ಸಂದರ್ಶಕರ ಸೋಗಿನಲ್ಲಿ ಆಗಮಿಸಿದ ಕರ್ನಿ ಸೇನಾ ಮುಖ್ಯಸ್ಥನ ಹಂತಕರು
ಹೊಸದಿಲ್ಲಿ: ರಾಷ್ಟ್ರೀಯ ರಜಪೂತ ಕರ್ನಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೇಡಿಯವರನ್ನು ಹತ್ಯೆ ಮಾಡಲು ಹಂತಕರು ಅವರ ನಿವಾಸಕ್ಕೆ ಸಂದರ್ಶಕರ ಸೋಗಿನಲ್ಲಿ ಆಗಮಿಸಿದ್ದರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈ ಮಧ್ಯೆ ಸುಖದೇವ್ ಹತ್ಯೆಯನ್ನು ಖಂಡಿಸಿ ಇಂದು ರಾಜಸ್ಥಾನ ಬಂದ್ ಗೆ ಕರೆ ನೀಡಲಾಗಿದೆ.
ಸುಖದೇವ್ ಅವರನ್ನು ತೀರಾ ಸನಿಹದಿಂದ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಕುಖ್ಯಾತ ರೌಡಿ ಲಾರೆನ್ಸ್ ಬಿಷ್ಣೋಯಿ ತಂಡದ ಕೃತ್ಯ ಇದು ಎಂದು ಹೇಳಲಾಗುತ್ತಿದ್ದು, ಜೈಪುರದ ಶ್ಯಾಮ್ ನಗರದಲ್ಲಿರುವ ಸುಖದೇವ್ ಅವರ ಕಚೇರಿ ಮತ್ತು ನಿವಾಸಕ್ಕೆ ಸಂದರ್ಶಕರಾಗಿ ಆಗಮಿಸಿದ ಹಂತಕರು ಈ ಕೃತ್ಯ ಎಸಗಿದ್ದಾರೆ.
ಹಂತಕರು ಮನೆಯ ಹೊರಗೆ ಗೋಗಮೇಡಿಯವರ ಭದ್ರತಾ ಸಹಾಯಕ, ಆತನ ಸಹಚರ ಹಾಗೂ ಪಕ್ಕದಲ್ಲಿ ಹಾದುಹೋಗುತ್ತಿದ್ದ ದ್ವಿಚಕ್ರವಾಹನ ಸವಾರನ ಮೇಲೂ ಗುಂಡು ಹಾರಿಸಿದ್ದು, ಕೃತ್ಯ ಎಸಗಿದ ಬಳಿಕ ತಕ್ಷಣ ಪರಾರಿಯಾಗಲು ಈ ದ್ವಿಚಕ್ರ ವಾಹನವನ್ನು ಕಸಿದುಕೊಂಡಿದ್ದರು ಎಂದು ದಕ್ಷಿಣ ವಲಯ ಡಿಸಿಪಿ ಯೋಗೇಶ್ ಗೋಯಲ್ ವಿವರಿಸಿದ್ದಾರೆ.
'ಪದ್ಮಾವತ್' ಚಿತ್ರದ ವಿರುದ್ಧ 2017ರಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದ ರಜಪೂತ ಕರ್ನಿ ಸೇನೆಯ ಮುಖ್ಯಸ್ಥರಾಗಿದ್ದ ಗೋಗಮೇಡಿ (40) ತಮ್ಮ ಜೀವಕ್ಕೆ ಅಪಾಯ ಇರುವ ಬಗ್ಗೆ ವರದಿ ಮಾಡಿದ್ದರು. ಸಂದರ್ಶಕರು ಭೇಟಿಗೆ ಬರುವ ಮುನ್ನ ಕಡ್ಡಾಯ ಭದ್ರತಾ ತಪಾಸಣೆಗೆ ಒಳಗಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.
ನವೀನ್ ಎಂಬಾತ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಗೋಗಮೇಡಿಯವರ ನಿವಾಸಕ್ಕೆ ಹಂತಕರನ್ನು ಕರೆತಂದಿದ್ದ ಎನ್ನಲಾಗಿದ್ದು, ಈತ ಹಂತಕರ ಸಹಚರ ಇರಬೇಕು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಭದ್ರತಾ ಕಾವಲುಗಾರರು ಗೇಟಿನಲ್ಲಿ ಕಾರನ್ನು ತಡೆದು, ಸಂದರ್ಶಕರನ್ನು ಒಳಕ್ಕೆ ಪ್ರವೇಶಿಸಲು ಅವಕಾಶ ನಿರಾಕರಿಸಿದರು. ಆಗ ಶೇಖಾವತ್ ಗೋಗಮೇಡಿಯವರಿಗೆ ಕರೆ ಮಾಡಿದ ಬಳಿಕ ಅವರು ನೀಡಿದ ಸೂಚನೆಯ ಮೇರೆಗೆ ಮೂವರನ್ನು ಕೊಠಡಿಗೆ ಕಳುಹಿಸಲಾಯಿತು ಎಂದು ತಿಳಿದು ಬಂದಿದೆ.
ಮೊದಲು ಹಂತಕರು ಗೋಗಮೇಡಿಯವರ ಎದೆಗೆ ಗುಂಡು ಹೊಡೆದಿದ್ದು, ಆಗ ಅವರು ಕೆಳಕ್ಕೆ ಬಿದ್ದಿದ್ದಾರೆ. ಶೇಖಾವತ್ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ದಾಳಿಕೋರರು ಅವರನ್ನು ಪಕ್ಕಕ್ಕೆ ತಳ್ಳಿದ್ದಾರೆ. ಕೆಲ ಸೆಕೆಂಡ್ ಗಳ ಬಳಿಕ ಶೇಖಾವತ್ ಗೋಗಮೇಡಿಯವರನ್ನು ಪರೀಕ್ಷಿಸುತ್ತಿದ್ದಾಗ ಒಬ್ಬ ಹಂತಕ ಅವರತ್ತ ಗುಂಡು ಹಾರಿಸಿದ್ದಾರೆ. ಈ ಹಂತದಲ್ಲಿ ಎರಡನೇ ದಾಳಿಕೋರ ಗೋಗಮೇಡಿ ಮೇಲೆ ಮತ್ತಷ್ಟು ಗುಂಡು ಹಾರಿಸಿದ್ದು, ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ.