“ನನ್ನ ಏಕೈಕ ಅಪರಾಧವೆಂದರೆ…” ಖೇಲ್ ರತ್ನ ಕುಸ್ತಿಪಟು ವೀರೇಂದರ್ ಸಿಂಗ್ ಭಾವಾತ್ಮಕ ಪೋಸ್ಟ್

Photo : x/@GoongaPahalwan | virendersinghwrestler.com
ಹೊಸದಿಲ್ಲಿ: ಕಿವುಡರೂ ಮೂಗರೂ ಆಗಿರುವ ವಿಶೇಷ ಚೇತನ ಕುಸ್ತಿಪಟು ವೀರೇಂದರ್ ಸಿಂಗ್ 2023ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯಾದ ಖೇಲ್ ರತ್ನ ಪ್ರಶಸ್ತಿಗೆ ತಮ್ಮನ್ನು ಆಯ್ಕೆಮಾಡದೇ ಇರದಿರುವ ಕುರಿತಂತೆ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಹಲವಾರು ಅಥ್ಲೀಟ್ಗಳು ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿರುವ ನಡುವೆ, ಭಾರತಕ್ಕೆ ಮೂರು ಡೆಫಾಲೊಂಪಿಕ್ಸ್ ಚಿನ್ನದ ಪದಕವನ್ನು ಕುಸ್ತಿ ಕ್ರೀಡೆಯಲ್ಲಿ ಪಡೆದಿರುವ ಸಿಂಗ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಟ್ಯಾಗ್ ಮಾಡಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಗೂಂಗಾ ಪೆಹಲ್ವಾನ್ ಎಂದೇ ಖ್ಯಾತರಾಗಿರುವ ಸಿಂಗ್ ಅವರು 2021ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದರು.
“ಮಾನ್ಯ ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕುರ್, 5 ಒಲಿಂಪಿಕ್ ಪದಕ ವಿಜೇತನಾಗಿರುವ ಹೊರತಾಗಿಯೂ ನನಗೆ ಖೇಲ್ ರತ್ನ ಪ್ರಶಸ್ತಿ ನೀಡಲಾಗಿಲ್ಲ. ಹರ್ಯಾಣ ಸರ್ಕಾರ ಕೂಡ ತನ್ನ ನೀತಿಯಾನುಸಾರ ನನಗೆ ನೀಡಬೇಕಾಗಿರುವ ರೂ 8 ಕೋಟಿ ನೀಡಿಲ್ಲ. ನನ್ನ ಏಕೈಕ ಅಪರಾಧವೆಂದರೆ ನಾನೊಬ್ಬ ಮೂಗ ಮತ್ತು ಕಿವುಡ ಅಥ್ಲೀಟ್” ಎಂದು ಅವರು ಟ್ವೀಟ್ ಮಾಡಿದ್ದಾರೆ.







