ಆಹಾರಧಾನ್ಯ ಸಬ್ಸಿಡಿಗೆ 5 ವರ್ಷಗಳಲ್ಲಿ 11 ಲಕ್ಷ ಕೋಟಿ ರೂ. ವೆಚ್ಚ!
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆವೈ) ದೇಶದ 80 ಕೋಟಿ ಬಡವರಿಗೆ ಉಚಿತ ಆಹಾರಧಾನ್ಯ ವಿತರಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಮುಂದಿನ ಐದು ವರ್ಷಗಳ ಅವಧಿಗೆ ವಿಸ್ತರಿಸಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ 11 ಲಕ್ಷ ಕೋಟಿ ರೂಪಾಯಿ ಹೊರೆ ಬೀಳಲಿದೆ. ಈ ಸಂಬಂಧದ ಪ್ರಸ್ತಾವವನ್ನು ಕೇಂದ್ರ ಸಚಿವ ಸಂಪುಟದ ಮುಂದೆ ಮುಂದಿನ ಕೆಲ ವಾರಗಳಲ್ಲಿ ಮಂಡಿಸಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಈ ಯೋಜನೆಯನ್ನು ವಿಸ್ತರಿಸಿರುವುದರಿಂದ ಈಗಾಗಲೇ ಗುರುತಿಸಲ್ಪಟ್ಟಿರುವ ಫಲಾನುಭವಿಗಳು ಪ್ರತಿ ತಿಂಗಳು 5 ಕೆಜಿ ಅಕ್ಕಿ, ಗೋಧಿ ಮತ್ತು ಆಹಾರಧಾನ್ಯವನ್ನು ಉಚಿತವಾಗಿ ಪಡೆಯಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದ್ದರು.
ಸಬ್ಸಿಡಿ ದರದಲ್ಲಿ "ಭಾರತ್ ಅಟ್ಟಾ" ಪೂರೈಸುವ ಯೋಜನೆಗೆ ಚಾಲನೆ ನೀಡಿದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪಿಯೂಷ್ ಗೋಯಲ್, ಉಚಿತ ಪಡಿತರ ವಿತರಣೆಯ ಸಂಪೂರ್ಣ ಹೊರೆಯನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷದ ಡಿಸೆಂಬರ್ ನಲ್ಲಿ ಕೇಂದ್ರ ಸರ್ಕಾರ ಪಿಎಂಜಿಕೆಎವೈ ಯೋಜನೆಯಡಿ ಒಂದು ವರ್ಷದ ಅವಧಿಗೆ ಉಚಿತ ಆಹಾರಧಾನ್ಯ ವಿತರಿಸುವುದಾಗಿ ಘೋಷಿಸಿತ್ತು ಹಾಗೂ ಇದರಿಂದ ಸುಮಾರು 2 ಲಕ್ಷ ಕೋಟಿ ರೂ. ಹೊರೆಯಾಗಲಿದೆ ಎಂದು ನಿರೀಕ್ಷಿಸಿತ್ತು. "ಕನಿಷ್ಠ ಬೆಂಬಲಬೆಲೆ ಹೆಚ್ಚಳದಿಂದಾಗಿ ಮತ್ತು ಭಾರತದ ಆಹಾರ ನಿಗಮ ಇವುಗಳನ್ನು ನಿರ್ವಹಿಸುವ ವೆಚ್ಚ ಹೆಚ್ಚಳದಿಂದಾಗಿ ಆಹಾರಧಾನ್ಯ ಸಬ್ಸಿಡಿಯಿಂದ ಆಗುವ ಖರ್ಚು ಪ್ರತಿ ವರ್ಷ ಶೇಕಡ 5-6ರಷ್ಟು ಹೆಚ್ಚಲಿದೆ ಎನ್ನುವುದು ನಮ್ಮ ನಿರೀಕ್ಷೆ. ಆದ್ದರಿಂದ ಐದು ವರ್ಷಗಳ ಅವಧಿಗೆ ಒಟ್ಟಾರೆ ಸಬ್ಸಿಡಿ 11 ಲಕ್ಷ ಕೋಟಿ ರೂಪಾಯಿ ಆಗಲಿದೆ" ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಆರ್ಥಿಕ ವೆಚ್ಚದಲ್ಲಿ ದಾಸ್ತಾನು, ಸಾಗಾಣಿಕೆ, ನಿರ್ವಹಣೆ ಮತ್ತು ಖರೀದಿಸಿದ ಆಹಾರಧಾನ್ಯಗಳ ನಷ್ಟ ಮತ್ತಿತರ ಅಂಶಗಳು ಸೇರುತ್ತವೆ.