ಅಕ್ರಮ ಹಣ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ಪುತ್ರಿ ವೀಣಾಗೆ ED ಸಮನ್ಸ್

ವೀಣಾ ಟಿ. (Photo credit: metrovaartha.com)
ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಾರ ಕೊಚ್ಚಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಟಿ. ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದೆ.
ಜೂನ್ 12ರಂದು ಜಾರಿ ನಿರ್ದೇಶನಾಲಯದ ಕೊಚ್ಚಿಯಲ್ಲಿನ ವಲಯ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ PTI ಸುದ್ದಿ ಸಂಸ್ಥೆ ವರದಿ ಮಾಡಿದೆ. ಆಕೆಯ ಹೇಳಿಕೆಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ದಾಖಲಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೀಣಾ ಅಲ್ಲದೆ ಇನ್ನಿತರರಿಗೂ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದೆ.
ಕೇರಳ ಮೂಲದ ಮರಳು ಗಣಿಗಾರಿಕೆ ಸಂಸ್ಥೆಯಾದ ಕೊಚ್ಚಿನ್ ಮಿನರಲ್ಸ್ ಆ್ಯಂಡ್ ರುಟೈಲ್ ಲಿಮಿಟೆಡ್ ಹಾಗೂ ಸದ್ಯ ನಿಷ್ಕ್ರಿಯವಾಗಿರುವ ವೀಣಾರ ಎಕ್ಸಲಾಜಿಕ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತನಿಖೆ ನಡೆಯುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ತಿರುವನಂತಪುರಂನಲ್ಲಿ ಪಿಣರಾಯಿ ವಿಜಯನ್ ವಾಸಿಸುತ್ತಿರುವ ಬಾಡಿಗೆ ಮನೆ ಹಾಗೂ ಕೇರಳದ ಮತ್ತಿತರ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು.






