VVPAT ಗಳೆಂದರೇನು? ಜೈರಾಮ್ ರಮೇಶ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದೇಕೆ?
Photo: PTI
ಹೊಸದಿಲ್ಲಿ: VVPAT ಗಳ ಕುರಿತು ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲು ಇಂಡಿಯಾ ಮೈತ್ರಿಕೂಟದ ನಾಯಕರಿಗೆ ಸಮಯಾವಕಾಶ ಒದಗಿಸಬೇಕು ಎಂದು ಡಿಸೆಂಬರ್ 30ರಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ ಎಂದು indianexpress.com ವರದಿ ಮಾಡಿದೆ.
ಇಂಡಿಯಾ ಮೈತ್ರಿಕೂಟದ ನಾಯಕರ ಸಭೆಯಲ್ಲಿ ಹಿಂದಿನ ದಿನ ಕೈಗೊಂಡಿದ್ದ ನಿರ್ಣಯದಂತೆ VVPATಬಳಕೆಯ ಕುರಿತು ಚರ್ಚಿಸಿ, ಸಲಹೆಗಳನ್ನು ನೀಡಲು ಡಿಸೆಂಬರ್ 20, 2023ರಂದು ಇಂಡಿಯಾ ಮೈತ್ರಿಕೂಟದ ನಾಯಕರು ಭಾರತೀಯ ಚುನಾವಣಾ ಆಯೋಗದೊಂದಿಗಿನ ಸಂದರ್ಶನಕ್ಕಾಗಿ ಮನವಿ ಮಾಡಿದ್ದರು ಎಂದು ರಾಜೀವ್ ಕುಮಾರ್ ಅವರಿಗೆ ಬರೆದಿರುವ ಪತ್ರದಲ್ಲಿ ಜೈರಾಮ್ ರಮೇಶ್ ನೆನಪಿಸಿದ್ದಾರೆ. ಇಂಡಿಯಾ ಮೈತ್ರಿಕೂಟದ ನಿರ್ಣಯದಂತೆ VVPAT ಚೀಟಿಗಳ ಶೇ. 100 ಪರಿಶೀಲನೆ ನಡೆಯಬೇಕು ಎಂದು ಒತ್ತಾಯಿಸಲಾಗಿತ್ತು.
VVPAT ಗಳು ಎಂದರೇನು?
ಮತ ಚಲಾವಣೆಯಾದಾಗ, ವಿದ್ಯುನ್ಮಾನ ಮತದಾನ ಯಂತ್ರಕ್ಕೆ ಸಂಪರ್ಕಗೊಂಡಿರುವ ಮತ ಘಟಕದೊಂದಿಗೆ ವೋಟರ್ ವೆರಿಫೈಯಬಲ್ ಆಡಿಟ್ ಟ್ರಯಲ್ (VVPAT) ಯಂತ್ರವನ್ನು ಜೋಡಿಸಲಾಗಿರುತ್ತದೆ. ಈ ಯಂತ್ರವು ಮತದಾರರು ಚಲಾಯಿಸಿದ ಆಯ್ಕೆಯ ಪ್ರತಿಯನ್ನು ಕಾಗದವೊಂದರಲ್ಲಿ ಮುದ್ರಿಸುತ್ತದೆ. ಈ ಪ್ರತಿಯು ಗಾಜಿನ ಹಿಂಭಾಗ ಇರುತ್ತದಾದರೂ, ಮತದಾರನು ಈ ಮುದ್ರಿತ ಚೀಟಿಯನ್ನು ಏಳು ಸೆಕೆಂಡುಗಳ ಕಾಲ ವೀಕ್ಷಿಸಿ, ಆ ಚೀಟಿಯು ಕೆಳಗಿರುವ ಪೆಟ್ಟಿಗೆಗೆ ಬೀಳುವ ಮುನ್ನ ತನ್ನ ಮತ ಚಲಾವಣೆಯು ಸಮರ್ಪಕವಾಗಿ ದಾಖಲಾಗಿದೆ ಎಂದು ಖಾತರಿಪಡಿಸಿಕೊಳ್ಳಬಹುದಾಗಿದೆ.
ಚುನಾವಣಾ ಆಯೋಗವು ಮತದಾನ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕವಾಗಿಸಲು ವಿದ್ಯುನ್ಮಾನ ಮತ ಯಂತ್ರದ ಕುರಿತು ಚರ್ಚಿಸಲು ರಾಜಕೀಯ ಪಕ್ಷಗಳೊಂದಿಗೆ 2010ರಲ್ಲಿ ಸಭೆ ನಡೆಸಿದ್ದಾಗ VVPAT ಯಂತ್ರ ಬಳಕೆಯ ಯೋಜನೆಯು ಮುಂದೆ ಬಂದಿತ್ತು. ಈ ಯೋಜನೆಯನ್ನು ಚರ್ಚಿಸಿದ ನಂತರ ಚುನಾವಣಾ ಆಯೋಗವು, ಈ ವಿಚಾರವನ್ನು ತಾಂತ್ರಿಕ ತಜ್ಞರ ಸಮಿತಿಗೆ ಶಿಫಾರಸು ಮಾಡಿತ್ತು.
ವಿದ್ಯುನ್ಮಾನ ಮತ ಯಂತ್ರಗಳನ್ನು ಉತ್ಪಾದಿಸುವ ಎರಡು ಸಾರ್ವಜನಿಕ ಉದ್ಯಮಗಳಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಹಾಗೂ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ, ವಿವಿಪ್ಯಾಟ್ ನ ಪ್ರಾತ್ಯಕ್ಷಿಕೆ ಯಂತ್ರಗಳನ್ನು ಸಿದ್ಧಪಡಿಸಿದ್ದವು. ಇದರ ಬೆನ್ನಿಗೇ ಲಡಾಖ್, ತಿರುವನಂತಪುರಂ, ಚಿರಾಪುಂಜಿ, ಪೂರ್ವ ದಿಲ್ಲಿ ಹಾಗೂ ಜೈಸ್ಮಲೇರ್ ನಲ್ಲಿ 2011ರಲ್ಲಿ ಇವುಗಳ ಪ್ರಾಯೋಗಿಕ ಬಳಕೆ ನಡೆದಿತ್ತು. ಕೊನೆಗೆ, ವಿನ್ಯಾಸವನ್ನು ಮತ್ತಷ್ಟು ಸಮರ್ಪಕವಾಗಿಸಿದ ನಂತರ, ಮತ್ತಷ್ಟು ಪ್ರಾಯೋಗಿಕ ಬಳಕೆ ಏರ್ಪಡಿಸಿದ ನಂತರ ಹಾಗೂ ರಾಜಕೀಯ ಪಕ್ಷಗಳಿಂದ ಈ ಕುರಿತು ಅಭಿಪ್ರಾಯವನ್ನು ಪಡೆದ ನಂತರ ಫೆಬ್ರವರಿ 2013ರಲ್ಲಿ ತಾಂತ್ರಿಕ ತಜ್ಞರ ಸಮಿತಿಯು VVPAT ಯಂತ್ರಗಳ ವಿನ್ಯಾಸವನ್ನು ಅಂತಿಮಗೊಳಿಸಲಾಗಿತ್ತು.
ಎಷ್ಟು VVPAT ಚೀಟಿಗಳನ್ನು ಎಣಿಕೆ ಮಾಡಲಾಗುತ್ತಿದೆ?
VVPAT ಯಂತ್ರಗಳ ನಿಖರತೆಯನ್ನು ಪರಿಶೀಲಿಸಲು ಎಷ್ಟು ಶೇಕಡಾವಾರು ಪ್ರಮಾಣದ VVPAT ಚೀಟಿಗಳನ್ನು ಎಣಿಸಬೇಕಾಗುತ್ತದೆ ಎಂಬ ಪ್ರಶ್ನೆಯು ಉದ್ಭವವಾದಾಗ, ಚುನಾವಣಾ ಆಯೋಗವು ಭಾರತೀಯ ಸಾಂಖ್ಯಿಕ ಸಂಸ್ಥೆಗೆ “ಗಣಿತದಲ್ಲಿ ನಿಖರವಾಗಿರಬೇಕು, ಸಾಂಖ್ಯಿಕವಾಗಿ ವಿಶ್ವಾಸಾರ್ಹವಾಗಿರಬೇಕು ಹಾಗೂ ಪ್ರಾಯೋಗಿಕವಾಗಿ ವಿದ್ಯುನ್ಮಾನ ಮತ ಯಂತ್ರಗಳೊಂದಿಗೆ ವಿವಿಪ್ಯಾಟ್ ಯಂತ್ರಗಳ ಚೀಟಿಗಳ ಆಂತರಿಕ ಲೆಕ್ಕ ಪರಿಶೋಧನೆಯು ತಾಳೆಯಾಗುವಂತಿರಬೇಕು” ಎಂದು ಸೂಚಿಸಿ, ಈ ಕುರಿತು ಸೂಕ್ತ ಸಲಹೆಯೊಂದಿಗೆ ಮುಂದೆ ಬರುವಂತೆ ಅದಕ್ಕೆ ಸೂಚಿಸಲಾಗಿತ್ತು ಎಂದು ಚುನಾವಣಾ ಆಯೋಗದ ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ.
ಇದಕ್ಕೆ ಪ್ರತಿಯಾಗಿ, ತನ್ನ ಶಿಫಾರಸು ನೀಡಿದ್ದ ಭಾರತೀಯ ಸಾಂಖ್ಯಿಕ ಸಂಸ್ಥೆಯು, “ಒಂದು ವೇಳೆ ಆಯ್ಕೆ ಮಾಡಿಕೊಂಡಿರುವ ವಿದ್ಯುನ್ಮಾನ ಮತ ಯಂತ್ರದೊಂದಿಗೆ ವಿವಿಪ್ಯಾಟ್ ಎಣಿಕೆಯು ತಾಳೆಯಾಗುವಂತಿದ್ದರೆ, ದೋಷಪೂರಿತ ವಿದ್ಯುನ್ಮಾನ ಮತ ಯಂತ್ರಗಳ ಪ್ರಮಾಣವು ಶೇ. 2ಕ್ಕಿಂತ ಕಡಿಮೆ ಇರುತ್ತದೆ ಎಂದು ಅಪರಿಮಿತ ವಿಶ್ವಾಸದೊಂದಿಗೆ ಪರಿಗಣಿಸಬಹುದಾಗಿದೆ” ಎಂದು ಹೇಳಿತ್ತು. ಮಾರ್ಚ್ 2019ರಲ್ಲಿ ಪ್ರತಿ ಕ್ಷೇತ್ರದ 479 ವಿದ್ಯುನ್ಮಾನ ಮತಯಂತ್ರಗಳ ಮಾದರಿಯನ್ನು ವಿವಿಪ್ಯಾಟ್ ಚೀಟಿಯೊಂದಿಗೆ ತಾಳೆ ಮಾಡಬಹುದು ಎಂದು ಭಾರತೀಯ ಸಾಂಖ್ಯಿಕ ಸಂಸ್ಥೆಯು ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿತ್ತು.
ಇಂಡಿಯಾ ಮೈತ್ರಿಕೂಟವೇಕೆ ಶೇ. 100ರಷ್ಟು VVPAT ಚೀಟಿಗಳ ಎಣಿಕೆಗೆ ಆಗ್ರಹಿಸುತ್ತಿದೆ?
ಡಿಸೆಂಬರ್ 21ರಂದು ತಾನು ಕೈಗೊಂಡ ನಿರ್ಣಯದಲ್ಲಿ ಇಂಡಿಯಾ ಮೈತ್ರಿಕೂಟವು, “VVPAT ಚೀಟಿಗಳು ಪೆಟ್ಟಿಗೆಯೊಂದಕ್ಕೆ ಬೀಳುವ ಬದಲಾಗಿ, ಆ ಚೀಟಿಯನ್ನು ಮತದಾರನಿಗೆ ಹಸ್ತಾಂತರಿಸಿ, ಆತ ಅದನ್ನು ಪರಿಶೀಲಿಸಿದ ನಂತರ ಮತ್ತೊಂದು ಮತಪೆಟ್ಟಿಗೆಗೆ ಹಸ್ತಾಂತರಿಸಲು ಅವಕಾಶ ನೀಡಬೇಕು. ಇದಾದ ನಂತರ ಶೇ. 100ರಷ್ಟು VVPAT ಚೀಟಿಗಳ ಎಣಿಕೆಯನ್ನು ಮಾಡಬಹುದು. ಇದರಿಂದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಬಗ್ಗೆ ಜನರಲ್ಲಿ ವಿಶ್ವಾಸ ಮರು ಸ್ಥಾಪನೆಯಾಗುತ್ತದೆ” ಎಂದು ಅಭಿಪ್ರಾಯ ಪಟ್ಟಿತ್ತು.
ಚುನಾವಣಾ ಆಯೋಗ ಏನು ಹೇಳುತ್ತದೆ?
VVPAT ಚೀಟಿಗಳ ಕುರಿತು ಸುಪ್ರೀಂ ಕೋರ್ಟ್ ಗೆ ತನ್ನ ಅಭಿಪ್ರಾಯವನ್ನು ತಿಳಿಸಿದ್ದ ಚುನಾವಣಾ ಆಯೋಗವು, ಪ್ರತಿ ವಿಧಾನಸಭಾ ಕ್ಷೇತ್ರದಿಂದ ಯಾದೃಚ್ಛಿಕವಾಗಿ 5 ವಿದ್ಯುನ್ಮಾನ ಮತ ಯಂತ್ರವನ್ನು ಆಯ್ಕೆ ಮಾಡಿದರೆ, ಭಾರತದಾದ್ಯಂತ ಇರುವ ಒಟ್ಟು ವಿಧಾನಸಭಾ ಕ್ಷೇತ್ರಗಳ ಪೈಕಿ 20,600 EVM-VVPAT ವ್ಯವಸ್ಥೆಯನ್ನು ತಾಳೆ ಮಾಡಿದಂತೆ ಆಗುತ್ತದೆ. ಇದು ಐಎಸ್ಐ ಶಿಫಾರಸು ಮಾಡಿರುವ 479 ವಿದ್ಯುನ್ಮಾನ ಮತ ಯಂತ್ರಗಳಿಗಿಂತ ಅತಿ ಹೆಚ್ಚಾಗಿದೆ ಎಂದು ಪ್ರತಿಪಾದಿಸಿತ್ತು.
2017ರಲ್ಲಿ VVPAT ಯಂತ್ರಗಳನ್ನು ಪರಿಚಯಿಸಿದಂದಿನಿಂದ ಇಲ್ಲಿಯವರೆಗೆ ಚುನಾವಣಾ ಆಯೋಗವು 25 ದೂರಗಳನ್ನು (2019ರಲ್ಲಿನ 17 ದೂರುಗಳನ್ನು ಸೇರಿ) ಸ್ವೀಕರಿಸಿದ್ದು, ಈ ದೂರುಗಳು 118 ಕೋಟಿ ಮತದಾರರ ಪೈಕಿ ಸೇರಿದ್ದವು. ನಂತರ ಈ ಎಲ್ಲ ದೂರುಗಳು ಸುಳ್ಳು ಎಂದು ಪತ್ತೆಯಾದವು ಎಂದು ಚುನಾವಣಾ ಆಯೋಗ ಹೇಳಿದೆ.
VVPAT ಚೀಟಿಗಳು ಕೇವಲ ಲೆಕ್ಕ ಪರಿಶೋಧನೆಯ ಪ್ರಯೋಗವಾಗಿದ್ದು, ಮತದಾರರು ಆ ಕ್ಷಣವೇ ತಮ್ಮ ಮತಗಳನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಆದರೆ, ಸುಪ್ರೀಂ ಕೋರ್ಟ್ ಆದೇಶದಂತೆ, ವಿವಿಪ್ಯಾಟ್ ಚೀಟಿಗಳನ್ನು ಸಾಂಖ್ಯಿಕವಾಗಿ ವಿಶ್ವಾಸಾರ್ಹ ಆಧಾರದಲ್ಲಿ ತಾಳೆ ಮಾಡಲಾಗುತ್ತಿದೆ. ಅದರ ಬದಲು ಶೇ. 100ರಷ್ಟು VVPAT ಚೀಟಿಗಳನ್ನು ತಾಳೆ ಮಾಡುವುದು ಚುನಾವಣೆಯಲ್ಲಿ ವೇಗದ ಫಲಿತಾಂಶಕ್ಕೆ ಹಿನ್ನಡೆಯಾಗಬಹುದು. ಅದು ಹೆಚ್ಚು ಸಮಯ ತೆಗೆದುಕೊಳ್ಳುವುದರ ಜೊತೆಗೆ ಮತ್ತೆ ಮತ ಪತ್ರ ಚಲಾವಣೆಯ ವ್ಯವಸ್ಥೆಗೆ ನಮ್ಮನ್ನು ಕರೆದೊಯ್ಯುತ್ತದೆ” ಎಂದು ಶೇ. 100ರಷ್ಟು VVPAT ಚೀಟಿಗಳ ತಾಳೆ ಮಾಡಬೇಕು ಎಂಬ ವಿರೋಧ ಪಕ್ಷಗಳ ಆಗ್ರಹವನ್ನು ಚುನಾವಣಾ ಆಯೋಗ ತಳ್ಳಿ ಹಾಕಿದೆ.