ನ್ಯೂಝಿಲ್ಯಾಂಡ್ ನಾಯಕ ಸ್ಥಾನ ತ್ಯಜಿಸಿದ ಕೇನ್ ವಿಲಿಯಮ್ಸನ್

ಕೇನ್ ವಿಲಿಯಮ್ಸನ್ | PTI
ವೆಲ್ಲಿಂಗ್ಟನ್: ಸೀಮಿತ ಓವರ್ ಕ್ರಿಕೆಟ್ ತಂಡಗಳ ನಾಯಕತ್ವವನ್ನು ತ್ಯಜಿಸಿರುವ ಕೇನ್ ವಿಲಿಯಮ್ಸನ್ 2024-25ರ ಸಾಲಿಗೆ ಕ್ರಿಕೆಟ್ ಮಂಡಳಿಯ ಕೇಂದ್ರೀಯ ಗುತ್ತಿಗೆಯನ್ನು ನಿರಾಕರಿಸಿದ್ದಾರೆ.
ವಿಲಿಯಮ್ಸನ್ ಅವರ ನಿರ್ಧಾರವನ್ನು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿಯು ಬುಧವಾರ ಪ್ರಕಟಿಸಿದೆ. ಅಂತರ್ರಾಷ್ಟ್ರೀಯ ವೃತ್ತಿಜೀವನದಲ್ಲಿ ದೀರ್ಘಕಾಲ ಮುಂದುವರಿಯಲು ಸ್ಟಾರ್ ಬ್ಯಾಟರ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿದೆ.
ಕಿವೀಸ್ ಪಡೆ ಈಗ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನ ನೀಡಿ ಗ್ರೂಪ್ ಹಂತದಲ್ಲೇ ನಿರ್ಗಮಿಸಿದ ನಂತರ ವಿಲಿಯಮ್ಸನ್ ಈ ನಿರ್ಧಾರ ಕೈಗೊಂಡಿದ್ದಾರೆ. ವೆಸ್ಟ್ಇಂಡೀಸ್ ಹಾಗೂ ಅಫ್ಘಾನಿಸ್ತಾನದ ವಿರುದ್ಧ ಗ್ರೂಪ್ ಹಂತದಲ್ಲಿ ಸೋತಿದ್ದ ಕಿವೀಸ್ ಸೂಪರ್-8 ಹಂತಕ್ಕೇರುವಲ್ಲಿ ವಿಫಲವಾಗಿತ್ತು. ನ್ಯೂಝಿಲ್ಯಾಂಡ್ 2024-25ರ ಋತುವಿನಲ್ಲಿ ತಾಯ್ನಾಡಿನಲ್ಲಿ ತುಂಬಾ ಕ್ರಿಕೆಟ್ ಆಡಲಿದೆ.
2024-25ರ ಸಾಲಿನ ಕೇಂದ್ರೀಯ ಗುತ್ತಿಗೆಯನ್ನು ನಿರಾಕರಿಸಿದ್ದರೂ ಕೇನ್ ವಿಲಿಯಮ್ಸನ್ ಎಲ್ಲ ಮೂರು ಮಾದರಿಗಳ ಕ್ರಿಕೆಟ್ನಲ್ಲಿ ಕಿವೀಸ್ ಪರ ದೀರ್ಘ ಅವಧಿಗೆ ತಮ್ಮ ಬದ್ಧತೆ ಹೊಂದಿರುತ್ತಾರೆ. ತಮ್ಮ ಅಂತರ್ರಾಷ್ಟ್ರೀಯ ವೃತ್ತಿಜೀವನವನ್ನು ಇನ್ನಷ್ಟು ವಿಸ್ತರಿಸಲು ವಿಲಿಯಮ್ಸನ್ ಕೇಂದ್ರೀಯ ಗುತ್ತಿಗೆ ಹಾಗೂ ಸೀಮಿತ ಓವರ್ ಕ್ರಿಕೆಟ್ ತಂಡಗಳ ನಾಯಕತ್ವವನ್ನು ತ್ಯಜಿಸಿದ್ದಾರೆ ಎಂದು ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಟೆಸ್ಟ್, ಏಕದಿನ ಹಾಗೂ ಟಿ20 ಮಾದರಿಯಲ್ಲಿ 350ಕ್ಕೂ ಅಧಿಕ ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ವಿಶ್ವದ ಓರ್ವ ಶ್ರೇಷ್ಠ ಬ್ಯಾಟರ್ ವಿಲಿಯಮ್ಸನ್, ನ್ಯೂಝಿಲ್ಯಾಂಡ್ನ ಎಲ್ಲ ಮೂರು ಮಾದರಿಯ ಕ್ರಿಕೆಟ್ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.
2022ರಲ್ಲಿ ಟಿಮ್ ಸೌಥಿಗೆ ಟೆಸ್ಟ್ ನಾಯಕತ್ವವನ್ನು ಬಿಟ್ಟುಕೊಟ್ಟಿರುವ ವಿಲಿಯಮ್ಸನ್ ವಿದೇಶಿ ಟಿ20 ಫ್ರಾಂಚೈಸಿಗೆ ಸೇರ್ಪಡೆಯಾಗುವ ನಿರೀಕ್ಷೆ ಇದೆ.
ಕ್ರಿಸ್ಮಸ್ಗಿಂತ ಮೊದಲು ನಡೆಯುವ 8 ಟೆಸ್ಟ್ಗಳು ಹಾಗೂ ಪಾಕಿಸ್ತಾನದಲ್ಲಿ ಫೆಬ್ರವರಿ ಹಾಗೂ ಮಾರ್ಚ್ನಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿಲಿಯಮ್ಸನ್ ಭಾಗವಹಿಸಲಿದ್ದಾರೆ ಎಂದು ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.







