ಚುನಾವಣೋತ್ತರ ಸಮೀಕ್ಷೆ : ಮಧ್ಯಪ್ರದೇಶದಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ
ಇಲ್ಲಿದೆ ಸಂಪೂರ್ಣ ಮಾಹಿತಿ
ಭೋಪಾಲ್ : ಮೂರು ಚುನಾವಣೋತ್ತರ ಸಮೀಕ್ಷೆಗಳು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ತೀವ್ರ ಪೈಪೋಟಿಯಿದೆ ಎಂದು ಹೇಳಿದೆ.
2018 ಮತ್ತು 2020 ರ ನಡುವಿನ ಅಲ್ಪಾವಧಿಯನ್ನು ಹೊರತುಪಡಿಸಿ 2005 ರಿಂದ ರಾಜ್ಯದ ಮುಖ್ಯಮಂತ್ರಿಯಾಗಿರುವ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಐದನೇ ಅವಧಿಗೆ ಅಧಿಕಾರದ ನಿರೀಕ್ಷೆಯಲ್ಲಿದ್ದಾರೆ. ವಿಶೇಷವೆಂದರೆ ಬಿಜೆಪಿ ಅವರನ್ನು ಈ ಬಾರಿ ಸಿಎಂ ಹುದ್ದೆಗೆ ಅಭ್ಯರ್ಥಿಯಾಗಿ ಘೋಷಿಸಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಕಮಲ್ ನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲು ಅವಕಾಶ ಸಿಗಬಹುದು ಎಂದು ಕಾಯುತ್ತಿದ್ದು, ಅವರನ್ನು ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಬೆಂಬಲಿಸಿದ್ದಾರೆ.
ರಾಜ್ಯದಲ್ಲಿ 230 ಸ್ಥಾನಗಳಿದ್ದು ಬಹುಮತಕ್ಕೆ 116 ಸ್ಥಾನಗಳ ಅಗತ್ಯವಿದೆ.
ರಿಪಬ್ಲಿಕ್ ಟಿವಿ-ಮ್ಯಾಟ್ರಿಜನ್ ಸಮೀಕ್ಷೆಯು ಬಿಜೆಪಿಗೆ ಸ್ಪಷ್ಟವಾದ ಬಹುಮತ ನೀಡಿದೆ. ಆಡಳಿತ ಪಕ್ಷವು 118 ರಿಂದ 130 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ. ಕಾಂಗ್ರೆಸ್ 97-107 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಮತ್ತು ಇತರ ಪಕ್ಷಗಳು 0-2 ಗಳಿಸಲಿವೆ ಎಂದು ಭವಿಷ್ಯ ನುಡಿದಿದೆ.
ಟಿವಿ 9 ಭಾರತ್ ವರ್ಷ-ಪೋಲ್ಸ್ ಟ್ರಾಟ್ ಸಮೀಕ್ಷೆಗಳು ಕಾಂಗ್ರೆಸ್ ಪರ ಭವಿಷ್ಯ ಹೇಳಿವೆ. ಪಕ್ಷವು 111 ರಿಂದ 121 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಬಿಜೆಪಿ 106-116 ಕ್ಕೆ ಸೀಮಿತಗೊಳ್ಳಲಿದೆ ಎಂದು ಅಂಕಿ ಅಂಶ ಮುಂದಿಟ್ಟಿದೆ. ಇತರ ಪಕ್ಷಗಳು ಗೆಲ್ಲುವ ಕ್ಷೇತ್ರಗಳು 0-6 ನಡುವೆ ಇವೆ ಎಂದು ಹೇಳಿದೆ.
ಜನ್ ಕಿ ಬಾತ್ ತನ್ನ ಸಮೀಕ್ಷೆಯಲ್ಲಿ ಕಾಂಗ್ರೆಸಿಗೆ 102-125, ಆಡಳಿತಾರೂಢ ಬಿಜೆಪಿಗೆ 100-123 ಮತ್ತು ಇತರರಿಗೆ ಐದು ಸ್ಥಾನ ಬರಬಹುದು ಎಂದು ಹೇಳಿದೆ.