ಚಕ್ರವರ್ತಿ ಸೂಲಿಬೆಲೆ ಮಂಡ್ಯ ಪ್ರವೇಶ ನಿರ್ಬಂಧಕ್ಕೆ ಒತ್ತಾಯ

ಮಂಡ್ಯ: ತಮ್ಮ ಭಾಷದ ಮೂಲಕ ಕೋಮು ಭಾವನೆ ಬಿತ್ತಿ ಜನಸಾಮಾನ್ಯರ ಸಾಮರಸ್ಯದ ಬದುಕಿಗೆ ಧಕ್ಕೆ ತರುತ್ತಿರುವ ಚಕ್ರವರ್ತಿ ಸೂಲಿಬೆಲೆ ಮಂಡ್ಯ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹಾಕಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿ ಪ್ರೊ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ಮಂಡ್ಯ ಜಿಲ್ಲೆ ಸ್ವಾಭಿಮಾನ, ಸ್ವಾಮರಸ್ಯ ಮತ್ತು ಪ್ರೀತಿಗೆ ಹೆಸರುವಾಸಿ . ಕೆಲ ದಿನಗಳ ಹಿಂದೆ ಧ್ವಜದ ವಿಚಾರವಾಗಿ ಕೆಲವು ಕೋಮುವಾದಿಗಳು, ಜಾತಿವಾದಿಗಳು ಜಿಲ್ಲೆಯಲ್ಲಿ ಶಾಂತಿ ಕದಡಲು ಮುಂದಾಗಿದ್ದರು. ಆದರೆ, ಜಿಲ್ಲೆಯಲ್ಲಿ ದಕ್ಷ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದರಿಂದ ಕೋಮುವಾದಿಗಳ ಆಟ ನಡೆಯಲಿಲ್ಲ ಎಂಬುದನ್ನು ಅರಿಯಬೇಕು ಎಂದು ಅವರು ಹೇಳಿದರು.
ಇದೀಗ ಮತ್ತದೆ ಕೋಮುಭಾವನೆ ಕೆರಳಿಸಿ ಶಾಂತಿ ಸುವ್ಯವಸ್ಥೆ ಹಾಳು ಮಾಡುವ ಕೆಲಸ ಕೋಮುವಾದಿಗಳಿಂದ ನಡೆಯುತ್ತಿದ್ದು, ಮಂಡ್ಯದಲ್ಲಿ ಮಾ.16ರಂದು ಚಕ್ರವರ್ತಿ ಸೂಲಿಬೆಲೆ ಭಾಷಣ ಆಯೋಜಿಸಲಾಗಿದೆ. ಸೂಲಿಬೆಲೆಯ ಪ್ರಚೋದನಾಕಾರಿ ಭಾಷಣ ಜಿಲ್ಲೆಯ ಜನರ ಸೌಹಾರ್ದಯುತ ಮತ್ತು ಸಾಮರಸ್ಯ ಬದುಕಿಗೆ ಧಕ್ಕೆ ತರಲಿದೆ. ಆದ್ದರಿಂದ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.
ಸಮಿತಿಯ ಮುಖಂಡರಾದ ಶಿವರಾಜ್ ಮರಳಿಗ, ಮದ್ದೂರು ಶ್ರೀನಿವಾಸ್, ತಿಮ್ಮೇಶ್, ಗುರುಲಿಂಗಯ್ಯ, ಸವಿತಾ, ರವಿ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







