'ಭಾರತ್ ಜೋಡೊ ನ್ಯಾಯ್ ಯಾತ್ರೆ'ಗೆ ಷರತ್ತುಬದ್ಧ ಅನುಮತಿ ನೀಡಿದ ಮಣಿಪುರ ಸರ್ಕಾರ
ಗುವಾಹತಿ: ಎಂಟು ದಿನಗಳ ಅನಿಶ್ಚಿತತೆ ಮತ್ತು ರಾಜಕೀಯ ಬಿಕ್ಕಟ್ಟಿನ ನಡುವೆ ಬಿಜೆಪಿ ನೇತೃತ್ವದ ಮಣಿಪುರ ಸರ್ಕಾರ ಬುಧವಾರ ಕಾಂಗ್ರೆಸ್ ಸಂಸದ ರಾಹುಲ್ಗಾಂಧಿಯವರ 'ಭಾರತ್ ಜೋಡೊ ನ್ಯಾಯ್ ಯಾತ್ರೆ'ಗೆ ಷರತ್ತುಬದ್ಧ ಅನುತಿ ನೀಡಿದೆ. ಇಂಫಾಲ ಪೂರ್ವ ಜಿಲ್ಲೆಯ ಮೈದಾನದಲ್ಲಿ ಉದ್ಘಾಟನಾ ಸಮಾರಂಭಕ್ಕೆ ಸೀಮಿತ ಸಂಖ್ಯೆಯ ಮಂದಿ ಪಾಲ್ಗೊಳ್ಳಬೇಕು ಎಂಬ ನಿರ್ಬಂಧದೊಂದಿಗೆ ಯಾತ್ರೆಗೆ ಒಪ್ಪಿಗೆ ನೀಡಲಾಗಿದೆ.
ರಾಹುಲ್ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಭಾನುವಾರ ಯಾತ್ರೆಗೆ ಚಾಲನೆ ನೀಡಲಿದ್ದು, ಯಾತ್ರೆಗೆ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಯಾತ್ರೆಗೆ ಚಾಲನೆ ನೀಡುವ ಸ್ಥಳವನ್ನು ರಾಜ್ಯ ಮುಖಂಡರು ಇನ್ನೂ ನಿರ್ಧರಿಸಬೇಕಿದೆ. ಇಂಫಾಲದ ಹೊರಗೆ ಕಾರ್ಯಕ್ರಮ ಆಯೋಜಿಸುವ ಪರ್ಯಾಯ ಸ್ಥಳಗಳ ಬಗ್ಗೆಯೂ ಪಕ್ಷ ಪರಿಶೀಲನೆ ನಡೆಸುತ್ತಿದೆ.
ಇದಕ್ಕೂ ಮುನ್ನ ಬುಧವಾರ ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೀಸಮ್ ಮೆಗಚಂದ್ರ ಹೇಳಿಕೆ ನೀಡಿ, ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರು, ಹತ್ತಾ ಕಂಗ್ಜೇಬಂಗ್ ಸ್ಥಳವನ್ನು ಯಾತ್ರೆಗೆ ಚಾಲನೆ ನೀಡುವ ಸಮಾರಂಭಕ್ಕೆ ಬಳಸಲು ಅನುಮತಿ ನಿರಾಕರಿಸಿದ್ದಾರೆ ಎಂದು ಆಪಾದಿಸಿದ್ದರು. ಇದು ರಾಜಕೀಯ ಆರೋಪ- ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ಯಾತ್ರೆ ತಡೆಯಲು ಮಣಿಪುರ ಸರ್ಕಾರ ಯತ್ನಿಸುತ್ತಿದೆ ಎಂದು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಬೋರ್ಹಾ ದೂರಿದ್ದರು.
ಕಾಂಗ್ರೆಸ್ ಮುಖಂಡರು ಮತ್ತು ಸಿಎಂ ಸಿಂಗ್ ಅವರ ನಡುವೆ ಮಾತುಕತೆ ನಡೆದ ಬಳಿಕ ಮಣಿಪುರ ಸರ್ಕಾರ, ಯಾತ್ರೆಗೆ ಅನುಮತಿ ನೀಡುವ ನಿರ್ಧಾರ ಪ್ರಕಟಿಸಿದೆ. ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಮತ್ತು ಹಾಲಿ ಇರುವ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿರ್ಬಂಧ ವಿಧಿಸಲಾಗಿದೆ ಎಂದು ಇಂಫಾಲ್ ಪೂರ್ವ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಪಷ್ಟಪಡಿಸಿದ್ದಾರೆ.