ಅಮೆರಿಕದಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿಯ ಹತ್ಯೆ ಸಂಚಿನ ಆರೋಪ ; ವಿಚಾರಣಾ ಸಮಿತಿಯ ವರದಿಯನ್ನು ಅನುಸರಿಸುವುದಾಗಿ ಭಾರತದ ಹೇಳಿಕೆ
ಗುರ್ಪತ್ವಂತ ಸಿಂಗ್ ಪನ್ನೂನ್
ಹೊಸದಿಲ್ಲಿ: ತನ್ನ ನೆಲದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕನೋರ್ವನ ಹತ್ಯೆಗಾಗಿ ರೂಪಿಸಿದ್ದ ವಿಫಲ ಸಂಚಿನಲ್ಲಿ ಭಾರತೀಯ ಪ್ರಜೆಯೋರ್ವರು ಭಾಗಿಯಾಗಿದ್ದರು ಎಂಬ ಅಮೆರಿಕದ ಹೇಳಿಕೆಯನ್ನು ಪರಿಶೀಲಿಸಲು ರಚಿಸಲಾಗಿರುವ ವಿಚಾರಣಾ ಸಮಿತಿಯ ವರದಿಯನ್ನು ತಾನು ಅನುಸರಿಸುವುದಾಗಿ ಕೇಂದ್ರವು ಗುರುವಾರ ತಿಳಿಸಿದೆ.
ನ್ಯೂಯಾರ್ಕ್ ನಗರದ ನಿವಾಸಿಯಾಗಿರುವ ಭಾರತೀಯ ಮೂಲದ ವಕೀಲ ಹಾಗೂ ರಾಜಕೀಯ ಕಾರ್ಯಕರ್ತನನ್ನು ಅಮೆರಿಕದ ನೆಲದಲ್ಲಿ ಹತ್ಯೆ ಮಾಡಲು ಸಂಚು ರೂಪಿಸಿದ್ದ ಭಾರತ ಸರಕಾರದ ಉದ್ಯೋಗಿಯೋರ್ವರು ಅದಕ್ಕಾಗಿ ನಿಖಿಲ್ ಗುಪ್ತಾ ಎಂಬ ಭಾರತೀಯ ಪ್ರಜೆಯನ್ನು ನಿಯೋಜಿಸಿದ್ದರು ಎಂದು ಯುಎಸ್ ಅಟಾರ್ನಿಯವರ ಕಚೇರಿಯು ಹೇಳಿಕೆಯಲ್ಲಿ ಆರೋಪಿಸಿತ್ತು.
ವಕೀಲ ಮತ್ತು ರಾಜಕೀಯ ಕಾರ್ಯಕರ್ತನನ್ನು ಹೇಳಿಕೆಯು ಹೆಸರಿಸಿಲ್ಲವಾದರೂ ಬ್ರಿಟನ್ನ ಫೈನಾನ್ಶಿಯಲ್ ಟೈಮ್ಸ್ ತನ್ನ ನ.23ರ ವರದಿಯಲ್ಲಿ ಆತನನ್ನು ಗುರ್ಪತ್ವಂತ ಸಿಂಗ್ ಪನ್ನೂನ್ ಎಂದು ಗುರುತಿಸಿತ್ತು. ಅಮೆರಿಕವು ಪನ್ನೂನ್ ಹತ್ಯೆ ಸಂಚನ್ನು ವಿಫಲಗೊಳಿಸಿದೆ ಮತ್ತು ಸಂಚಿನಲ್ಲಿ ಮೋದಿ ಸರಕಾರವು ಭಾಗಿಯಾಗಿದೆ ಎಂಬ ಕಳವಳಗಳ ಕುರಿತು ಭಾರತಕ್ಕೆ ಎಚ್ಚರಿಕೆಯನ್ನು ನೀಡಿದೆ ಎಂದು ಅದು ವರದಿ ಮಾಡಿತ್ತು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿಯವರು,ವಿಫಲ ಸಂಚಿನ ಕುರಿತು ಅಮೆರಿಕವು ಹಂಚಿಕೊಂಡಿರುವ ಭದ್ರತಾ ಮಾಹಿತಿಗಳು ಸಂಘಟಿತ ಕ್ರಿಮಿನಲ್ಗಳು,ಅಕ್ರಮ ಶಸ್ತ್ರಾಸ್ತ್ರ ಮಾರಾಟಗಾರರು ಮತ್ತು ಭಯೋತ್ಪಾದಕರು ಮತ್ತು ಇತರ ಉಗ್ರರ ನಡುವಿನ ನಂಟಿಗೆ ಸಂಬಂಧಿಸಿವೆ ಎಂದು ತಿಳಿಸಿದರು.
ವಿಫಲ ಹತ್ಯೆ ಸಂಚಿನಲ್ಲಿ ಭಾರತ ಸರಕಾರದ ಉದ್ಯೋಗಿಯೋರ್ವರು ಭಾಗಿಯಾಗಿದ್ದಾರೆ ಎಂಬ ಅಮೆರಿಕದ ಆರೋಪವು ಗಂಭೀರ ಕಳವಳದ ವಿಷಯವಾಗಿದೆ ಮತ್ತು ಸರಕಾರದ ನೀತಿಗೆ ವಿರುದ್ಧವೂ ಆಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತ ಕ್ರಿಮಿನಲ್ಗಳು,ಅಕ್ರಮ ಶಸ್ತ್ರಾಸ್ತ್ರ ಮಾರಾಟಗಾರರು ಮತ್ತು ಭಯೋತ್ಪಾದಕರು ಮತ್ತು ಇತರ ಉಗ್ರರ ನಡುವಿನ ಸಂಬಂಧವು ಕಾನೂನು ಜಾರಿ ಏಜೆನ್ಸಿಗಳು ಪರಿಗಣಿಸಬೇಕಾದ ಗಂಭೀರ ವಿಷಯವಾಗಿದೆ ಮತ್ತು ಇದೇ ಕಾರಣಕ್ಕಾಗಿ ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ವರದಿಯ ಮೇರೆಗೆ ನಾವು ಕಾರ್ಯಾಚರಿಸುತ್ತೇವೆ ಎಂದರು.
ಮೇ ತಿಂಗಳಲ್ಲಿ ಅಥವಾ ಅದರ ಆಸುಪಾಸಿನಲ್ಲಿ ಹತ್ಯೆಯನ್ನು ನಡೆಸಲು ಭಾರತ ಸರಕಾರದ ಅಧಿಕಾರಿ ನಿಖಿಲ್ ಗುಪ್ತಾನನ್ನು ನಿಯೋಜಿಸಿದ್ದರು ಎಂದು ಹೇಳಿದ್ದ ಅಮೆರಿಕವು,ಈ ಅಧಿಕಾರಿ ಭಾರತದಿಂದಲೇ ಹತ್ಯೆಗೆ ಸಂಚನ್ನು ನಿರ್ದೇಶಿಸಿದ್ದರು ಎಂದು ಆರೋಪಿಸಿದೆ. ಭಾರತದಲ್ಲಿಯ ತನ್ನ ವಿರುದ್ಧದ ಪ್ರಕರಣಗಳನ್ನು ವಜಾಗೊಳಿಸಬೇಕು ಎಂಬ ಷರತ್ತಿನೊಂದಿಗೆ ಗುಪ್ತಾ ಇದಕ್ಕೆ ಒಪ್ಪಿಕೊಂಡಿದ್ದ ಎನ್ನಲಾಗಿದೆ.
ಗುಪ್ತಾ ಅಂತಿಮಗೊಳಿಸಿದ್ದ ಒಪ್ಪಂದದಂತೆ ಭಾರತ ಸರಕಾರದ ಅಧಿಕಾರಿ ‘ಹಂತಕ ’ನಿಗೆ ಕೊಲೆ ನಡೆಸಲು ಒಂದು ಲಕ್ಷ ಡಾಲರ್ಗಳನ್ನು ನೀಡಲು ಒಪ್ಪಿಕೊಂಡಿದ್ದರು. ಆರೋಪಿತ ಸರಕಾರಿ ಅಧಿಕಾರಿ ಮತ್ತು ಗುಪ್ತಾ ಜೂ.9,2023ರಂದು ಅಥವಾ ಅದರ ಆಸುಪಾಸಿನಲ್ಲಿ ‘ಹಂತಕ ’ನಿಗೆ ಮುಂಗಡವಾಗಿ 15,000 ಡಾಲರ್ಗಳನ್ನು ಪಾವತಿಸಲು ಸಹವರ್ತಿಯೋರ್ವನನ್ನು ನಿಯೋಜಿಸಿದ್ದರು.
‘ಭಾರತೀಯ ಅಧಿಕಾರಿಯೋರ್ವರೊಂದಿಗೆ ಸಂಬಂಧ ಕಲ್ಪಿಸಿ ಅಮೆರಿಕದ ನ್ಯಾಯಾಲಯದಲ್ಲಿ ವ್ಯಕ್ತಿಯೋರ್ವನ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಕಳವಳದ ವಿಷಯವಾಗಿದೆ ಮತ್ತು ಸರಕಾರದ ನೀತಿಗೆ ವಿರುದ್ಧವಾಗಿದೆ ಎಂದು ನಾವು ಹೇಳಿದ್ದೇವೆ ’ಎಂದು ಗುರುವಾರದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ ಬಾಗ್ಚಿ, ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದರು. ಇಂತಹ ಭದ್ರತಾ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳುವಂತಿಲ್ಲ ಎಂದರು.
ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರಕಾರದ ಏಜೆಂಟರು ಭಾಗಿಯಾಗಿದ್ದಾರೆ ಎಂಬ ತನ್ನ ಆರೋಪವನ್ನು ಕೆನಡಾ ಪುನರುಚ್ಚರಿಸಿರುವ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿ ಬಾಗ್ಚಿ,‘ಕೆನಡಾಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಅದು ಭಾರತ ವಿರೋಧಿ ಉಗ್ರಗಾಮಿಗಳಿಗೆ ಮತ್ತು ಅವರ ಹಿಂಸಾಚಾರಕ್ಕೆ ನಿರಂತರವಾಗಿ ಆಶ್ರಯವನ್ನು ನೀಡಿದೆ ಎಂದು ನಾವು ಹೇಳಿದ್ದೇವೆ, ವಾಸ್ತವದಲ್ಲಿ ಇದು ಸಮಸ್ಯೆಯ ಕೇಂದ್ರಬಿಂದುವಾಗಿದೆ. ಕೆನಡಾದಲ್ಲಿರುವ ನಮ್ಮ ರಾಜತಾಂತ್ರಿಕರು ಇದರ ಬಿಸಿಯನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಕೆನಡಾ ಸರಕಾರವು ವಿಯೆನ್ನಾ ಒಪ್ಪಂದದಡಿ ತನ್ನ ಜವಾಬ್ದಾರಿಗಳಿಗೆ ಬದ್ಧವಾಗಿರುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ. ನಮ್ಮ ಆಂತರಿಕ ವ್ಯವಹಾರಗಳಲ್ಲಿ ಕೆನಡಾದ ರಾಜತಾಂತ್ರಿಕರು ಹಸ್ತಕ್ಷೇಪ ಮಾಡುತ್ತಿರುವುದನ್ನೂ ನಾವು ನೋಡಿದ್ದೇವೆ ’ಎಂದು ಹೇಳಿದರು.
ಅಮೆರಿಕದ ಪ್ರಜೆ ಪುನ್ನೂನ್ ಹತ್ಯೆಗಾಗಿ ನಡೆದಿತ್ತೆನ್ನಲಾದ ಸಂಚಿನಲ್ಲಿ ಭಾಗಿಯಾಗಿದ್ದಕ್ಕಾಗಿ ಗುಪ್ತಾ ’ಸುಪಾರಿ ಕೊಲೆ’ಯ ಆರೋಪವನ್ನು ಎದುರಿಸುತ್ತಿದ್ದಾನೆ. ಅಮೆರಿಕದೊಂದಿಗಿನ ಗಡಿಪಾರು ಒಪ್ಪಂದದ ಮೇರೆಗೆ ಗುಪ್ತಾನನ್ನು ಕಳೆದ ಜೂನ್ನಲ್ಲಿ ಝೆಕ್ ಗಣರಾಜ್ಯದಲ್ಲಿ ಬಂಧಿಸಲಾಗಿತ್ತು.
ಅಮೆರಿಕದ ನ್ಯಾಯ ಇಲಾಖೆಯ ಹೇಳಿಕೆಯಂತೆ ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ದಾಖಲೆಗಳು ಭಾರತ ಸರಕಾರದ ಅಧಿಕಾರಿ ಪನ್ನೂನ್ ಹತ್ಯೆಗಾಗಿ ಗುಪ್ತಾ ಮತ್ತು ಇತರರೊಂದಿಗೆ ಸೇರಿಕೊಂಡು ಸಂಚು ರೂಪಿಸಿದ್ದರು ಎಂದು ಆರೋಪಿಸಿವೆ. ಹೇಳಿಕೆಯು ಸರಕಾರಿ ಅಧಿಕಾರಿಯನ್ನು ಹೆಸರಿಸಿಲ್ಲ.
ಅಮೆರಿಕದಲ್ಲಿಯ ಬೆಳವಣಿಗೆಗಳ ನಡುವೆಯೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಭಾರತದ ವಿರುದ್ಧ ತನ್ನ ಆರೋಪವನ್ನು ಪುನರುಚ್ಚರಿಸಿದ್ದಾರೆ.
‘ಅಮೆರಿಕದಿಂದ ಬರುತ್ತಿರುವ ಸುದ್ದಿಗಳು ನಾವು ಮೊದಲಿನಿಂದಲೂ ಹೇಳುತ್ತ ಬಂದಿರುವುದನ್ನು ಸಮರ್ಥಿಸಿವೆ. ಇದನ್ನು ಭಾರತವು ಗಂಭೀರವಾಗಿ ಪರಿಗಣಿಸಬೇಕಿದೆ. ಇದರ ಬೇರನ್ನು ಜಾಲಾಡಲು ಭಾರತ ಸರಕಾರವು ನಮ್ಮೊಂದಿಗೆ ಕೆಲಸ ಮಾಡುವ ಅಗತ್ಯವಿದೆ. ಇದು ಯಾರಾದರೂ ಲಘುವಾಗಿ ಪರಿಗಣಿಸುವ ವಿಷಯವಲ್ಲ ’ ಎಂದು ಟ್ರುಡೊರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.