ಮದ್ರಾಸ್ ಹೈಕೋರ್ಟ್ ಸೂಚನೆ | 150 ಪೋಲಿಸರಿಂದ ಸದ್ಗುರು ಆಶ್ರಮದಲ್ಲಿ ಶೋಧ
ಮದ್ರಾಸ್ ಹೈಕೋರ್ಟ್ | PTI
ಚೆನ್ನೈ : ತೊಂಡಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಫೌಂಡೇಷನ್ನ ಆಶ್ರಮಕ್ಕೆ ಮಂಗಳವಾರ ಹೆಚ್ಚುವರಿ ಎಸ್ಪಿ ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ದಾಳಿ ನಡೆಸಿದ 150 ಪೋಲಿಸ್ ಅಧಿಕಾರಿಗಳ ತಂಡವು ವ್ಯಾಪಕ ಶೋಧ ಕಾರ್ಯಾಚರಣೆಯನ್ನು ನಡೆಸಿದೆ. ಇಶಾ ವಿರುದ್ಧ ದಾಖಲಾಗಿರುವ ಎಲ್ಲ ಕ್ರಿಮಿನಲ್ ಪ್ರಕರಣಗಳ ಕುರಿತು ವರದಿಯನ್ನು ಸಲ್ಲಿಸುವಂತೆ ಮದ್ರಾಸ್ ಉಚ್ಚ ನ್ಯಯಾಲಯವು ಸೋಮವಾರ ಸೂಚಿಸಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ಮೂವರು ಡಿಎಸ್ಪಿಗಳನ್ನೂ ಒಳಗೊಂಡಿದ್ದ ಪೋಲಿಸ್ ತಂಡವು ಆಶ್ರಮ ನಿವಾಸಿಗಳ ವಿವರಗಳನ್ನು ಪರಿಶೀಲಿಸುವ ಜೊತೆಗೆ ಕೊಠಡಿಗಳನ್ನು ಶೋಧಿಸಿತು.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಇಶಾ ಯೋಗ ಕೇಂದ್ರವು, ಕೇವಲ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದ ಆದೇಶದನ್ವಯ ಪೋಲಿಸರು ಸಾಮಾನ್ಯ ವಿಚಾರಣೆಗಾಗಿ ಆಶ್ರಮಕ್ಕೆ ಆಗಮಿಸಿದ್ದಾರೆ. ನಿವಾಸಿಗಳು ಮತ್ತು ಸ್ವಯಂಸೇವಕರ ವಿಚಾರಣೆ ನಡೆಸುತ್ತಿರುವ ಪೋಲಿಸರು ಅವರ ಜೀವನಶೈಲಿಯನ್ನು, ಅವರು ಹೇಗೆ ಇಲ್ಲಿಗೆ ಬಂದು ಉಳಿದುಕೊಂಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುತ್ತಿದ್ದಾರೆ ಎಂದು ಹೇಳಿದೆ.
ನಿವೃತ್ತ ಪ್ರೊಫೆಸರ್ ಡಾ.ಎಸ್.ಕಾಮರಾಜ ಅವರು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ನ್ಯಾಯಾಲಯವು ತನಿಖೆಯನ್ನು ನಡೆಸಿ ವರದಿಯನ್ನು ಸಲ್ಲಿಸುವಂತೆ ಕೊಯಿಮತ್ತೂರು ಗ್ರಾಮಾಂತರ ಪೋಲಿಸರಿಗೆ ಆದೇಶಿಸಿತ್ತು. ಇಶಾ ಫೌಂಡೇಷನ್ನ ಆಶ್ರಮದಲ್ಲಿ ತನ್ನ ಪುತ್ರಿಯರಾದ ಗೀತಾ(42) ಮತ್ತು ಲತಾ(39) ಅವರನ್ನು ದಿಗ್ಬಂಧನದಲ್ಲಿ ಇರಿಸಲಾಗಿದೆ. ಆಶ್ರಮವು ಜನರ ಬ್ರೈನ್ ವಾಷ್ ಮಾಡುತ್ತಿದೆ, ಅವರನ್ನು ಸನ್ಯಾಸಿಗಳನ್ನಾಗಿ ಪರಿವರ್ತಿಸುತ್ತಿದೆ ಮತ್ತು ಅವರು ತಮ್ಮ ಕುಟುಂಬಗಳನ್ನು ಸಂಪರ್ಕಿಸುವದನ್ನು ನಿರ್ಬಂಧಿಸಿದೆ ಎಂದು ಡಾ.ಕಾಮರಾಜ ಆರೋಪಿಸಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎಸ್.ಎಂ.ಸುಬ್ರಮಣಿಯಂ ಮತ್ತು ವಿ.ಶಿವಜ್ಞಾನಂ ಇಶಾ ಫೌಂಡೇಷನ್ ಸ್ಥಾಪಕ ಜಗ್ಗಿ ವಾಸುದೇವ ಅವರ ಜೀವನದಲ್ಲಿಯ ವಿರೋಧಾಭಾಸಗಳನ್ನು ಪ್ರಶ್ನಿಸಿತ್ತು.
ತನ್ನ ಮಗಳಿಗೆ ಮದುವೆ ಮಾಡಿ ಒಳ್ಳೆಯ ಬದುಕನ್ನು ಕಲ್ಪಿಸಿರುವ ಸದ್ಗುರು ಇತರ ಮಹಿಳೆಯರು ತಮ್ಮ ತಲೆಗಳನ್ನು ಬೋಳಿಸಿಕೊಂಡು,ಲೌಕಿಕ ಜೀವನವನ್ನು ತೊರೆದು ತನ್ನ ಯೋಗ ಕೇಂದ್ರಗಳಲ್ಲಿ ವಿರಕ್ತರಂತೆ ಬದುಕುವುದನ್ನು ಉತ್ತೇಜಿಸುತ್ತಿರುವುದೇಕೆ ಎಂದು ಪೀಠವು ಕಟುವಾಗಿ ಪ್ರಶ್ನಿಸಿತ್ತು.