಿಗೆ ಉತ್ತಮ ಸೌಲಭ್ಯಗಳಿಲ್ಲ. ಬಡ ವರ್ಗದ ಕುಟುಂಬದ ಮಗಳು ಅನ್ಯಾಯವಾಗಿ ಸಾವಿಗೀಡಾಗಿದ್ದಾಳೆ. ಶಾಸಕರು, ಜಿಲ್ಲೆಯ ಹಾಗೂ ತಾಲ್ಲೂಕು ಅಧಿಕಾರಿಗಳು ಕೂಡಲೇ ನೀಡಿ, ಕುಟುಂಬಕ್ಕೆ ಸಾಂತ್ವನ ನೀಡಬೇಕು, ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಣೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ತಾಲ್ಲೂಕು ಆಸ್ಪತ್ರೆ ಎದುರು ಸ್ಥಳೀಯರು ಬಾಲಕಿಯ ಮೃತದೇಹ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಅಮೀರ್ ಪಟೇಲ್ ಚಿಂಚೋಳಿ, ಲಾಡ್ಲೆಸಾಬ್ ಮನಿಯಾರ್, ಶಬ್ಬೀ ಉಲ್ಲಾ ದಖನಿ, ವಾಹೀದ್ ಖುರೈಷಿ, ಇಸ್ಮಾಯಿಲ್ ಖುರೈಷಿ, ವಿಶ್ವನಾಥ್ ಪಾಟೀಲ್, ರಿಯಾಜ್ ಚೌಧರಿ, ಇಬ್ರಾಹಿಂ ಚೌಧರಿ, ಫತ್ರುದ್ದೀನ್ ತಾಂಬೋಲಿ, ರಹೀಮ್ ಪಾಶಾ ಹೊಸಮನಿ ಸೇರಿದಂತೆ ಮತ್ತಿತರರು ಇದ್ದರು.







