ಜಾತಿ ಉಲ್ಲೇಖ ಕುರಿತು ಆಕ್ರೋಶದ ಬಳಿಕ ದಲಿತ ರೈತರಿಬ್ಬರ ವಿರುದ್ಧ ಪ್ರಕರಣ ಮುಚ್ಚಲು ಈ.ಡಿ. ನಿರ್ಧಾರ
ಬಿಜೆಪಿ ನಾಯಕನ ವಿರುದ್ಧ ಕಾನೂನು ಸಮರ ನಡೆಸುತ್ತಿದ್ದ ರೈತರಿಗೆ ಸಮನ್ಸ್ ಜಾರಿಗೊಳಿಸಿದ್ದ ಈ.ಡಿ.
ಕನ್ನೈಯನ್ ಮತ್ತು ಕೃಷ್ಣನ್ | Photo: thenewsminute.com
ಚೆನ್ನೈ: ತಮಿಳುನಾಡಿನ ದಲಿತ ರೈತ ಸಹೋದರರಾದ ಕನ್ನೈಯನ್ (72) ಮತ್ತು ಕೃಷ್ಣನ್ (67) ಅವರ ವಿರುದ್ಧದ ಪ್ರಕರಣವನ್ನು ಜಾರಿ ನಿರ್ದೇಶನಾಲಯ (ಈ.ಡಿ.)ವು ಕೈಬಿಡಲಿದೆ. ಈ ದಲಿತ ರೈತರು ನ್ಯಾಯಾಲಯದಲ್ಲಿ ಭೂವಿವಾದ ಪ್ರಕರಣವೊಂದನ್ನು ದಾಖಲಿಸಿದ್ದು, ಸ್ಥಳೀಯ ಬಿಜೆಪಿ ನಾಯಕನೋರ್ವ ತಮ್ಮ ಭೂಮಿಯನ್ನು ಅಕ್ರಮವಾಗಿ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಈ.ಡಿ. ಈ ಸಹೋದರರಿಗೆ ತನ್ನೆದುರು ಹಾಜರಾಗುವಂತೆ ಜುಲೈ 2023ರಲ್ಲಿ ಸಮನ್ಸ್ ಜಾರಿಗೊಳಿಸಿತ್ತು. ಸಮನ್ಸ್ ರವಾನಿಸಿದ್ದ ಲಕೋಟೆಯ ಮೇಲೆ ಅವರ ಜಾತಿಯನ್ನು ‘ಹಿಂದು ಪಲ್ಲರ್ಗಳು’ ಎಂದು ಉಲ್ಲೇಖಿಸಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಈ.ಡಿ.ಅವರ ವಿರುದ್ಧದ ಪ್ರಕರಣವನ್ನು ಮುಚ್ಚಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಭೂ ಸಮಸ್ಯೆಗಳಿಂದಾಗಿ ಕನ್ನೈಯನ್ ಮತ್ತು ಕೃಷ್ಣನ್ ಕಳೆದ ನಾಲ್ಕು ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿಲ್ಲ. ಬದುಕಿಗಾಗಿ ಸರಕಾರದ 1,000 ರೂ.ಮಾಸಿಕ ಪಿಂಚಣಿ ಮತ್ತು ಉಚಿತ ಪಡಿತರವನ್ನೇ ಅವರು ನಂಬಿಕೊಂಡಿದ್ದಾರೆ.
ತಮಿಳುನಾಡು ಅರಣ್ಯ ಇಲಾಖೆಯು 2021,ಜು.12ರಂದು ಬರೆದಿದ್ದ ಪತ್ರದ ಆಧಾರದಲ್ಲಿ ಈ ರೈತರಿಬ್ಬರ ವಿರುದ್ಧ ಪ್ರಕರಣ ದಾಖಲಾಗಿತ್ತು. ಎರಡು ಕಾಡೆಮ್ಮೆಗಳನ್ನು ಕೊಂದಿದ್ದ ಆರೋಪದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಈ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು. ತನಿಖೆಯ ಬಳಿಕ ಪ್ರಕರಣವನ್ನು ಮುಚ್ಚಲಾಗಿದೆ, ರೈತರಿಗೆ ಕಿರುಕುಳ ನೀಡುವ ಉದ್ದೇಶ ತಮಗಿಲ್ಲ ಎಂದು ಅನಾಮಿಕ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಅಧಿಕಾರಿಗಳು ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ನ ಆದೇಶವನ್ನು ಉಲ್ಲೇಖಿಸಿದ್ದಾರಾದರೂ ಈ.ಡಿ. ವನ್ಯಜೀವಿ ಪ್ರಕರಣಗಳನ್ನು ಏಕೆ ಕೈಗೆತ್ತಿಕೊಳ್ಳುತ್ತಿದೆ ಎನ್ನುವುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.
ತಮ್ಮ ವಿರುದ್ಧದ ಪ್ರಕರಣ ಏನು ಎನ್ನುವುದು ಈ ಸೋದರರಿಗೆ ಗೊತ್ತಿರಲಿಲ್ಲ, ಸಮನ್ಸ್ನಲ್ಲಿ ಸೂಕ್ತ ದಾಖಲೆಗಳೊಂದಿಗೆ ಈ.ಡಿ. ಎದುರು ಹಾಜರಾಗುವಂತೆ ತಿಳಿಸಲಾಗಿತ್ತು ಮತ್ತು ಬೇರೆ ಯಾವುದೇ ಉಲ್ಲೇಖ ಅದರಲ್ಲಿರಲಿಲ್ಲ ಎಂದು ರೈತರ ಪರ ವಕೀಲರು ಸುದ್ದಿಸಂಸ್ಥೆಗೆ ತಿಳಿಸಿದರು.
ಈ ಪ್ರಹಸನವನ್ನು ಖಂಡಿಸಿರುವ ವಿಸಿಕೆ ಅಧ್ಯಕ್ಷ ಮತ್ತು ಸಂಸದ ಥೋಲ್ ತಿರುಮಾವಲವನ್ ಮತ್ತು ಪುಥಿಯಾ ತಮಿಳಿಗಂ ಮುಖ್ಯಸ್ಥ ಕೆ.ಕೃಷ್ಣಸ್ವಾಮಿ ಅವರು,ಅಧಿಕಾರಿಗಳ ವಿರುದ್ಧ ಎಸ್ಎಸ್/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲು ಕರೆ ನೀಡಿದ್ದಾರೆ.