ಧನ್ ತೇರಾಸ್: ವಾಹನ, ಚಿನ್ನ ಬಂಪರ್ ಮಾರಾಟ
ಸಾಂದರ್ಭಿಕ ಚಿತ್ರ (Photo: PTI)
ಹೊಸದಿಲ್ಲಿ: ದೀಪಾವಳಿ ಹಬ್ಬದ ಸಂದರ್ಭದ ಧನ್ ತೇರಾಸ್ ಮತ್ತೊಮ್ಮೆ ವ್ಯಾಪಾರಿಗಳ ಪಾಲಿಗೆ ವರದಾನವಾಗಿದೆ. ಪ್ರಮುಖ ಗ್ರಾಹಕ ವಸ್ತುಗಳಾದ ಚಿನ್ನ, ಬೆಳ್ಳಿ, ಕಾರು ಮತ್ತು ಎಸ್ಯುವಿ, ಎಲೆಕ್ಟ್ರಾನಿಕ್ಸ್, ಐಫೋನ್ ಮತ್ತಿತರ ಪ್ರೀಮಿಯಂ ವಸ್ತುಗಳಿಗೆ ಗ್ರಾಹಕರು ಹಬ್ಬದ ಸೀಸನ್ ನಲ್ಲಿ ಮುಗಿ ಬಿದ್ದಿರುವುದು ಉದ್ಯಮ ವಲಯದ ಹರ್ಷಕ್ಕೆ ಕಾರಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಗಗನಕ್ಕೇರಿರುವುದು ಗ್ರಾಹಕರ ಭಾವನೆಗಳ ಮೇಲೆ ಪರಿಣಾಮ ಬೀರಿತ್ತು. ಆದರೆ ಚಿನ್ನದ ಖರೀದಿಗೆ ಪವಿತ್ರ ಕ್ಷಣ ಎಂದು ಪರಿಗಣಿಸಲಾಗುವ ಧನ್ ತೇರಾಸ್ ಸಂದರ್ಭದಲ್ಲಿ ಚಿನ್ನದ ಮಳಿಗೆಗಳಿಗೆ ಜನ ಆಗಮಿಸುವುದು ಮತ್ತು ಖರೀದಿ ಭರಾಟೆ ಉತ್ಸಾಹದಾಯಕವಾಗಿದೆ.
"ಸಂತಸದಾಯಕ ವಿಚಾರವೆಂದರೆ ಚಿನ್ನದ ಬೆಲೆ ಕಳೆದ ಕೆಲ ದಿನಗಳಲ್ಲಿ ಸ್ಥಿರವಾಗಿದೆ ಹಾಗೂ ಖರೀದಿಯಲ್ಲಿ ಎರಡಂಕಿಯ ಪ್ರಗತಿ ದಾಖಲಾಗಿದೆ" ಎಂದು ಟೈಟಾನ್ ಆಭರಣ ವಿಭಾಗದ ಸಿಇಓ ಅಜಯ್ ಚಾವ್ಲಾ ಹೇಳಿದ್ದಾರೆ. "ಆರಂಭದಲ್ಲಿ ನಮಗೆ ಒಂದಷ್ಟು ಆತಂಕದ ವಾತಾವರಣ ಇತ್ತು. ಆದರೆ ಈ ಪವಿತ್ರ ದಿನ ಸಮೀಪಿಸುತ್ತಿರುವಂತೆ ಧನಾತ್ಮಕ ಬದಲಾವಣೆ ಕಂಡುಬರುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗ್ರಾಹಕರು ತಾವು ಆಭರಣ ಕಾಯ್ದಿರಿಸುವ ದಿನ ಹಾಗೂ ವಿತರಣೆಯ ದಿನ ಅಂದರೆ ಧನ್ ತೇರಾಸ್ ದಿನ ಈ ಎರಡು ದಿನಗಳ ಪೈಕಿ ಉತ್ತಮ ಬೆಲೆ ಇರುವ ದಿನವನ್ನು ದರಕ್ಕೆ ಆಯ್ಕೆ ಮಾಡಿಕೊಳ್ಳುವಂಥ ಯೋಜನೆಗಳು ಒಳ್ಳೆಯ ಪರಿಣಾಮ ಬೀರಿವೆ. ಇದು ಹೆಚ್ಚಿನ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೊಸ ಉತ್ಪನ್ನಗಳ ಪ್ರಬಲ ಶ್ರೇಣಿ ಕೂಡಾ ಇದಕ್ಕೆ ನೆರವಾಗಿದೆ ಎಂದು ತನಿಷ್ಕ್ ಉಪಾಧ್ಯಕ್ಷ ಅರುಣ್ ನಾರಾಯಣ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನದ ಬೆಲೆ ಈ ಬಾರಿ ಶೇಕಡ 20ರಷ್ಟು ಅಧಿಕವಿದ್ದರೂ, ಸಗಟು ಮತ್ತು ಚಿಲ್ಲರೆ ಮಾರಾಟದಲ್ಲಿ ಶೇಕಡ 10ರಷ್ಟು ಪ್ರಗತಿ ಕಂಡುಬಂದಿದೆ ಎಂದು ಪಿಪಿ ಜ್ಯುವೆಲ್ಲರ್ಸ್ ಮತ್ತು ಡೈಮಂಡ್ಸ್ ನಿರ್ದೇಶಕ ರಾಹುಲ್ ಗುಪ್ತಾ ಹೇಳಿದ್ದಾರೆ.