ವಿಶ್ವದಾದ್ಯಂತ ರಸ್ತೆ ಅಪಘಾತಗಳಲ್ಲಿ ಮೃತಪಡುವ ಪ್ರತಿ 100 ಮಂದಿಯ ಪೈಕಿ 13 ಮಂದಿ ಭಾರತೀಯರು!
ಹೊಸದಿಲ್ಲಿ: ವಿಶ್ವಾದ್ಯಂತ 2021ರಲ್ಲಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟ ಪ್ರತಿ 100 ಮಂದಿಯ ಪೈಕಿ 13 ಮಂದಿ ಭಾರತೀಯರು ಎಂದು ವಿಶ್ವ ಆರೋಗ್ಯಸಂಸ್ಥೆ ಬುಧವಾರ ಬಿಡುಗಡೆ ಮಾಡಿದ ರಸ್ತೆ ಸುರಕ್ಷತೆ ಕುರಿತ ಜಾಗತಿಕ ವರದಿ ಬಹಿರಂಗಪಡಿಸಿದೆ. ರಸ್ತೆ ಅಪಘಾತಗಳಲ್ಲಿ ಸಾವು ಹೆಚ್ಚುತ್ತಿರುವ 65 ದೇಶಗಳ ಪೈಕಿ ಭಾರತವೂ ಒಂದಾಗಿದ್ದು, 2010ರಲ್ಲಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ 1.34 ಲಕ್ಷ ಇದ್ದುದು 2021ರಲ್ಲಿ ಇದು 1.54 ಲಕ್ಷಕ್ಕೆ ಹೆಚ್ಚಿದೆ.
ಕಳೆದ ವರ್ಷ ಭಾರತದಲ್ಲಿ ಅತ್ಯಧಿಕ ಅಂದರೆ 1.68 ಲಕ್ಷ ಮಂದಿ ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಂಡಿದ್ದಾರೆ. 2010ರಿಂದ 2021ರ ವರೆಗಿನ ಅಂಕಿ ಅಂಶಗಳನ್ನು ಕಲೆ ಹಾಕಿರುವ ರಸ್ತೆ ಸುರಕ್ಷತೆ ಕುರಿತ ಜಾಗತಿಕ ಸ್ಥಿತಿಗತಿ ವರದಿಯ ಅಂಕಿ ಅಂಶಗಳ ಪ್ರಕಾರ, ಆಗ್ನೇಯ ಏಷ್ಯಾ ದೇಶಗಳಲ್ಲಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟ 3.3 ಲಕ್ಷ ಮಂದಿಯ ಪೈಕಿ ಶೇಕಡ 46ರಷ್ಟು ಭಾರತೀಯರು. ಒಟ್ಟು ಸಂಖ್ಯೆಯಲ್ಲಿ 174 ದೇಶಗಳ ಪೈಕಿ ಅತಿ ಹೆಚ್ಚು ರಸ್ತೆ ಅಪಘಾತ ಸಾವುಗಳು ಸಂಭವಿಸುವ ದೇಶ ಭಾರತ.
ವಿಶ್ವದ ಒಟ್ಟು ಅಪಘಾತ ಸಾವುಗಳಲ್ಲಿ ಭಾರತದ ಪಾಲು 2010ರಲ್ಲಿ ಶೇಕಡ 11ರಷ್ಟಿದ್ದರೆ, 2021ರಲ್ಲಿ ಇದು ಶೇಕಡ 13ಕ್ಕೆ ಹೆಚ್ಚಿದೆ. ರಸ್ತೆ ಅಪಘಾತಗಳ ಸಾವಿನ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಾಗದಿದ್ದರೆ, 2030ರ ವೇಳೆಗೆ ಜಾಗತಿಕ ಮಟ್ಟದಲ್ಲಿ ರಸ್ತೆ ಅಪಘಾತಗಳ ಸಾವನ್ನು ಇಳಿಸುವ ಗುರಿ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಇದಕ್ಕಾಗಿ ಉತ್ತಮ ಕಾನೂನು ಚೌಕಟ್ಟು ರೂಪಿಸುವ ಹಾಗೂ ಕೋವಿಡ್-19 ಸಾವನ್ನು ತಡೆಯುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳಂತೆ ಎಲ್ಲ ಹಂತಗಳಲ್ಲಿ ತುರ್ತಾಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ರಸ್ತೆ ಸುರಕ್ಷತೆ ಕುರಿತ ಎನ್ ಜಿಓ ಜಾಗತಿಕ ಒಕ್ಕೂಟದ ಸದಸ್ಯೆ ಪ್ರೇರಣಾ ಅರೋರಾ ಸಿಂಗ್ ಹೇಳುತ್ತಾರೆ.