ಪೂಂಛ್ ದಂತಕತೆ ಹವಾಲ್ದಾರ್ ಅಬ್ದುಲ್ ಮಜೀದ್ ರಿಂದ ನಾಗರಿಕರ ಹೀರೊ ಪರ್ಷೋತ್ತಮ್ ವರೆಗೆ...
ಶೌರ್ಯ ಪ್ರಶಸ್ತಿ ವಿಜೇತರ ಕಥೆಗಳು
![ಪೂಂಛ್ ದಂತಕತೆ ಹವಾಲ್ದಾರ್ ಅಬ್ದುಲ್ ಮಜೀದ್ ರಿಂದ ನಾಗರಿಕರ ಹೀರೊ ಪರ್ಷೋತ್ತಮ್ ವರೆಗೆ... ಪೂಂಛ್ ದಂತಕತೆ ಹವಾಲ್ದಾರ್ ಅಬ್ದುಲ್ ಮಜೀದ್ ರಿಂದ ನಾಗರಿಕರ ಹೀರೊ ಪರ್ಷೋತ್ತಮ್ ವರೆಗೆ...](https://www.varthabharati.in/h-upload/2024/01/26/1237159-fb8.webp)
Photo: theprint.in
ಹೊಸದಿಲ್ಲಿ: 75ನೇ ಗಣರಾಜ್ಯೋತ್ಸವದಂದು ಆರು ಕೀರ್ತಿ ಚಕ್ರ ಹಾಗೂ 16 ಶೌರ್ಯ ಚಕ್ರ ಸೇರಿದಂತೆ ಒಟ್ಟು 22 ಎರಡು ಮತ್ತು ಮೂರನೆಯ ಅತ್ಯುನ್ನತ ಶೌರ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಪೂಂಛ್ ದಂತಕತೆಯಾದ ಹವಾಲ್ದಾರ್ ಅಬ್ದುಲ್ ಮಜೀದ್ ರಿಂದ ನಾಗರಿಕರ ಹೀರೊ ಪರ್ಷೋತ್ತಮ್ ವರೆಗೆ ಈ ಪ್ರತಿಷ್ಠಿತ ಶೌರ್ಯ ಪ್ರಶಸ್ತಿಗಳಿಗೆ ಭಾಜನರಾದರು. ಈ ಹಿನ್ನೆಲೆಯಲ್ಲಿ ಈ ಬಾರಿ ಶೌರ್ಯ ಪ್ರಶಸ್ತಿಗೆ ಭಾಜನರಾದ ಯೋಧರ ಕುರಿತು ಒಂದು ಪಕ್ಷಿ ನೋಟ:
ಮನೋಜ್ ದಿಗ್ವಿಜಯ್ ಸಿಂಗ್ ರಾವತ್ (ಕೀರ್ತಿ ಚಕ್ರ)
21 ಪ್ಯಾರಾ ಎಸ್ಎಫ್ಗೆ ಸೇರಿರುವ ಮನೋಜ್ ದಿಗ್ಜಿಯ್ ಸಿಂಗ್ ರಾವತ್ ತಮ್ಮ ಮಣಿಪುರದಲ್ಲಿನ ಕಾರ್ಯಾಚರಣೆಗಾಗಿ ಕೀರ್ತಿ ಚಕ್ರ ಪದಕಕ್ಕೆ ಭಾಜನರಾಗಿದ್ದಾರೆ. ಅವರನ್ನು ಮಣಿಪುರಕ್ಕೆ ಕರ್ತವ್ಯಕ್ಕೆ ನಿಯೋಜಿಸಿದ ಕೂಡಲೇ ಸೇನಾಪಡೆಯ ಕಮಾಂಡರ್ ಆಗಿದ್ದ ಅವರು, ವಿನೂತನ ಹಾಗೂ ಸಮರ್ಪಕ ಗುಪ್ತಚರ ಜಾಲವನ್ನು ಅಭಿವೃದ್ಧಿಪಡಿಸಿ, ಕಣಿವೆ ಪ್ರದೇಶದಲ್ಲಿರುವ ಎಲ್ಲ ಬಂಡುಕೋರ ಗುಂಪುಗಳನ್ನು ನಿಖರವಾಗಿ ಗುರುತಿಸಿದ್ದರು ಎಂದು ಅವರ ಪ್ರಶಸ್ತಿ ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ.
ಮನೋಜ್ ದೀಪೇಂದ್ರ ವಿಕ್ರಮ್ ಬಾಸ್ನೆತ್ (ಕೀರ್ತಿ ಚಕ್ರ)
ಮೇಜರ್ ದಿಪೇಂದ್ರ ವಿಕ್ರಮ್ ಬಾಸ್ನೆತ್ ಜೂನ್ 15, 2023ರಂದು ಗಡಿ ನಿಯಂತ್ರಣ ರೇಖೆಯೊಂದಿಗೆ ಕುಪ್ವಾರಾ ಜಿಲ್ಲೆಯ ಕೀರನ್ ಸೆಕ್ಟರ್ ನಲ್ಲಿ ನಿಯೋಜಿಸಲಾಗಿದ್ದ ಹೊಂಚುದಾಟವೊಂದರ ಕಮಾಂಡರ್ ಆಗಿದ್ದರು. ಐದು ಮಂದಿಯ ಉಗ್ರಗಾಮಿಗಳ ಗುಂಪೊಂದು ಈ ಭಾಗದಲ್ಲಿ ನುಸುಳುವ ಸಾಧ್ಯತೆ ಇದೆ ಎಂಬ ಗುಪ್ತಚರ ಮಾಹಿತಿಯನ್ನು ಆಧರಿಸಿ ಈ ತುಕಡಿಯನ್ನು ಅಲ್ಲಿ ನಿಯೋಜಿಸಲಾಗಿತ್ತು.
ಮನೋಜ್ ದೀಪೇಂದ್ರ ವಿಕ್ರಮ್ ಬಾಸ್ನೆತ್ ಅವರ ನಿಗಾ ತಂಡವು ಈ ಉಗ್ರಗಾಮಿಗಳನ್ನು ಪತ್ತೆ ಹಚ್ಚಿ, ಅವರಿಗೆ ಮೊದಲಿಗೆ ಎಚ್ಚರಿಕೆ ನೀಡಿತ್ತು. ಜೂನ್ 16ರ ಮಧ್ಯರಾತ್ರಿಯ ನಂತರ ಹೊಂಚುದಾಣಕ್ಕೆ ಪ್ರವೇಶಿಸಿದ ಉಗ್ರಗಾಮಿಗಳ ಮೇಲೆ ಮನೋಜ್ ದೀಪೇಂದ್ರ ವಿಕ್ರಮ್ ಬಾಸ್ನೆತ್ ಗುಂಡಿನ ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಮುಂಚೂಣಿ ಉಗ್ರಗಾಮಿಯು ಮನಬಂದಂತೆ ಮನೋಜ್ ಹಾಗೂ ಅವರ ತಂಡದ ಮೇಲೆ ಗುಂಡು ಹಾಗೂ ಗ್ರನೇಡ್ ದಾಳಿ ನಡೆಸಿದ್ದ.
ತಮ್ಮ ಸುರಕ್ಷತೆಯ ಬಗ್ಗೆ ಒಂದು ಕ್ಷಣವೂ ಯೋಚಿಸದ ಮನೋಜ್, ಭಾರಿ ಗುಂಡಿನ ದಾಳಿಯ ಹೊರತಾಗಿಯೂ ಮುಂಚೂಣಿ ಉಗ್ರಗಾಮಿಯತ್ತ ತೆವಳಿಕೊಂಡು ಹೋಗಿ, ಆತ ಮೇಲೆ ಅತ್ಯಂತ ಹತ್ತಿರದಲ್ಲಿ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು. ಗುಂಡಿನ ದಾಳಿ ತೀವ್ರವಾಗಿದ್ದ ಸಂದರ್ಭದಲ್ಲಿಯೇ ಅವರು ಮತ್ತೊಬ್ಬ ಉಗ್ರಗಾಮಿಯ ಮುಖಾಮುಖಿಯಾದರು. ಮರು ಯೋಚಿಸದೆ ಆತನೊಂದಿಗೆ ದೈಹಿಕ ಸಂಘರ್ಷ ನಡೆಸಿ, ತಮ್ಮ ಕತ್ತಿಯಿಂದ ಆತನನ್ನು ಇರಿದು ಕೊಂದಿದ್ದರು. ಅವರು ತಮ್ಮ ಕಾರ್ಯಾಚರಣೆಯನ್ನು ನಿಯಂತ್ರಿಸುವುದರೊಂದಿಗೆ, ಮೂರನೆಯ ಉಗ್ರಗಾಮಿ ಹತ್ಯೆಗೊಳಗಾಗುವುದನ್ನು ಖಾತ್ರಿಗೊಳಿಸಿದ್ದರು. ತಮ್ಮ ಜೀವವನ್ನೇ ಪಣಕ್ಕೊಡ್ಡುವ ಮೂಲಕ ತಮ್ಮ ತಂಡವನ್ನು ರಕ್ಷಿಸಿದ್ದ ಮನೋಜ್, ಕಾರ್ಯಾಚರಣೆ ಯಶಸ್ವಿಯಾಗುವಂತೆ ನೋಡಿಕೊಂಡಿದ್ದರು. ಈ ಕಾರ್ಯಾಚರಣೆಯಲ್ಲಿ ಭಾರಿ ಶಸ್ತ್ರಸಜ್ಜಿತ ಐವರು ಉಗ್ರಗಾಮಿಗಳನ್ನು ಹತ್ಯೆಗೈಯ್ಯಲಾಗಿತ್ತು ಎಂದು ಅವರ ಪ್ರಶಸ್ತಿ ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ.
ಲೇಟ್ ಹವಾಲ್ದಾರ್ ಅಬ್ದುಲ್ ಮಜೀದ್ (ಕೀರ್ತಿ ಚಕ್ರ)
9 ಪ್ಯಾರಾ ಎಸ್ಎಫ್ ತಂಡದ ಕಮಾಂಡರ್ ಆಗಿದ್ದ ಹವಾಲ್ದಾರ್ ಅಬ್ದುಲ್ ಮಜೀದ್, 2011ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ನವೆಂಬರ್ 22, 2023ರಂದು ರಜೌರಿ ಜಿಲ್ಲೆಯ ದಟ್ಟಾರಣ್ಯದಲ್ಲಿ ನಡೆದಿದ್ದ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಅವರ ತಂಡವು ಉಗ್ರಗಾಮಿಗಳ ಗುಂಡಿನ ದಾಳಿಯಿಂದ ಮಾರಣಾಂತಿಕವಾಗಿ ಗಾಯಗೊಂಡಿದ್ದ ರಾಷ್ಟ್ರೀಯ ರೈಫಲ್ಸ್ ತುಕಡಿಯ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರನ್ನು ಸ್ಥಳಾಂತರಿಸಲು ತೆರಳಿತ್ತು.
ಉಗ್ರಗಾಮಿಗಳನ್ನು ಅಡಗಿಸಲು ಭಾರಿ ಗುಂಡಿನ ದಾಳಿ ನಡೆಸಿದ್ದ ಅಬ್ದುಲ್ ಮಜೀದ್, ತೆವಳಿಕೊಂಡು ಹೋಗಿ, ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರನ್ನು ತೆರವುಗೊಳಿಸಿ, ನಂತರ ಮತ್ತೆ ತಮ್ಮ ಸ್ಥಾನಕ್ಕೆ ಮರಳಿದ್ದರು.
ತಮ್ಮ ತಂಡವನ್ನು ಉಗ್ರಗಾಮಿಗಳು ಅಡಗಿಕೊಂಡು, ಮನ ಬಂದಂತೆ ಗುಂಡು ಹಾರಿಸುತ್ತಿದ್ದ ನೈಸರ್ಗಿಕ ಗುಹೆಯ ಬಳಿಗೆ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ಅವರ ಕಾಲಿಗೆ ಗುಂಡು ತಗುಲಿ ತೀವ್ರ ರಕ್ತಸ್ರಾವವಾಗುತ್ತಿದ್ದರೂ ಲೆಕ್ಕಿಸದೆ, ಉಗ್ರಗಾಮಿಗಳು ಅಡಗಿದ್ದ ಗುಹೆಯನ್ನು ಸಮೀಪಿಸಿದ್ದ ಅವರು, ಗುಹೆಯೊಳಗೆ ಗ್ರನೇಡ್ ಎಸೆದಿದ್ದರು. ಇದರಿಂದ ಗಾಯಗೊಂಡ ಉಗ್ರಗಾಮಿಗಳು ಗುಹೆಯಿಂದ ಹೊರ ಬರುವಂತಾಗಿತ್ತು. ತಮ್ಮ ತಂಡಕ್ಕೆ ಆಗಲಿರುವ ಅಪಾಯವನ್ನು ಗ್ರಹಿಸಿದ್ದ ಅವರು, ತಕ್ಷಣವೇ ತಮ್ಮ ಸ್ಥಾನವನ್ನು ಬದಲಿಸಿ, ತಾವು ಗಾಯಗಳಿಗೆ ಬಲಿಯಾಗುವುದಕ್ಕೂ ಮುನ್ನ, ಉಗ್ರಗಾಮಿಯತ್ತ ಮುನ್ನುಗ್ಗಿ ಆತನನ್ನು ಹತ್ಯೆಗೈದಿದ್ದರು ಎಂದು ಅವರ ಪ್ರಶಸ್ತಿ ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ.
ನಾಗರಿಕ ಪರ್ಷೋತ್ತಮ್ ಕುಮಾರ್ (ಶೌರ್ಯ ಚಕ್ರ)
ರಜೌರಿ ಜಿಲ್ಲೆಯ ನಿವಾಸಿಯಾದ ಪರ್ಷೋತ್ತಮ್ ಕುಮಾರ್ ವೃತ್ತಿಯಲ್ಲಿ ರೈತರಾಗಿದ್ದು, ಗ್ರಾಮದ ರಕ್ಷಣಾ ಸಮಿತಿಯ ಸದಸ್ಯರಾಗಿದ್ದಾರೆ. ಆಗಸ್ಟ್ 2023ರಲ್ಲಿ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ದಟ್ಟಾರಣ್ಯದಲ್ಲಿ ಕಟ್ಟಿಗೆಯನ್ನು ಆಯುವಾಗ ಇಬ್ಬರು ಅನುಮಾನಾಸ್ಪದ ಸಶಸ್ತ್ರಧಾರಿಗಳು ತಮ್ಮ ಸನಿಹಕ್ಕೆ ತರಾತುರಿಯಲ್ಲಿ ಬರುತ್ತಿರುವುದನ್ನು ಗಮನಿಸಿದ್ದಾರೆ.
ಗ್ರಾಮಕ್ಕೆ ಭಾರಿ ಅಪಾಯ ಕಾದಿದೆ ಎಂಬುದನ್ನು ಮನಗಂಡ ಪರ್ಷೋತ್ತಮ್ ಕುಮಾರ್, ತಮ್ಮ ಕುಟುಂಬದ ಸದಸ್ಯರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿ, ತಮ್ಮ ಕೈಗೆ ತಮ್ಮ ಶಸ್ತ್ರಾಸ್ತ್ರವನ್ನು ಎತ್ತಿಕೊಂಡಿದ್ದಾರೆ ಹಾಗೂ ಗ್ರಾಮ ರಕ್ಷಣಾ ಸಮಿತಿಯ ಇನ್ನಿತರ ಸದಸ್ಯರು, ಪೊಲೀಸರು ಹಾಗೂ ಸೇನೆಗೆ ಈ ಕುರಿತು ಮುನ್ನೆಚ್ಚರಿಕೆ ನೀಡಿದ್ದಾರೆ.
ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸುತ್ತಿರುವಂತೆಯೆ, ತಮ್ಮ ಸುರಕ್ಷತೆಯ ಕುರಿತು ಮರು ಯೋಚಿಸದ ಪರ್ಷೋತ್ತಮ್, ಇಬ್ಬರು ಉಗ್ರಗಾಮಿಗಳತ್ತ ಗಡಸು ಧೈರ್ಯ ಹಾಗೂ ಅತ್ಯುತ್ತಮ ಕೌಶಲದೊಂದಿಗೆ ಎದುರುಗೊಂಡು, ಅವರೊಂದಿಗೆ ಅತ್ಯಂ ನಿಕಟವಾಗಿ ಘರ್ಷಣೆಗಿಳಿದಿದ್ದಾರೆ. ಸೇನಾಪಡೆಗಳು ತಾನಿರುವೆಡೆಗೆ ಬರುವವರೆಗೂ ಇತರರೊಂದಿಗೆ ಅವರು ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿದ್ದಾರೆ. ಅವರ ಆ ದಿಟ್ಟತನದಿಂದಾಗಿ ಓರ್ವ ಉಗ್ರಗಾಮಿಯನ್ನು ಹೊಡೆದುರುಳಿಸಲು ಸಾಧ್ಯವಾಗಿದೆ. ಈ ಅದ್ವಿತೀಯ ದೇಶಪ್ರೇಮ, ಶೌರ್ಯ ಹಾಗೂ ಸಾಹಸತನಕ್ಕಾಗಿ ಅವರಿಗೆ ಈ ಬಾರಿಯ ಶೌರ್ಯ ಚಕ್ರ ಪ್ರಶಸ್ತಿ ದೊರೆತಿದೆ.
ಇದೇ ರೀತಿ ದೇಶ ರಕ್ಷಣೆಯಲ್ಲಿ ಅಪ್ರತಿಮ ಶೌರ್ಯ ಪ್ರದರ್ಶಿಸಿದ ದಿ. ಕ್ಯಾಪ್ಟನ್ ಅನ್ಷುಮನ್ ಸಿಂಗ್ ಹವಾಲ್ದಾರ್ ಪವನ್ ಕುಮಾರ್, ದಿ. ಸಿಪಾಯಿ ಪವನ್ ಕುಮಾರ್ ಅವರಿಗೆ ಕೀರ್ತಿ ಚಕ್ರ, ಮನೋಜ್ ಮ್ಯಾನಿಯೊ ಫ್ರಾನ್ಸಿಸ್, ಮನೋಜ್ ಅಮನ್ ದೀಪ್ ಜಖನ್, ದಿ. ಕ್ಯಾಪ್ಟನ್ ಎಂ.ವಿ.ಪ್ರಾಂಜಲ್, ಕ್ಯಾ. ಅಕ್ಷತ್ ಉಪಾಧ್ಯಾಯ್, ದಿ.ರೈಫಲ್ ಮನ್ ಅಲೋಕ್ ರಾವ್, ಲೆಫ್ಟಿನೆಂಟ್ ಬಿಮಲ್ ರಂಜನ್ ಬೆಹೆರಾ ಅವರಿಗೆ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.