ಅಜಲಾಪುರ್ ದಲಿತರ ಓಣಿಯಲ್ಲಿ ನೀರಿಗಾಗಿ ಹಾಹಾಕಾರ

ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಅಜಲಾಪುರ್ ಗ್ರಾಮದ ಪರಿಶಿಷ್ಟ ಜಾತಿ ಓಣಿಯಲ್ಲಿ ಕಳೆದ ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಸ್ಥಳೀಯರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಬೇಸಿಗೆಯ ತಾಪಮಾನ ಏರಿಕೆಯಾಗುತ್ತಿದ್ದಂತೆ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದ್ದು, ಮಹಿಳೆಯರು ಹಾಗೂ ಮಕ್ಕಳು ದಿನನಿತ್ಯ ಬಿಂದಿಗೆ ಹಿಡಿದು ಬೇರೆ ಓಣಿಗಳಿಗೆ ಅಲೆದಾಡುತ್ತಿದ್ದಾರೆ. ಪೈಪ್ಲೈನ್ ವ್ಯವಸ್ಥೆ ಇದ್ದರೂ ಸಮರ್ಪಕವಾಗಿ ನೀರು ಪೂರೈಕೆ ಆಗದ ಕಾರಣ ಜನರು ದೂರದ ಪ್ರದೇಶಗಳಿಗೆ ತೆರಳಿ ನೀರು ತರುವ ಅನಿವಾರ್ಯ ಪರಿಸ್ಥಿತಿ ಇದೆ. ಈ ಕುರಿತು ಹಲವು ಬಾರಿ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಲ್ಕೈದು ವರ್ಷಗಳಿಂದ ನಮ್ಮ ಓಣಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೆಯೇ ಮುಂದುವರಿದಿದೆ. ಎಷ್ಟು ಬಾರಿ ಪಂಚಾಯತ್ ಅಧಿಕಾರಿಗಳಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಗ್ರಾಮದ ಉಳಿದ ಓಣಿಗಳಿಗೆ ನೀರು ಬರುತ್ತಿದೆ, ಆದರೆ ನಮ್ಮ ಓಣಿಯ ಜನ ಮಾತ್ರ ತೊಂದರೆ ಅನುಭವಿಸುತ್ತಿದ್ದಾರೆ. ನಮಗೆ ಬೇಡಿಕೆ ಒಂದೇ, ‘ಕುಡಿಯಲು ಶುದ್ಧ ನೀರು ಕೊಡಬೇಕು’
- ಬಸಮ್ಮ, ನಿವಾಸಿ
ಕುಡಿಯಲು ಹಾಗೂ ದಿನನಿತ್ಯ ಬಳಕೆಗೆ ಬೇಕಾದ ನೀರು ಸಿಗದ ಪರಿಸ್ಥಿತಿ ನಮ್ಮ ಓಣಿಯಲ್ಲಿದೆ. ಜನರು ತುಂಬಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ.
- ರಾಜು, ನಿವಾಸಿ
ಕೆಲವು ಮನೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಮಾಹಿತಿ ಬಂದಿದೆ. ಸಮಸ್ಯೆ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ನಾಳೆಯೊಳಗೆ ಪರಿಶೀಲನೆ ನಡೆಸಿ ನೀರು ಸರಬರಾಜು ವ್ಯವಸ್ಥೆ ಸುಧಾರಿಸಲಾಗುವುದು.
- ಶರಣಪ್ಪ ಮೈಲಾರಿ,
ಪಿಡಿಒ, ಅಜಲಾಪುರ್
ಜೆಜೆಎಂ ಯೋಜನೆಯ ನೀರು ಇನ್ನೂ ಮರೀಚಿಕೆ
ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮದಲ್ಲಿ ಕಾಮಗಾರಿ ಪೂರ್ಣಗೊಂಡು ಎರಡು ವರ್ಷ ಕಳೆದರೂ, ಇಲ್ಲಿಯವರೆಗೆ ಮನೆಗಳಿಗೆ ಒಂದು ಹನಿ ನೀರು ಬಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಳಪೆ ಕಾಮಗಾರಿಯೇ ಈ ಸಮಸ್ಯೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.






