ರಾಹುಲ್ ಗಾಂಧಿ ಪಕ್ಷದ ಓರ್ವ ಸಾಮಾನ್ಯ ಸಂಸದ, ಹೆಚ್ಚು ವೈಭವೀಕರಿಸಬೇಕಿಲ್ಲ: ದಿಗ್ವಿಜಯ್ ಸಿಂಗ್ ಸಹೋದರನ ಹೇಳಿಕೆ
ಲಕ್ಷ್ಮಣ್ ಸಿಂಗ್, ರಾಹುಲ್ ಗಾಂಧಿ | Photo : PTI
ಭೋಪಾಲ್: ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಓರ್ವ ಸಾಮಾನ್ಯ ಕಾರ್ಯಕರ್ತ ಹಾಗೂ ಸಂಸದರಾಗಿದ್ದು, ಅವರನ್ನು ಹೆಚ್ಚು ವೈಭವೀಕರಿಸಬೇಕಿಲ್ಲ ಎಂದು ಮಾಜಿ ಕಾಂಗ್ರೆಸ್ ಸಂಸದ, ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರ ಸಹೋದರ ಲಕ್ಷ್ಮಣ್ ಸಿಂಗ್ ಶನಿವಾರ ಗುನಾದಲ್ಲಿನ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದ್ದು, ಈ ಹೇಳಿಕೆಯು ವಿವಾದದ ಕಿಡಿ ಹೊತ್ತಿಸಿದೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹೇಳಿಕೆ ನೀಡುವಾಗ ಅವರ ಮುಖವನ್ನು ಕಡಿಮೆ ತೋರಿಸಲಾಗುತ್ತದೆ ಎಂದು ವರದಿಗಾರರು ಪ್ರಶ್ನಿಸಿದಾಗ, “ರಾಹುಲ್ ಗಾಂಧಿ ಓರ್ವ ಸಂಸದ. ಅವರೇನೂ ಪಕ್ಷದ ಅಧ್ಯಕ್ಷರಲ್ಲ. ಅವರೂ ಕೂಡಾ ಕಾಂಗ್ರೆಸ್ ಕಾರ್ಯಕರ್ತ. ಅದರ ಹೊರತಾಗಿ ರಾಹುಲ್ ಗಾಂಧಿ ಮತ್ತೇನೂ ಅಲ್ಲ” ಎಂದು ಲಕ್ಷ್ಮಣ್ ಸಿಂಗ್ ಉತ್ತರಿಸಿದ್ದಾರೆ.
“ಯಾವುದೇ ವ್ಯಕ್ತಿಯ ಪ್ರಾಮುಖ್ಯತೆಯು ಅವರ ಕ್ರಿಯೆಯಿಂದ ತಿಳಿದು ಬರುತ್ತದೆಯೆ ಹೊರತು ಕೇವಲ ಅವರ ಹುಟ್ಟಿನಿಂದಲ್ಲ” ಎಂದು ಲಕ್ಷ್ಮಣ್ ಸಿಂಗ್ ವ್ಯಾಖ್ಯಾನಿಸಿದ್ದಾರೆ.
“ರಾಹುಲ್ ಗಾಂಧಿಯನ್ನು ಪಕ್ಷದೊಳಗಿನ ಮಹತ್ವದ ನಾಯಕ ಎಂದು ಪರಿಗಣಿಸಬಾರದು. ಅವರೊಬ್ಬ ಸಾಧಾರಣ ಸಂಸದರಾಗಿದ್ದು, ಅವರನ್ನು ಮಾಧ್ಯಮಗಳು ಎತ್ತಿ ತೋರಿಸುತ್ತವೆಯೊ ಇಲ್ಲವೊ ಎಂಬುದು ಅಪ್ರಸ್ತುತ” ಎಂದು ಲಕ್ಷ್ಮಣ್ ಸಿಂಗ್ ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಂತರ ತಮ್ಮ ಹಿಂದಿನ ಹೇಳಿಕೆಯ ಕುರಿತು ಸ್ಪಷ್ಟನೆ ನೀಡಿರುವ ಲಕ್ಷ್ಮಣ್ ಸಿಂಗ್, ಸ್ವತಃ ರಾಹುಲ್ ಗಾಂಧಿ ತಮ್ಮನ್ನು ತಾವು ಪಕ್ಷದ ಸಾಮಾನ್ಯ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾರೆ. ಅದರಂತೆಯೆ ಪಕ್ಷದಲ್ಲಿನ ಎಲ್ಲರನ್ನೂ ಪರಿಗಣಿಸಬೇಕು ಎಂದು ಅವರು ಸೂಚಿಸಿದ್ದಾರೆ” ಎಂದು ಹೇಳಿದ್ದಾರೆ.