ಹಿಂದಿನ ಸರಕಾರ ಅಕಾಡೆಮಿಗಳಿಗೆ ಅಧ್ಯಕ್ಷರನ್ನು ಸದಸ್ಯರನ್ನು ನೇಮಿಸಲಿಲ್ಲ, ಪ್ರಶಸ್ತಿಗಳನ್ನು ನೀಡಲಿಲ್ಲ: ಸಚಿವ ತಂಗಡಗಿ

ಕೊಪ್ಪಳ: ಹಿಂದಿನ ಸರಕಾರ ಅಕಾಡೆಮಿಗಳಿಗೆ ಅಧ್ಯಕ್ಷರನ್ನು ಸದಸ್ಯರನ್ನು ನೇಮಿಸಲಿಲ್ಲ, ಪ್ರಶಸ್ತಿಗಳನ್ನು ನೀಡಲಿಲ್ಲ. ನಮ್ಮ ಸರಕಾರ ಈ ಎಲ್ಲ ಕೆಲಸಗಳನ್ನು ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಬುಧವಾರ ಕೊಪ್ಪಳದಲ್ಲಿ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಪ್ರಶಸ್ತಿಗಳನ್ನು ನೀಡಲು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಅನುದಾನ ನೀಡುತ್ತಿದ್ದಾರೆ, ನಾಡು-ನುಡಿಯ ಶ್ರೇಯೋಭಿವೃದ್ಧಿಗೆ ಶ್ರಮಿಸಲು ಸರಕಾರ ಸದಾ ಸಿದ್ಧ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ ಸಮಾರಂಭಗಳು ರಾಜಧಾನಿಗೆ ಸೀಮಿತ ಮಾಡುವುದು ಬೇಡ ಎಂದು ತೀರ್ಮಾನಿಸಿ ಕೊಪ್ಪಳದಲ್ಲಿ ಮಾಡುತ್ತಿದ್ದೇವೆ. ವಿವಿಧ ಅಕಾಡೆಮಿ, ಪ್ರಾಧಿಕಾರಗಳಿಗೆ ಈ ಭಾಗದ ತಜ್ಞರನ್ನು ನೇಮಿಸಲಾಗುತ್ತಿದೆ. ಪ್ರಶಸ್ತಿಗಳನ್ನು ಈ ಭಾಗದ ಅರ್ಹರಿಗೆ ನೀಡುವ ಕೆಲಸವನ್ನು ನಮ್ಮ ಸರಕಾರ ಮಾಡುತ್ತಿದೆ ಎಂದರು.
ಕರ್ನಾಟಕ ತೇರು ನಾಡಿನಾದ್ಯಂತ ಸಂಚರಿಸಿ ಯಶಸ್ವಿಯಾಗಿದೆ. ಇದರ ಶ್ರೇಯಸ್ಸು ಪ್ರಾಧಿಕಾರದ, ಅಕಾಡೆಮಿಯ ಎಲ್ಲ ಗಣ್ಯಮಾನರಿಗೆ ಸಲ್ಲುತ್ತದೆ. ಜನವರಿ ೨೭ರಂದು ಬೆಂಗಳೂರಿನಲ್ಲಿ ನಾಡದೇವಿ ಭುವನೇಶ್ವರಿ ಪುತ್ಥಳಿ ಪ್ರತಿಷ್ಠಾಪನೆ ನಡೆಯುತ್ತಿರುವುದು ಸಂತಸ ತಂದಿದೆ. ಕನ್ನಡ ಉಳಿಯಲಿ, ಬೆಳೆಯಲಿ ಎಂದು ಹಾರೈಸಿದರು.
ಅಕಾಡೆಮಿಯ ರಿಜಿಸ್ಡ್ರಾರ್ ಕರಿಯಪ್ಪ ಸ್ವಾಗತಿಸಿದರು. ಅಕಾಡೆಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಪ್ರಾಸ್ತಾವಿಕ ಮಾತನಾಡಿದರು. ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಭಿನಂದನಾ ನುಡಿಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ವಿವಿಯ ಕುಲಪತಿ ಡಾ.ಬಿ.ಕೆ.ರವಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಜಂಟೀ ನಿರ್ದೇಶಕ ಬಸವರಾಜ ಹೂಗಾರ, ಸಹಾಯಕ ನಿರ್ದೇಶಕ ಕೊಟ್ರೇಶ್, ಅಕಾಡೆಮಿಯ ಸದಸ್ಯ ಅಜ್ಮೀರ ನಂದಾಪುರ ಸೇರಿದಂತೆ ಅನೇಕ ಗಣ್ಯಮಾನ್ಯರು ಇದ್ದರು.







