ಮಂಡ್ಯ : ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ಬಾವುಟ, ಫ್ಲೆಕ್ಸ್ ನಿಷೇಧಿಸಲು ಮನವಿ

ಮಂಡ್ಯ: ಜಿಲ್ಲೆಯ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗುವ ದಿನಾಂಕದವರೆಗೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಮತ್ತು ಇನ್ಯಾವುದೇ ಧರ್ಮದ ಧಾರ್ಮಿಕ ಬಾವುಟ, ಬಂಟಿಂಗ್ಸ್, ಕಟೌಟ್ಸ್, ಫ್ಲೆಕ್ಸ್ ಹಾಕದಂತೆ ನಿಷೇಧಿಸಿ ತಡೆಯಾಜ್ಞೆ ನೀಡಬೇಕೆಂದು ಸಿಆರ್ ಪಿಸಿ ಕಲಂ 133, 135, 142, 144ರಡಿ ಜಿಲ್ಲಾ ಕಾರ್ಯ ನಿರ್ವಾಹಕ ಮ್ಯಾಜಿಸ್ಟ್ರೇಟ್ (ಜಿಲ್ಲಾ ದಂಡಾಧಿಕಾರಿಗಳ) ನ್ಯಾಯಾಲಯದಲ್ಲಿ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್‍ನ ಜಿಲ್ಲಾ ಘಟಕ ಪ್ರಕರಣ ದಾಖಲಿಸಿದೆ.
ಈಗಾಗಲೇ ಹಾಕಿರುವ ಧಾರ್ಮಿಕ ಬಾವುಟ, ಬಂಟಿಂಗ್ಸ್, ಕಟೌಟ್ಸ್, ಫ್ಲೆಕ್ಸ್ ಗಳನ್ನು ಸಿಆರ್ ಪಿಸಿ ಕಲಂ 133ರಡಿ ತೆರವುಗೊಳಿಸಬೇಕು ಮತ್ತು ರಾಜಕೀಯ ಪ್ರಾಯೋಜಿತ ಧಾರ್ಮಿಕ ಸಭೆ ಸಮಾರಂಭಗಳನ್ನು ನಿಷೇಧಿಸಬೇಕು. ಸಿಆರ್ ಪಿಸಿ ಕಲಂ 142 ಮತ್ತು 144ರಡಿ ಕೋಮು ಸಾಮರಸ್ಯವನ್ನು ಹಾಳು ಗೆಡವುವ ಕುಖ್ಯಾತಿ ಹೊಂದಿರುವ, ಅಂತಹ ಪೂರ್ವ ಕ್ರಿಮಿನಲ್ ಹಿನ್ನೆಲೆಯುಳ್ಳ ಭಾಷಣಕಾರರನ್ನು ಜಿಲ್ಲೆಯ ಗಡಿ ಒಳಗೆ ನುಸುಳದಂತೆ ಪ್ರತಿಬಂಧಿಸಿ ತಡೆಯಾಜ್ಞೆ ನೀಡಿ ಆದೇಶ ಮಾಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ಅರ್ಜಿ ಸ್ವೀಕರಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟರ್ ಈ ಸಂಬಂಧ ಕ್ಷಿಪ್ರ ಸೂಕ್ತ ಆದೇಶ ಮಾಡುವುದಾಗಿ ವಕೀಲರಿಗೆ ಮತ್ತು ಅರ್ಜಿದಾರರಿಗೆ ಭರವಸೆ ನೀಡಿದೆ. ಅಖಿಲ ಭಾರತ ವಕೀಲರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಚಂದನ್‍ಕುಮಾರ್ ಮತ್ತು ಅಖಿಲ ಭಾರತ ಕಾನೂನು ವಿದ್ಯಾರ್ಥಿ ಸಂಘಟನೆಯ ಆಕಾಶ್ ಹಾಗೂ ಜಿಲ್ಲಾ ಪ್ರಗತಿಪರ ಒಕ್ಕಲಿಗರ ವೇದಿಕೆಯ ಅಧ್ಯಕ್ಷ ಸಾಗರ್ ಈ ಪ್ರಕರಣದ ಅರ್ಜಿದಾರರಾಗಿದ್ದಾರೆ.
ಅರ್ಜಿದಾರರ ಪರವಾಗಿ ಆಲ್ ಇಂಡಿಯ ಲಾಯರ್ಸ್ ಯೂನಿಯನ್ ನ ಅಧ್ಯಕ್ಷ ಮತ್ತು ನ್ಯಾಯವಾದಿ ಬಿ.ಟಿ.ವಿಶ್ವನಾಥ್ ಮತ್ತು ನ್ಯಾಯವಾದಿ ಪಲ್ಲವಿ ಮತ್ತು ಚೇತನ್ ಆತಗೂರು ವಕಾಲತ್ತು ಸಲ್ಲಿಸಿದ್ದಾರೆ.







