ನರೇಗಾ ಕಾರ್ಮಿಕರಿಗೆ ಆಧಾರ್ ಆಧರಿತ ವೇತನ ಪಾವತಿ ಕಡ್ಡಾಯ
ಸಾಂದರ್ಭಿಕ ಚಿತ್ರ (Photo: PTI)
ಹೊಸದಿಲ್ಲಿ: ಹೊಸವರ್ಷದಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ)ಯಡಿ ಎಲ್ಲ ವೇತನಗಳನ್ನು ಆಧಾರ್ ಆಧರಿತ ಪಾವತಿ ವ್ಯವಸ್ಥೆ (ಎಬಿಪಿಎಸ್)ಯ ಮೂಲಕವೇ ಪಾವತಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ಕಾರ್ಮಿಕರ ಆಧಾರ್ ವಿವರಗಳನ್ನು ಅವರ ಜಾಬ್ ಕಾರ್ಡ್ಗಳ ಜೊತೆಗೆ ಜೋಡಣೆಗೊಳಿಸುವುದು ಅಗತ್ಯವಾಗಿದೆ.
ಎಬಿಪಿಎಸ್ನ್ನು ಕಡ್ಡಾಯಗೊಳಿಸಲು ಗಡುವಿನ ಐದನೇ ವಿಸ್ತರಣೆಯು 2023,ಡಿ.31ರಂದು ಅಂತ್ಯಗೊಂಡಿದೆ. ಇದರಡಿ ಡೇಟಾಬೇಸ್ಗಳನ್ನು ಸಮನ್ವಯಗೊಳಿಸಲು ರಾಜ್ಯ ಸರಕಾರಗಳಿಗೆ ಸಮಯಾವಕಾಶವನ್ನು ನೀಡಲಾಗಿತ್ತು. ಈ ನಿಟ್ಟಿನಲ್ಲಿ ಮೊದಲ ಬಾರಿಗೆ ಒತ್ತು ನೀಡಿದಾಗಿನಿಂದ ನರೇಗಾ ಜಾಬ್ ಕಾರ್ಡ್ ಗಳನ್ನು ತೊಡೆದುಹಾಕುವ ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು, ಇದು ಈ ಕಡ್ಡಾಯ ಪಾವತಿ ಪದ್ಧತಿಯ ಹೇರಿಕೆಗೆ ನೇರವಾಗಿ ಸಂಬಂಧಿಸಿದೆ ಎನ್ನುತ್ತಾರೆ ನರೇಗಾದೊಂದಿಗೆ ಗುರುತಿಸಿಕೊಂಡಿರುವ ಕಾರ್ಯಕರ್ತರು.
ಎಬಿಪಿಎಸ್ ಜಾರಿಗೆ ಮೊದಲ ಆದೇಶವು 2023,ಜ.30ರಂದು ಹೊರಬಿದ್ದಿತ್ತು. ಬಳಿಕ ಗಡುವನ್ನು ಐದು ಬಾರಿ ವಿಸ್ತರಿಸಲಾಗಿತ್ತು. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ದತ್ತಾಂಶಗಳ ಪ್ರಕಾರ ಡಿ.27ಕ್ಕೆ ಇದ್ದಂತೆ ಜಾಬ್ ಕಾರ್ಡ್ ಗಳನ್ನು ಹೊಂದಿರುವ ಶೇ.34.8ರಷ್ಟು ಕಾರ್ಮಿಕರು ಈಗಲೂ ಈ ಪಾವತಿ ವಿಧಾನಕ್ಕೆ ಅನರ್ಹರಾಗಿಯೇ ಉಳಿದಿದ್ದಾರೆ.
ಗಡುವನ್ನು ಮತ್ತೆ ವಿಸ್ತರಿಸದಿರುವ ನಿರ್ಧಾರಕ್ಕೆ ಜಾಬ್ ಕಾರ್ಡ್ ಹೊಂದಿರುವರಿಗಿಂತ ಸಕ್ರಿಯ ಕಾರ್ಮಿಕರು ಹೆಚ್ಚು ಕಾರಣರಾಗಿದ್ದಾರೆ ಎಂದು ಸರಕಾರಿ ಮೂಲಗಳು ಹೇಳಿವೆ. ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಕನಿಷ್ಠ ಒಂದು ದಿನ ನರೇಗಾ ಯೋಜನೆಯಡಿ ಕೆಲಸ ಮಾಡಿದವರನ್ನು ಸಕ್ರಿಯ ಕಾರ್ಮಿಕರು ಎಂದು ಪರಿಗಣಿಸಲಾಗಿದೆ. ಡಿ.27ರವರೆಗೆ ಶೇ.12.7ರಷ್ಟು ಸಕ್ರಿಯ ಕಾರ್ಮಿಕರು ಇನ್ನೂ ಎಬಿಪಿಎಸ್ಗೆ ಅರ್ಹರಾಗಿಲ್ಲ. ನರೇಗಾ ಯೋಜನೆಯಡಿ ನೋಂದಾಯಿತ 25.25 ಕೋ.ಕಾರ್ಮಿಕರ ಪೈಕಿ 14.35 ಕೋ.ಜನರನ್ನು ಸಕ್ರಿಯ ಕಾರ್ಯಕರ್ತರು ಎಂದು ವರ್ಗೀಕರಿಸಲಾಗಿದೆ.
ಮೂಲಗಳು ತಿಳಿಸಿರುವಂತೆ ಎಬಿಪಿಎಸ್ ಅನ್ನು ಕಡ್ಡಾಯಗೊಳಿಸಿರುವ ತನ್ನ ಆದೇಶದಲ್ಲಿ ಸಚಿವಾಲಯವು,ಯಾವುದೇ ಪ್ರಾಮಾಣಿಕ ಕಾರಣದಿಂದಾಗಿ ಜೋಡಣೆ ಮಾಡಿರದ ಪ್ರಕರಣಗಳಿಗೆ ಅವಕಾಶ ನೀಡುವ ಮೂಲಕ ಉದಾರ ದೃಷ್ಟಿಕೋನವನ್ನು ತಳೆಯುವಂತೆಯೂ ರಾಜ್ಯ ಸರಕಾರಗಳಿಗೆ ಸೂಚಿಸಿದೆ.
ಶಿಕ್ಷಣ ತಜ್ಞರು ಮತ್ತು ಕಾರ್ಯಕರ್ತರ ಒಕ್ಕೂಟ ಲಿಬ್ಟೆಕ್ ಇಂಡಿಯಾ ಪ್ರಕಾರ,ಕೇಂದ್ರದ ಒತ್ತಡದಿಂದಾಗಿ ರಾಜ್ಯಗಳು ಆಧಾರ ಪಾವತಿಗೆ ಅರ್ಹವಲ್ಲದ ಹಲವಾರು ಕಾರ್ಡ್ಗಳನ್ನು ರದ್ದುಗೊಳಿಸಿದ್ದು,ಕಳೆದ 21 ತಿಂಗಳುಗಳಲ್ಲಿ 7.6 ಕೋ. ಕಾರ್ಮಿಕರನ್ನು ಸಿಸ್ಟಮ್ನಿಂದ ತೆಗೆಯಲಾಗಿದೆ.