ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇನಲ್ಲಿ ಭೀಕರ ಅಪಘಾತ: ಐವರು ಮೃತ್ಯು, 60 ಜನರಿಗೆ ಗಾಯ
ವಾಣಿಯಂಬಾಡಿ: ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಮಿಳುನಾಡು ಸರಕಾರದ ಸಾರಿಗೆ ಬಸ್ ಮತ್ತು ಒಮ್ನಿ ಬಸ್ ಮುಖಾಮುಖಿ ಢಿಕ್ಕಿಯಾಗಿ ಐವರು ಮೃತಪಟ್ಟು, ಸುಮಾರು 64 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶನಿವಾರ ನಸುಕಿನ ವೇಳೆಯಲ್ಲಿ ವರದಿಯಾಗಿದೆ.
ಗುಡುವಂಚೇರಿಯ ರಿತಿಕಾ (32), ವಾಣಿಯಂಬಾಡಿಯ ಮೊಹಮ್ಮದ್ ಫಿರೋಝ್ (37), ಸಾರಿಗೆ ಬಸ್ ಚಾಲಕ ಕೆ.ಎಲುಮಲೈ (47) ಮತ್ತು ಚಿತ್ತೂರಿನ ಬಿ ಅಜಿತ್ (25) ಸ್ಥಳದಲ್ಲೇ ಮೃತಪಟ್ಟರೆ, ಒಮ್ನಿ ಬಸ್ ಚಾಲಕ ಎನ್. ಸೈಯದ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು ಬೆಂಗಳೂರಿನಿಂದ ಚೆನ್ನೈನತ್ತ ಹೊರಟಿತ್ತು. ತಿರುಪತ್ತೂರು ಜಿಲ್ಲೆಯ ಚೆಟ್ಟಿಯಪ್ಪನ್ನೂರು ಬಳಿ ಎದುರಿನಿಂದ ಬಂದ ಒಮ್ನಿ ಬಸ್ಸಿಗೆ ಢಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಎರಡು ವಾಹನಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಸುಮಾರು ಹತ್ತು ಆಂಬ್ಯುಲೆನ್ಸ್ಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ ಎಂದು ವರದಿಯಾಗಿದೆ.