ಸಿಎಎ ನಿಯಮಾವಳಿ ಮಾರ್ಚ್ ವೇಳೆಗೆ ಪೂರ್ಣ: ಕೇಂದ್ರ ಸಚಿವ ಅಜಯ್ ಮಿಶ್ರಾ
Photo: facebook
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮಾವಳಿ ಪೂರ್ಣಗೊಳಿಸುವ ಪ್ರಕ್ರಿಯೆ 2024ರ ಮಾರ್ಚ್ 30ರ ಒಳಗಾಗಿ ಮುಕ್ತಾಯವಾಗಲಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಪ್ರಕಟಿಸಿದ್ದಾರೆ.
ಪಶ್ಚಿಮ ಬಂಗಾಳದ 24 ಉತ್ತರ ಪರಗಣ ಜಿಲ್ಲೆಯ ಠಾಕೂರ್ ನಗರದಲ್ಲಿ ಭಾನುವಾರ ದಲಿತ ಮಟೂವಾ ಸಮುದಾಯದ ಹಬ್ಬವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಿಯಮಾವಳಿ ಪೂರ್ಣಗೊಳಿಸುವ ಬಗ್ಗೆ ಆಗ್ರಹಿಸುತ್ತಿರುವುದಾಗಿ ಸ್ಪಷ್ಟಪಡಿಸಿದರು.
"ಮಟೂವಾ ಸಮುದಾಯದವರು ಪೌರತ್ವ ಕಳೆದುಕೊಳ್ಳುವುದಿಲ್ಲ ಎಂದು ನಾನು ಸಮುದಾಯದ ಸದಸ್ಯರಿಗೆ ಭರವಸೆ ನೀಡುತ್ತಿದ್ದೇನೆ. ಅವರೆಲ್ಲರೂ ಸುರಕ್ಷಿತ. ಲಭ್ಯವಿರುವ ಮಾಹಿತಿಯ ಪ್ರಕಾರ, ಮಾರ್ಚ್ 30ರ ಒಳಗಾಗಿ ಸಿಎಎ ನಿಯಮಾವಳಿ ರೂಪಿಸುವ ಕಾರ್ಯ ಪೂರ್ಣಗೊಳ್ಳಲಿದೆ" ಎಂದು ವಿವರಿಸಿದರು.
ಠಾಕೂರ್ ನಗರದಲ್ಲಿ 2021ರ ಚುನಾವಣಾ ಪ್ರಚಾರದಲ್ಲಿ, ಕೇಂದ್ರ ಸಚಿವ ಅಮಿತ್ ಶಾ ಅವರು, ಕೋವಿಡ್-19 ಲಸಿಕೆ ಕಾರ್ಯಕ್ರಮ ಪೂರ್ಣಗೊಂಡ ಬಳಿಕ ದೇಶಾದ್ಯಂತ ಸಿಎಎ ಜಾರಿಗೆ ಬರಲಿದೆ ಎಂದು ಹೇಳಿದ್ದರು. ಆದರೆ ಬಿಜೆಪಿ ಮುಖಂಡರು ಆ ಬಳಿಕ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ.