ಸುರಂಗ ನಿರ್ಮಾಣದ ವೇಳೆ ತುರ್ತು ಸಂದರ್ಭದಲ್ಲಿ ಪಾರಾಗಲು ಬೇಕಾದ ದಾರಿಯನ್ನು ಮಾಡದೆ ನಿಯಮಾವಳಿ ಉಲ್ಲಂಘನೆ
ಉತ್ತರಾಖಂಡ ಸುರಂಗ ಕುಸಿತಕ್ಕೆ ತಜ್ಞರ ಕಳವಳ
Photo: PTI
ಡೆಹ್ರಾಡೂನ್/ಉತ್ತರಕಾಶಿ: ಕಳೆದ 150 ಗಂಟೆಗಳಿಂದ ಸಿಲ್ಕ್ಯಾರ ಸುರಂಗದಲ್ಲಿ 40 ಮಂದಿ ಕಾರ್ಮಿಕರು ಸಿಲುಕಿಕೊಂಡಿದ್ದು, ಚಾರ್ ಧಾಮ್ ರಸ್ತೆ ಯೋಜನೆಯಡಿ ನಿರ್ಮಿಸಲಾಗಿರುವ ರಕ್ಷಣಾ ಮಾರ್ಗದ ಸುರಕ್ಷತೆ ಕುರಿತು ಇದೀಗ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
"ನಿಯಮಾವಳಿಗಳ ಪ್ರಕಾರ, ಇಷ್ಟು ಉದ್ದನೆಯ ಸುರಂಗ ಮಾರ್ಗದಲ್ಲಿ ತುರ್ತು ಸಂದರ್ಭಗಳು ಉದ್ಭವಿಸಿದಾಗ ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಪಾರಾಗುವ ಮಾರ್ಗಗಳು ಇರಲೇಬೇಕಾಗುತ್ತದೆ" ಎಂದು ಭಾರತೀಯ ಭೌಗೋಳಿಕ ಸಮೀಕ್ಷಾ ಸಂಸ್ಥೆಯ ಮಾಜಿ ನಿರ್ದೇಶಕ ಪಿ.ಸಿ.ನವಾನಿ ಅಭಿಪ್ರಾಯ ಪಟ್ಟಿದ್ದಾರೆ.
"ಇದಲ್ಲದೆ, 4.5 ಕಿಮೀ ಉದ್ದದ ಸಿಲ್ಕ್ಯಾರ ಸುರಂಗ ಮಾರ್ಗದಲ್ಲಿ ಬೆಟ್ಟದ ಸಡಿಲ ಅಥವಾ ಮೃದು ಭಾಗಗಳೆಂದು ಗುರುತಿಸಲಾದ ಕಡೆ ಲಭ್ಯವಿರುವ ಸಾಧನಗಳ ಮೂಲಕ ಹೆಚ್ಚುವರಿ ನೆರವು ನೀಡಬೇಕಿತ್ತು. ಭಾರತದಲ್ಲಿ ಸುರಂಗ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಳ್ಳುವ ಕಂಪನಿಗಳು ಅಥವಾ ಏಜೆನ್ಸಿಗಳು ಭೂಗೋಳ ತಜ್ಞರು ನೀಡುವ ಸುರಕ್ಷತಾ ಸಲಹೆಗಳನ್ನು ಉಪೇಕ್ಷಿಸಲೇ ಬಯಸುತ್ತವೆ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ನವಯುಗ ಕನ್ಸ್ಟ್ರಕ್ಷನ್ ಸಂಸ್ಥೆಗೆ ಸಿಲ್ಕ್ಯಾರ-ಬಾರ್ಕೋಟ್ ಸುರಂಗ ಮಾರ್ಗಕ್ಕಾಗಿ ವಿವರವಾದ ವಿನ್ಯಾಸ ಸೇವೆಯನ್ನು ಒದಗಿಸಿದ್ದ ಯೂರೋಪ್ ಮೂಲದ ಬರ್ನಾಡ್ ಗ್ರೂಪೆ ಸಂಸ್ಥೆಯು, "ಸುರಂಗ ನಿರ್ಮಾಣ ಕಾಮಗಾರಿಯು ಮುಂದುವರಿದಿರುವಾಗ, ಭೌಗೋಳಿಕ ಪರಿಸ್ಥಿತಿಯು ಟೆಂಡರ್ ದಾಖಲೆಗಳಲ್ಲಿ ಅಂದಾಜಿಸಿರುವುದಕ್ಕಿಂತಲೂ ಹೆಚ್ಚು ಸವಾಲಿನದ್ದಾಗಿದೆ ಎಂಬುದು ರುಜುವಾತಾಗಿದೆ" ಎಂದು ಪ್ರತಿಕ್ರಿಯಿಸಿದೆ.
ಉತ್ತರಾಖಂಡದಲ್ಲಿ ನಡೆಯುತ್ತಿರುವ ಎಲ್ಲ ಎಲ್ಲ ಸುರಂಗ ಯೋಜನೆಗಳ ಕುರಿತು ಪರಾಮರ್ಶೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರಕಟಿಸಿದ್ದಾರೆ.