ಅಮೆರಿಕಕ್ಕೆ ಅಕ್ರಮ ವಲಸೆ: ನಿಕರಾಗುವಕ್ಕೆ ಹಾರಿತ್ತು ಮತ್ತೊಂದು ವಿಮಾನ!
Photo: timesofindia.indiatimes.com
ಹೊಸದಿಲ್ಲಿ: ವಿಶೇಷ ವಿಮಾನದ ನೆರವಿನಿಂದ ಅಮೆರಿಕಕ್ಕೆ ಅಕ್ರಮವಾಗಿ ವಲಸೆಯವರನ್ನು ಕರೆದೊಯ್ಯುವ ಮತ್ತೊಂದು ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ದುಬೈನಿಂದ ಡಿಸೆಂಬರ್ 6ರಂದು ನಿಕರಾಗುವಕ್ಕೆ ಮತ್ತೊಂದು ವಿಮಾನ ಹೊರಟ ಪ್ರಕರಣ ತನಿಖೆಯಿಂದ ತಿಳಿದು ಬಂದಿದೆ. ಇದರಿಂದಾಗಿ ಶಂಕಿತ ಮಾನವ ಕಳ್ಳಸಾಗಾಣಿಕೆ ಜಾಲ ಇಂಥ ಮೂರನೇ ವಿಮಾನ ವ್ಯವಸ್ಥೆ ಮಾಡಿರುವುದು ದೃಢಪಟ್ಟಿದೆ.
ಶಂಕಿತ ಮಾನವ ಕಳ್ಳಸಾಗಾಣಿಕೆ ಬಗ್ಗೆ ಸುಳಿವು ದೊರಕಿದ ಹಿನ್ನೆಲೆಯಲ್ಲಿ ಫ್ರಾನ್ಸ್ನ ವಟ್ರಿ ವಿಮಾನ ನಿಲ್ದಾಣ ಅಧಿಕಾರಿಗಳು, 96 ಮಂದಿ ಗುಜರಾತಿಗಳು ಸೇರಿದಂತೆ ಒಟ್ಟು 303 ಪ್ರಯಾಣಿಕರಿದ್ದ ವಿಮಾನವನ್ನು ಟೇಕಾಫ್ ಆಗಲು ಅವಕಾಶ ನೀಡಿರಲಿಲ್ಲ. ಈ ವಿಮಾನ ಇಂಧನ ಮರುಭರ್ತಿಗಾಗಿ ಫ್ರಾನ್ಸ್ನಲ್ಲಿ ಇಳಿದಿತ್ತು. ಇದಕ್ಕೂ ಎರಡು ದಿನ ಮುನ್ನ ಜರ್ಮನಿಯಲ್ಲಿ ಇಂಥ ಒಂದು ಖಾಸಗಿ ವಿಮಾನ ಇಳಿದಿತ್ತು.
"ಬಹುತೇಕ ಗುಜರಾತಿಗಳು ಸೇರಿದಂತೆ 303 ಮಂದಿಯನ್ನು ಕರೆದೊಯ್ಯುತ್ತಿದ್ದ ವಿಮಾನ ಡಿಸೆಂಬರ್ 21ಕ್ಕೆ ಫ್ರಾನ್ಸ್ನಲ್ಲಿ ಇಳಿಯುವ ಮುನ್ನ ಡಿಸೆಂಬರ್ 6ರಂದು ದುಬೈನಿಂದ ನಿಕರಾಗುವಕ್ಕೆ ಇನ್ನೊಂದು ವಿಮಾನ ಹಾರಿರುವುದು ವಿಚಾರಣೆಯಿಂದ ತಿಳಿದು ಬಂದಿದೆ" ಎಂದು ಸಿಐಡಿ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಫ್ರಾನ್ಸ್ ವಿಮಾನ ನಿಲ್ದಾಣದ ಪ್ರಕರಣದಲ್ಲಿ ಶಾಮೀಲಾಗಿದ್ದ ವ್ಯಕ್ತಿಯೇ ಈ ಪ್ರಯಾಣವನ್ನು ಕೂಡಾ ಆಯೋಜಿಸಿದ್ದ ಎನ್ನಲಾಗಿದೆ.
ವಟ್ರಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ವಿಚಾರಣೆಗೆ ಗುರಿಪಡಿಸಿದಾಗ, ಅವರ ದಾಖಲೆಗಳು ಅಕ್ರಮವಲ್ಲ ಎನ್ನುವುದು ದೃಢಪಟ್ಟಿತ್ತು. ಆದರೆ ಅವರು ಅಮರಿಕಕ್ಕೆ ಅಕ್ರಮವಾಗಿ ನುಸುಳಲು ಯತ್ನಿಸಿರುವುದು ಬೆಳಕಿಗೆ ಬಂದಿತ್ತು ಎಂದು ಸಿಐಡಿ ಎಸ್ಪಿ ಸಂಜಯ್ ಖಾರಟ್ ಹೇಳಿದ್ದಾರೆ. ಡಿಸೆಂಬರ್ 24ರಂದು ಈ ವಿಮಾನ ಭಾರತಕ್ಕೆ ಮರಳಲು ಫ್ರಾನ್ಸ್ ಕೋರ್ಟ್ ಒಪ್ಪೊಗೆ ನೀಡಿತ್ತು. 276 ಪ್ರಯಾಣಿಕರನ್ನು ಒಳಗೊಂಡ ವಿಮಾನ ಮುಂಬೈಗೆ ಆಗಮಿಸಿತ್ತು.
ಇದಕ್ಕೂ ಮುನ್ನ ತೆರಳಿದ್ದ ವಿಮಾನದಲ್ಲಿ 200 ಪ್ರಯಾಣಿಕರು ಇದ್ದರು. ಈ ಪೈಕಿ 60 ಮಂದಿ ಗುಜರಾತಿಗಳು. ತಾಂತ್ರಿಕ ಕಾರಣಗಳಿಂದ ಈ ವಿಮಾನ ಜರ್ಮನಿ ವಿಮಾನ ನಿಲ್ದಾಣದಲ್ಲಿ 10-12 ಗಂಟೆ ನಿಂತಿತ್ತು. ಇದರಲ್ಲಿ ಕೆಲವರು ಅಕ್ರಮವಾಗಿ ಅಮೆರಿಕದ ಗಡಿ ದಾಟಿದ್ದು, ಮತ್ತೆ ಹಲವು ಮಂದಿ ಮೆಕ್ಸಿಕೊದಲ್ಲಿದ್ದಾರೆ.