ಮಂಡ್ಯ | ಚೀರನಹಳ್ಳಿ ದೇವಸ್ಥಾನಕ್ಕೆ ದಲಿತರ ಪ್ರವೇಶ : ವಿವಾದ ಸೌಹಾರ್ದಯುತವಾಗಿ ಬಗೆಹರಿಸಿಕೊಂಡ ಗ್ರಾಮಸ್ಥರು

ಮಂಡ್ಯ: 800 ವರ್ಷಗಳ ಇತಿಹಾಸ ಇರುವ ತಾಲೂಕಿನ ಚೀರನಹಳ್ಳಿ ಗ್ರಾಮದ ಬೀರೇಶ್ವರ ದೇವಾಲಯಕ್ಕೆ ದಲಿತರ ಪ್ರವೇಶ ವಿವಾದ ಸೌಹಾರ್ದಯುತವಾಗಿ ಬಗೆಹರಿದಿದ್ದು, ಶುಕ್ರವಾರ ಸಂಜೆ ದಲಿತರು ದೇವಾಲಯ ಪ್ರವೇಶ ಮಾಡಿ ಪೂಜೆ ಸಲ್ಲಿಸಿದರು.
ಅಸ್ಪೃಶ್ಯತೆ ಕಾರಣದಿಂದಾಗಿ ದೇವಾಲಯದಿಂದ ದೂರ ಉಳಿದಿದ್ದ ದಲಿತರು , ಸರಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಬೀರೇಶ್ವರ ದೇವಾಲಯಕ್ಕೆ ಪ್ರವೇಶ ಮಾಡಿ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಿ ಸಂಭ್ರಮಿಸಿದರು.
ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಲಕ್ಷ್ಮಣ್ ಚೀರನಹಳ್ಳಿ, ದಸಂಸ ಮುಖಂಡ ಎಂ.ವಿ.ಕೃಷ್ಣ, ಕರ್ನಾಟಕ ರಕ್ಷಣ ವೇದಿಕೆಯ ಎಚ್.ಡಿ.ಜಯರಾಂ, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಟಿ.ಅರವಿಂದ ಕುಮಾರ್, ಗ್ರಾಮ ಆಡಳಿತಾಧಿಕಾರಿ ರಾಜು, ಹಳುವಾಡಿ ಪಿಡಿಒ ಚಿಕ್ಕತಾಯಮ್ಮ ಹಾಗೂ ಮುಜರಾಯಿ ಇಲಾಖೆಯ ಮಂಜೇಶ್ ಅವರ ಸಮ್ಮುಖದಲ್ಲಿ ದಲಿತರು ದೇವಾಲಯ ಪ್ರವೇಶ ಮಾಡಿದರು.
ರಾಜಸ್ವ ನಿರೀಕ್ಷಕ ಟಿ.ಅರವಿಂದ ಕುಮಾರ್ ಮಾತನಾಡಿ, ಈ ದೇವಾಲಯಕ್ಕೆ ಎಲ್ಲ ಜಾತಿ, ಜನಾಂಗದ ಜನರಿಗೆ ಮುಕ್ತವಾದ ಅವಕಾಶವಿದೆ. ಇಲ್ಲಿ ಯಾರೇ ಆಗಲಿ ಭೇದ ಭಾವ ಮಾಡಿದರೆ, ಅದು ಸರಕಾರ ಕಾನೂನುಗಳಿಗೆ ವಿರುದ್ದವಾಗುತ್ತದೆ. ಗ್ರಾಮದ ಎಲ್ಲಾ ಸಮುದಾಯಗಳ ಜನರು ಸಹಬಾಳ್ವೆಯಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
“ಪ್ರತಿಯೊಬ್ಬರಿಗೆ ಸಮಾನವಾದ ಹಕ್ಕುಗಳನ್ನು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನವು ಕಲ್ಪಿಸಿದೆ. ಹಾಗಾಗಿ ತಾರತಮ್ಯ ಮಾಡುವುದು ಅಪರಾಧವಾಗುತ್ತದೆ. ಯಾವುದೇ ಸಂಘರ್ಷಕ್ಕೆ ಅವಕಾಶ ನೀಡದಂತೆ ಗ್ರಾಮದ ಎಲ್ಲ ಸಮುದಾಯದ ಮುಖಂಡರು ಚರ್ಚಿಸಿ ದಲಿತರು ದೇವಾಲಯ ಪ್ರವೇಶ ಮಾಡಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿರುವುದು ಜಿಲ್ಲೆಗೆ ಮಾದರಿಯಾಗಿದೆ.”
ಲಕ್ಷ್ಮಣ್ ಚೀರನಹಳ್ಳಿ, ವಕೀಲ, ಸಾಮಾಜಿಕ ಕಾರ್ಯಕರ್ತ.







