ಎಸ್ಐಆರ್ 2.0 | ನಾಳೆ ನ.4ರಿಂದ 12 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಮನೆಮನೆ ಎಣಿಕೆ ಆರಂಭ

ಚುನಾವಣಾ ಆಯೋಗ
ಹೊಸದಿಲ್ಲಿ,ನ.3: ಎರಡನೇ ಹಂತದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್)ಗಾಗಿ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮನೆಮನೆ ಎಣಿಕೆಯು ನ.4ರಿಂದ ಆರಂಭಗೊಳ್ಳಲಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಛತ್ತೀಸ್ಗಡ, ಗೋವಾ, ಗುಜರಾತ್, ಕೇರಳ, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಎರಡನೇ ಹಂತದ ಎಸ್ಐಆರ್ ನಡೆಯಲಿದೆ.
ಸುಮಾರು 51 ಕೋಟಿ ಮತದಾರರನ್ನು ಹೊಂದಿರುವ ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಐಆರ್ ಮುಂದಿನ ವರ್ಷದ ಫೆ.7ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಗೊಳ್ಳುವುದರೊಂದಿಗೆ ಮುಕ್ತಾಯಗೊಳ್ಳಲಿದೆ.
ತಮಿಳುನಾಡು, ಪುದುಚೇರಿ, ಕೇರಳ ಮತ್ತು ಪ.ಬಂಗಾಳಗಳಲ್ಲಿ ಮುಂದಿನ ವರ್ಷದ ಎಪ್ರಿಲ್-ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಅಸ್ಸಾಮಿನಲ್ಲಿಯೂ ಚುನಾವಣೆ ನಡೆಯಲಿದೆಯಾದರೂ ಅಲ್ಲಿ ಪೌರತ್ವ ನಿಬಂಧನೆಗಳು ಭಿನ್ನವಾಗಿರುವುದರಿಂದ ಚುನಾವಣಾ ಆಯೋಗವು ಅದನ್ನು ಎಸ್ಐಆರ್ ನಲ್ಲಿ ಸೇರಿಸಿಲ್ಲ.
ತೃಣಮೂಲ ಕಾಂಗ್ರೆಸ್ ಈಗಾಗಲೇ ಎಸ್ಐಆರ್ ಗೆ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಿದ್ದು, ಮಂಗಳವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ನೇತೃತ್ವದಲ್ಲಿ ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ವಿರುದ್ಧ ಪ್ರತಿಭಟನೆ ನಡೆಯಲಿದೆ. ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯು ಎಸ್ಐಆರ್ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದೆ.
ಎಸ್ಐಆರ್ ನ ಈ ಸುತ್ತು ಸ್ವಾತಂತ್ರ್ಯಾನಂತರ ಇಂತಹ ಒಂಭತ್ತನೇ ಪ್ರಕ್ರಿಯಾಗಿದೆ. ಹಿಂದಿನ ಎಸ್ಐಆರ್ 2002-2004ರಲ್ಲಿ ನಡೆದಿತ್ತು.
ಮಂಗಳವಾರದಿಂದ ಪ್ರಾರಂಭಗೊಳ್ಳುವ ಮನೆಮನೆ ಎಣಿಕೆ ಡಿ.4ರವರೆಗೆ ಮುಂದುವರಿಯಲಿದ್ದು, ಚುನಾವಣಾ ಆಯೋಗವು ಡಿ.9ರಂದು ಕರಡು ಮತದಾರರ ಪಟ್ಟಿಗಳನ್ನು ಬಿಡುಗಡೆಗೊಳಿಸಲಿದೆ. ಜನರು ಮುಂದಿನ ವರ್ಷದ ಜ.8ರವರೆಗೆ ಕರಡು ಪಟ್ಟಿಯ ಕುರಿತು ಆಕ್ಷೇಪಗಳು ಮತ್ತು ಹಕ್ಕು ಕೋರಿಕೆಗಳನ್ನು ಸಲ್ಲಿಸಬಹುದು.
ಈ ಹಂತವು ಬಿಹಾರ್ ಎಸ್ಐಆರ್ ಗಿಂತ ಭಿನ್ನವಾಗಿರಲಿದೆ. ಜನರು ಎಣಿಕೆ ನಮೂನೆಗಳನ್ನು ಮರಳಿಸುವಾಗ ಯಾವುದೇ ದಾಖಲೆಯನ್ನು ಸಲ್ಲಿಸುವ ಅಗತ್ಯವಿಲ್ಲ.
ಈ ರಾಜ್ಯಗಳಲ್ಲಿ 2002-04ರ ಮತದಾರರ ಪಟ್ಟಿಗಳಲ್ಲಿ ಹೆಸರು ಇರುವವರು ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಿಲ್ಲ. ಈ ಪಟ್ಟಿಯಲ್ಲಿರದ ಮತದಾರರೂ ತಮ್ಮ ಹೆತ್ತವರು ಅಥವಾ ನಿಕಟ ಸಂಬಂಧಿಗಳ ಹೆಸರುಗಳು 2002-04 ಪಟ್ಟಿಯಲ್ಲಿದ್ದರೆ ಯಾವುದೇ ದಾಖಲೆಗಳನ್ನು ಒದಗಿಸುವ ಅಗತ್ಯವಿಲ್ಲ. ಹಿಂದಿನ ಪಟ್ಟಿಯಲ್ಲಿರುವ ಹೆಸರಿನೊಂದಿಗೆ ತಮ್ಮ ಹೆಸರನ್ನು ಲಿಂಕ್ ಮಾಡಲು ಸಾಧ್ಯವಾಗದವರು ಮಾತ್ರ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಅಂತಹ ಮತದಾರರಿಗೆ ಡಿ.9ರಿಂದ ಜ.31ರ ನಡುವೆ ನೋಟಿಸ್ ಗಳನ್ನು ಹೊರಡಿಸಲಾಗುವುದು.
ಚುನಾವಣಾ ಆಯೋಗದ ಪ್ರಕಾರ ಶೇ.90ರಷ್ಟು ಮತದಾರರು ಯಾವುದೇ ದಾಖಲೆಗಳನ್ನು ಒದಗಿಸುವ ಅಗತ್ಯವಿರುವುದಿಲ್ಲ.







