ನಿಮಿಷಾ ಪ್ರಿಯಾಗಾಗಿ ದೇಣಿಗೆ ಸಂಗ್ರಹಿಸುವ ಸಂದೇಶ ನಕಲಿ: ವಿದೇಶಾಂಗ ಸಚಿವಾಲಯ ಸ್ಪಷ್ಟನೆ

ನಿಮಿಶಾ ಪ್ರಿಯಾ | PC ; PTI
ಹೊಸದಿಲ್ಲಿ: ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಯೆಮನ್ನಲ್ಲಿ ಮರಣದಂಡನೆ ಎದುರಿಸುತ್ತಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಬಿಡುಗಡೆಗಾಗಿ ಕೇಂದ್ರ ಸರಕಾರದ ಬ್ಯಾಂಕ್ ಖಾತೆಗೆ ಉದಾರ ದೇಣಿಗೆಯನ್ನು ನೀಡುವಂತೆ ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳು ‘ನಕಲಿ’ ಎಂದು ವಿದೇಶಾಂಗ ಸಚಿವಾಲಯ ಮಂಗಳವಾರ ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣ ‘ಎಕ್ಸ್ ’ ನ ಬಳಕೆದಾರರೊಬ್ಬರು ಮಾಡಿರುವ ಇಂತಹ ಪೋಸ್ಟ್ನ ಸ್ಕ್ರೀನ್ಶಾಟ್ ಅನ್ನು ವಿದೇಶಾಂಗಸಚಿವಾಲಯದ ಸತ್ಯಶೋಧನಾ ತಂಡವು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಬಳಕೆದಾರನು ಆಗಸ್ಟ್ 19ರಂದು ಮಾಡಲಾದ ಈ ಪೋಸ್ಟ್ನಲ್ಲಿ ‘ಸೇವ್ ನಿಮಿಷಾ ಪ್ರಿಯಾ’ ಘೋಷಣೆಯಿರುವ ಪೋಸ್ಟರ್ ಹಾಗೂ ಕೆಲವೊಂದು ಬ್ಯಾಂಕ್ ವಹಿವಾಟಿನ ವಿವರಗಳನ್ನು ನೀಡಲಾಗಿತ್ತು.
ಈ ಎಕ್ಸ್ ಪೋಸ್ಟ್ ಅನ್ನು ಕೆ.ಎ.ಪೌಲ್ ಹೆಸರಿನಲ್ಲಿ ಬ್ಲೂಟಿಕ್ ಹೊಂದಿರುವ ಖಾತೆಯಿಂದ ಮಾಡಲಾಗಿದೆ. ಈ ಪೋಸ್ಟ್ ನಲ್ಲಿ, “ಭಾರತ ಸರಕಾರ ನಿಯೋಜಿಸಿರುವ ಖಾತೆಗೆ ನಿಮಿಷಾರನ್ನು ರಕ್ಷಿಸಲು ದೇಣಿಗೆ ನೀಡಿ. ನಮಗೆ 8.3 ಕೋಟಿ ರೂ. ಬೇಕಾಗಿದೆ” ಎಂದು ಬರೆಯಲಾಗಿದೆ.
ಈ ಬಗ್ಗೆ ವಿದೇಶಾಂಗ ಸಚಿವಾಲಯದ ಸತ್ಯಶೋಧನಾ ತಂಡವು ಹೇಳಿಕೆಯೊಂದನ್ನು ನೀಡಿದ್ದು, ‘‘ಭಾರತ ಸರಕಾರವು ಗೊತ್ತುಪಡಿಸಿದ ಬ್ಯಾಂಕ್ ಖಾತೆಗೆ ದೇಣಿಗೆಯನ್ನು ನೀಡುವಂತೆ ಕೋರುವ ಮನವಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿರುವುದನ್ನು ನಾವು ಕಂಡಿದ್ದೇವೆ. ಇದೊಂದು ನಕಲಿ ಮನವಿಯಾಗಿದೆ ’’ ಎಂದು ತಿಳಿಸಿದೆ.
ಇದಕ್ಕೂ ಮುನ್ನ, ಜುಲೈ ತಿಂಗಳಲ್ಲಿ ನಿಮಿಷಾ ಬಿಡುಗಡೆಗಾಗಿ ಹೌತಿ ಸರಕಾರಕ್ಕೆ ಮನವಿ ಮಾಡುವ ವಿಡಿಯೊವನ್ನು ಕೆ.ಎ.ಪೌಲ್ ಪೋಸ್ಟ್ ಮಾಡಿದ್ದರು. ಈ ವಿಡಿಯೊದಲ್ಲಿ ನಿಮಿಷಾ ಪ್ರಿಯಾರ 13 ವರ್ಷದ ಪುತ್ರಿ ಮಿಷೆಲ್ ಹಾಗೂ ಆಕೆಯ ಪತಿ ಥೋಮಸ್ ಕಾಣಿಸಿಕೊಂಡಿದ್ದರು.
ನಿಮಿಷಾ ಪ್ರಿಯಾ ಪ್ರಕರಣದಲ್ಲಿ ಸಾಧ್ಯವಿರುವ ಎಲ್ಲಾ ನೆರವನ್ನು ಒದಗಿಸುವುದನ್ನು ತಾನು ಮುಂದುವರಿಸುವುದಾಗಿ ಭಾರತ ಆಗಸ್ಟ್ 1ರಂದು ತಿಳಿಸಿತ್ತು. ಈ ಪ್ರಕರಣದ ಇತ್ಯರ್ಥಕ್ಕಾಗಿ ತಾನು ಕೆಲವೊಂದು ಮಿತ್ರ ದೇಶಗಳ ಜೊತೆಗೂ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ಸಚಿವಾಲಯ ಆಗಸ್ಟ್ 1ರಂದು ತಿಳಿಸಿತ್ತು.
2017ರಲ್ಲಿ ಯೆಮನ್ನಲ್ಲಿ ಆ ದೇಶದ ಪ್ರಜೆಯೊಬ್ಬನ ಹತ್ಯೆ ಪ್ರಕರಣದಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿವಾಸಿಯಾದ ನರ್ಸ್ ನಿಮಿಷಾ ಪ್ರಿಯಾಳಿಗೆ ಮರಣದಂಡನೆಯನ್ನು ವಿಧಿಸಲಾಗಿತ್ತು.
38 ವರ್ಷ ವಯಸ್ಸಿನ ನಿಮಿಷಾ ಪ್ರಿಯಾಳಿಗೆ ಜುಲೈ 6ರಂದು ಮರಣದಂಡನೆ ನಿಗದಿಯಾಗಿತ್ತು. ಬಳಿಕ ಅದನ್ನು ಮುಂದೂಡಲಾಗಿತ್ತು.
ಪ್ರಸಕ್ತ ನಿಮಿಷಾಳನ್ನು ಯೆಮನ್ನ ರಾಜಧಾನಿ ನಗರ ಸಾನಾದ ಜೈಲಿನಲ್ಲಿರಿಸಲಾಗಿದೆ.







