ಕೇಂದ್ರ ಬಜೆಟ್ 2025 | ಕರ್ನಾಟಕಕ್ಕೆ ದೊಡ್ಡ ಅನ್ಯಾಯ ಮಾಡಿರುವ ಬಜೆಟ್ : ಸಿಎಂ ಸಿದ್ದರಾಮಯ್ಯ ಆಕ್ರೋಶ

ಸಿಎಂ ಸಿದ್ದರಾಮಯ್ಯ
ಮೈಸೂರು : ಕೇಂದ್ರದ ಬಿಜೆಪಿಯವರದ್ದು ಮನುಸ್ಮೃತಿ ಮನಸ್ಥಿತಿ. ಮನುಸ್ಮೃತಿಯ ವಿರುದ್ಧವಾಗಿರುವ ಎಲ್ಲಾ ರಾಜ್ಯಗಳಿಗೂ ಈ ಬಾರಿಯ ಬಜೆಟ್ನಲ್ಲಿ ಅನ್ಯಾಯ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೇಂದ್ರದ ಬಜೆಟ್ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ನಗರದ ಟಿ.ಕೆ.ಲೇಔಟ್ ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ʼಕೇಂದ್ರ ಸರಕಾರ ಮಂಡಿಸಿರುವ 2025-26 ಸಾಲಿನ ಬಜೆಟ್ ನಿರಾಶದಾಯಕ, ಆರ್ಥಿಕತೆ ಬೆಳವಣಿಗೆಗೆ ಪೂರಕವಲ್ಲದ, ದೂರದೃಷ್ಟಿ ಇಲ್ಲದ, ಕರ್ನಾಟಕಕ್ಕೆ ದೊಡ್ಡ ಅನ್ಯಾಯ ಮಾಡಿರುವ ಬಜೆಟ್ʼ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಟೀಕಿಸಿದರು.
ಕೇಂದ್ರದ ಬಜೆಟ್ ಈ ಬಾರಿಯೂ ಕರ್ನಾಟಕಕ್ಕೆ ಚೊಂಬನ್ನು ಕೊಡುವುದನ್ನು ಮುಂದುವರೆಸಿದೆ. ರಾಜ್ಯದಿಂದ ಆಯ್ಕೆಯಾಗಿರುವ ಸಂಸದರಾಗಲಿ, ಕೇಂದ್ರ ಸಚಿವರಾಗಲಿ ರಾಜ್ಯದ ಪರ ಮಾತನಾಡಿಲ್ಲ. ಅಲ್ಲದೆ, ಯಾವುದೇ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.
ಬಜೆಟ್ ಪೂರ್ವ ಚರ್ಚೆಗೆ ನಮ್ಮನ್ನು ಕರೆದಿದ್ದರು. ಸಚಿವ ಕೃಷ್ಣ ಭೈರೇಗೌಡ ಅವರನ್ನು ಕಳುಹಿಸಿದ್ದೆ. ನಾವು ಅನೇಕ ಬೇಡಿಕೆ ಇಟ್ಟಿದ್ದೆವು. ನಮ್ಮ ಬೇಡಿಕೆಗಳು ಬೇಡಿಕೆಗಳಾಗಿವೆಯೇ ಹೊರತು ಒಂದನ್ನು ಕೂಡ ಈಡೇರಿಸುವ ಕೆಲಸ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
55.46,365 ಕೋಟಿ ರೂ. ಬಜೆಟ್ ನಲ್ಲಿ ಕೇಂದ್ರ ಸರಕಾರ 15,68,936 ಕೋಟಿ ರೂ. ಸಾಲ ಮಾಡಿದೆ. ಬಡ್ಡಿ 12 ಲಕ್ಷ 70 ಸಾವಿರ ಕೋಟಿ ರೂ. ಕಟ್ಟುತ್ತಿದ್ದಾರೆ. ದೇಶದ ಮೇಲೆ ಸಾಲ 202 ಲಕ್ಷ ಕೋಟಿ ರೂ.ನಿಂದ 205 ಲಕ್ಷ ಕೋಟಿ ರೂ. ಇದೆ. ಫಿಸಿಕಲ್ ಡೆಫಿಸಿಟ್ ಶೇ.4.4, ರೆವಿನ್ಯೂ ಡೆಫೆಸಿಟ್ ಶೇ.1.5 ಇದೆ. ಒಟ್ಟಾರೆಯಾಗಿ ಕೇಂದ್ರದ ಬಜೆಟ್ ನಿರಾಶಾದಾಯಕ ಮತ್ತು ಕರ್ನಾಟಕಕ್ಕೆ ವಿರುದ್ಧವಾಗಿರುವ ಬಜೆಟ್ ಆಗಿದೆ ಎಂದು ಕುಟುಕಿದರು.
ಹೆಚ್ಚು ತೆರಿಗೆ ಕೊಡುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿ ಇದೆ. ಆದರೆ ಬಿಹಾರ ಮತ್ತು ಆಂಧ್ರ ಪ್ರದೇಶಕ್ಕೆ ಹೆಚ್ಚು ಅನುದಾನ ನೀಡಿದ್ದಾರೆ. ರಾಜಕೀಯ ಕಾರಣಕ್ಕೆ ಬಿಹಾರಕ್ಕೆ ಹೆಚ್ಚಿನ ಅನುದಾನ ಕೊಟ್ಟರೆ, ಕೇಂದ್ರದಲ್ಲಿ ಹೊಂದಾಣಿಕೆಯಾಗಿರುವುದರಿಂದ ಆಂಧ್ರಕ್ಕೆ ಹೆಚ್ಚು ಅನುದಾನ ಕೊಟ್ಟಿದ್ದಾರೆ. ಒಟ್ಟಾರೆ ಬಿಹಾರ ಮತ್ತು ಆಂಧ್ರಕ್ಕೆ ಹೆಚ್ಚು ಒತ್ತು ಕೊಟ್ಟಿರುವ ಬಜೆಟ್ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೇಕೆದಾಟು, ಭದ್ರಾ ಮೇಲ್ದಂಡೆ, ಮಹದಾಯಿ, ಕೃಷ್ಣ ಮೇಲ್ದಂಡೆ ಸೇರಿದಂತೆ ಯಾವ ನೀರಾವರಿ ಯೋಜನೆಗಳಿಗೂ ಹಣ ನೀಡಿಲ್ಲ. 2023-24 ಬಜೆಟ್ನಲ್ಲಿ ಭದ್ರ ಮೇಲ್ದಂಡೆ ಯೋಜನೆಗೆ ರೂ.5300 ಕೋಟಿ ಕೊಡುತ್ತೇವೆ ಎಂದು ಹೇಳಿದ್ದರು. ಇದೂವರೆಗೂ ಒಂದು ರೂಪಾಯಿ ಬಂದಿಲ್ಲ. ಈ ಬಜೆಟ್ ನಲ್ಲಿ ಅದು ಪ್ರಸ್ತಾಪ ಆಗಿಲ್ಲ. ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸುವಾಗ 5300 ಕೋಟಿ ಕೇಂದ್ರದಿಂದ ಬರುತ್ತದೆ. ಇದನ್ನು ರಾಷ್ಟ್ರೀಯ ಯೋಜನೆ ಮಾಡುತ್ತೇವೆ ಎಂದಿದ್ದರು. ಅದರ ಪ್ರಸ್ತಾಪ ಬಜೆಟ್ ನಲ್ಲಿ ಇಲ್ಲ ಎಂದು ಹೇಳಿದರು.
ರಾಯಚೂರಿನಲ್ಲಿ ಏಮ್ಸ್ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆ ಇಟ್ಟಿದ್ದೆವು. ಅದರ ಪ್ರಸ್ತಾಪ ಕೂಡ ಇಲ್ಲ. ರಾಜ್ಯದ ನಗರಗಳು, ಕುಡಿಯುವ ನೀರು ಯೋಜನೆ, ಗ್ರಾಮೀಣ ಪ್ರದೇಶ, ರೈಲ್ವೇ ಹೆದ್ದಾರಿ ಯೋಜನೆಗಳಿಗೆ ಅನುದಾನ ನೀಡುವಂತೆ ಕೋರಿದ್ದೆವು. ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಕ್ಕೆ ಮತ್ತು ರಾಜಕಾಲುವೆ ನಿರ್ಮಾಣ, ಬಿಸಿನೆಸ್ ಕಾರಿಡಾರ್ ನಿರ್ಮಾಣಕ್ಕೆ ಹಣ ಕೇಳಿದ್ದೆವು, ಅದಕ್ಕೆ ಖಾಲಿ ಚೊಂಬು ಕೊಟ್ಟಿದ್ದಾರೆ. ಅಂಗನವಾಡಿ ಆಶಾ ಕಾರ್ಯಕರ್ತರಿಗೆ ಗೌರವ ಧನ ಹೆಚ್ಚಳ ಮಾಡುವಂತೆ ಕೇಳಿದ್ದೆವು ಅದನ್ನು ನೀಡಿಲ್ಲ ಎಂದು ಕಿಡಿಕಾರಿದರು.
ವಸತಿ ಯೋಜನೆಗಳಿಗೆ ಕೇಂದ್ರ ಸರಕಾರ 1.5 ಲಕ್ಷ ಕೊಡುತ್ತದೆ. ಅದನ್ನು 5 ಲಕ್ಷಕ್ಕೆ ಹೆಚ್ಚಳ ಮಾಡುವಂತೆ ಕೇಳಿದ್ದೆವು. ಅದನ್ನು ಮಾಡಿಲ್ಲ. ಗ್ರಾಮೀಣ ಪ್ರದೇಶದಲ್ಲಿ 75 ಸಾವಿರ ಕೊಡುತ್ತಾರೆ. 3 ಲಕ್ಷಕ್ಕೆ ಹೆಚ್ಚಳ ಮಾಡುವಂತೆ ಕೇಳಿದ್ದೆವು ಅದನ್ನು ಮಾಡಿಲ್ಲ. ನರೇಂದ್ರ ಮೋದಿ ಸರಕಾರದ ಬಜೆಟ್ ಕರ್ನಾಟಕ್ಕೆ ಚೊಂಬು ಕೊಡುವುದನ್ನು ಮುಂದುವರೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನರೇಗಾ ಯೋಜನೆಗೆ 2024-25ರ ಬಜೆಟ್ ನಲ್ಲಿ 89,154 ಕೋಟಿ ಒದಗಿಸಿದ್ದರು. ಈ ಬಾರಿ 86 ಸಾವಿರ ಕೋಟಿ ಘೋಷಣೆ ಮಾಡಿದ್ದಾರೆ. ಇದು ಕಡಿಮೆಯಾಗಿದೆ. ಪ್ರಧಾನಮಂತ್ರಿ ಕೃಷಿ ಸಿಂಚಯ್ ಯೋಜನೆಗೆ 8250 ಕೋಟಿ ನೀಡಿದ್ದರು. ಈ ಬಜೆಟ್ ನಲ್ಲಿ 8260 ಕೋಟಿ ನೀಡಿದ್ದಾರಷ್ಟೆ ಎಂದು ಹೇಳಿದರು.
ಮೇಕ್ ಇನ್ ಇಂಡಿಯಾ , ಸ್ಟಾರ್ಟ್ ಅಪ್ ಇಂಡಿಯಾ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬದುನ್ನು ಒತ್ತಿ ಒತ್ತಿ ಹೇಳಿದ್ದಾರೆ. ಆದರೆ ಮೇಕ್ ಇಂಡಿಯಾಗೆ 100 ಕೋಟಿ ಮಾತ್ರ ನೀಡಿದ್ದಾರೆ. ಇದು ಮಾತಿನಲ್ಲಿ ಹೊಟ್ಟೆ ತುಂಬಿಸುವ ಬಜೆಟ್ ಅಗಿದೆ ಎಂದು ವ್ಯಂಗ್ಯವಾಡಿದರು.
ಕೃಷಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡುವುದಾಗಿ ಹೇಳಿದ್ದರು. ಆದರೆ ಬಜೆಟ್ ನಲ್ಲಿ ಕಡಿಮೆ ಮಾಡಿದ್ದಾರೆ. ಜಾನುವಾರು ಆರೋಗ್ಯ ಸುಧಾರಣೆ ,ರೋಗ ನಿಯಂತ್ರಣಕ್ಕೂ ಹಣ ಕಡಿಮೆ ಮಾಡಿದ್ದಾರೆ. ಈ ಬಜೆಟ್ ನಲ್ಲಿ ಬಡವರಿಗೆ ಕಾರ್ಮಿಕರಿಗೆ ಯುವಕರಿಗೆ ಮಹಿಳೆಯರಿಗೆ ಅಭಿವೃದ್ಧಿಗೆ ಖರ್ಚು ಮಾಡುವುದನ್ನು ಬಿಟ್ಟು ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಟೆಲಕಾಂ ಸೌಲಭ್ಯಕ್ಕೆ ಕಳೆದ ಬಜೆಟ್ ನಲ್ಲಿ 2 ಸಾವಿರ ಕೋಟಿ ಇದ್ದರೆ, ಈ ಬಾರಿ 28 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಬಿಹಾರದಲ್ಲಿ ಚುನಾವಣೆ ಬರುತ್ತಿರುವುದರಿಂದ ಮೂರ್ನಾಲ್ಕು ಬಾರಿ ಬಿಹಾರದ ಹೆಸರು ಪ್ರಸ್ತಾಪ ಮಾಡಿದ್ದಾರೆ ಎಂದರು.







