ಎಚ್.ಡಿ.ದೇವೇಗೌಡರಿಗೆ ಬಿಜೆಪಿಯಿಂದ ಅವಮಾನ : ಎಂ.ಲಕ್ಷ್ಮಣ್

ಮೈಸೂರು : ರಾಜ್ಯಸಭೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಕಣಕ್ಕಿಳಿಸದೆ ಬಿಜೆಪಿ ಅವಮಾನ ಮಾಡಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.
ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಡಿಎ ಅಭ್ಯರ್ಥಿಯಾಗಿ ದೇವೇಗೌಡರನ್ನು ಆಯ್ಕೆ ಮಾಡುವ ನಿರೀಕ್ಷೆ ಇತ್ತು. ಒಂದು ವರ್ಷದಿಂದ ಅವರನ್ನು ಕಾಂಗ್ರೆಸ್ ಟೀಕಿಸುವುದಕ್ಕೆ ಬಳಸಿಕೊಂಡರು. ನರೇಂದ್ರ ಮೋದಿಯವರನ್ನು ನಿರಂತರವಾಗಿ ಹೊಗಳಿದರು. ಆದರೆ, ಟಿಕೆಟ್ ಕೊಡದೇ ಜೆಡಿಎಸ್‌ಗೆ ವಂಚನೆ ಮಾಡಿದ್ದಾರೆ ಎಂದರು.
ಜೆಡಿಎಸ್ ಪಕ್ಷ ಎನ್‌ಡಿಎ ಸೇರಿರುವ ನಿರ್ಧಾರವನ್ನು ಮರುಚಿಂತನೆ ಮಾಡಬೇಕು. ಕುಮಾರಸ್ವಾಮಿ ಜೆಡಿಎಸ್ ಪಕ್ಷವನ್ನು ಬಿಜೆಪಿಗೆ ಅಡ ಇಟ್ಟಿದ್ದಾರೆ. ಇನ್ನು ಮೂರೇ ತಿಂಗಳಲ್ಲಿ ಕುಮಾರಸ್ವಾಮಿ ಅವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸುತ್ತಾರೆ. ಕುಮಾರಸ್ವಾಮಿಯವರಿಗೆ ದೇವೇಗೌಡರ ಗೌರವಕ್ಕಿಂತ ಸಚಿವ ಸ್ಥಾನವೇ ಹೆಚ್ಚಾಯಿತೇ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆ. ಮಹೇಶ್, ಸಾಮಾಜಿಕ ಜಾಲತಾಣದ ಅಧ್ಯಕ್ಷ ಹೇಮಂತ್ ಇದ್ದರು.






