ಸ್ವಚ್ಛತೆಗೆ ಪುರಸ್ಕಾರ ಪಡೆದಿದ್ದ ಗ್ರಾಮದಲ್ಲೀಗ ಸಾಂಕ್ರಾಮಿಕ ಭೀತಿ!

ಸಂಡೂರು: ತಾಲೂಕಿನ ನಿಡುಗುರ್ತಿ ಗ್ರಾಪಂ ವ್ಯಾಪ್ತಿಯ 72 ಮಲ್ಲಾಪುರ ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯ ಕೊರತೆಯಿಂದ ಗ್ರಾಮಸ್ಥರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಯಿಂದ ಮಳೆ ನೀರು ಹಾಗೂ ತ್ಯಾಜ್ಯ ನೀರು ಒಂದೇ ಕಡೆ ಸೇರಿ ಗ್ರಾಮದ ಹಲವೆಡೆ ಕೆಸರುಮಯ ವಾತಾವರಣ ನಿರ್ಮಾಣವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಗ್ರಾಮದ ರಸ್ತೆಗಳಲ್ಲಿ ನೀರು ನಿಂತುಕೊಳ್ಳುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸಂಜೆ ಸಮಯದಲ್ಲಿ ಜನರು ಮನೆಯಿಂದ ಹೊರಗೆ ಬರಲು ಸಹ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳಿಂದ ವೃದ್ಧರ ತನಕ ಆರೋಗ್ಯ ಸಮಸ್ಯೆಗಳ ಭೀತಿ ಕಾಡುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಹೆಚ್ಚಾಗಿದೆ.
ವಿಶೇಷವೆಂದರೆ, ಇದೇ ಗ್ರಾಪಂ ಕೆಲವು ವರ್ಷಗಳ ಹಿಂದೆ ‘ಸ್ವಚ್ಛ ಗ್ರಾಮ’ ಎಂಬ ರಾಜ್ಯ ಮಟ್ಟದ ಪುರಸ್ಕಾರ ಪಡೆದಿದ್ದರೂ, ಪ್ರಸ್ತುತ ಸ್ವಚ್ಛತೆ ಕೇವಲ ಹೆಸರಿಗಷ್ಟೇ ಉಳಿದಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಚರಂಡಿ ಅವ್ಯವಸ್ಥೆ, ತ್ಯಾಜ್ಯ ವಿಲೇವಾರಿ ಸಮಸ್ಯೆ ಮುಂದುವರಿದಿದ್ದು, ಪಂಚಾಯಿತಿ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.
ಹಲವಾರು ಬಾರಿ ಸಮಸ್ಯೆಯನ್ನು ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಶಾಶ್ವತ ಪರಿಹಾರ ಸಿಗದೆ ತಾತ್ಕಾಲಿಕ ಕಾಮಗಾರಿಗಳಿಗೆ ಸೀಮಿತವಾಗುತ್ತಿದೆ. ಮಳೆ ಬಂದಾಗ ಮಾತ್ರ ಸಮಸ್ಯೆ ಗಂಭೀರವಾಗಿ ಕಾಣಿಸಿಕೊಂಡು, ಬಳಿಕ ಮತ್ತೆ ಅದೇ ಸ್ಥಿತಿ ಮುಂದುವರಿಯುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಪ್ರಮುಖ ಬೀದಿಗಳು, ಮನೆಗಳ ಮುಂಭಾಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ನೀರು ನಿಂತು ದುರ್ವಾಸನೆ ಹರಡುತ್ತಿದೆ. ಚರಂಡಿಗಳನ್ನು ಸಮರ್ಪಕವಾಗಿ ನಿರ್ಮಿಸಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಯೋಜನೆ ರೂಪಿಸಿ ಗ್ರಾಮಗಳ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಳೆಗಾಲ ಆರಂಭಕ್ಕೂ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಂಡು ಚರಂಡಿ ಸ್ವಚ್ಛತೆ, ತ್ಯಾಜ್ಯ ತೆರವು ಹಾಗೂ ಆರೋಗ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಒಂದು ಕಾಲದಲ್ಲಿ ಈ ಪಂಚಾಯಿತಿ ‘ಸ್ವಚ್ಛ ಗ್ರಾಮ’ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಇಂದು ಚರಂಡಿ ಅವ್ಯವಸ್ಥೆ, ತ್ಯಾಜ್ಯ ಸಮಸ್ಯೆ ಹಾಗೂ ಕೆಸರಿನ ವಾತಾವರಣ ಜನರ ಆರೋಗ್ಯಕ್ಕೆ ಅಪಾಯವಾಗಿದೆ. ಅಧಿಕಾರಿಗಳು ತಾತ್ಕಾಲಿಕ ಕಾಮಗಾರಿಗಳಲ್ಲಿ ಸೀಮಿತವಾಗದೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು. ಗ್ರಾಮಸ್ಥರ ಮೂಲಭೂತ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವುದು ಪಂಚಾಯಿತಿಯ ಜವಾಬ್ದಾರಿಯಾಗಿದೆ.
-ಬಸವರಾಜ, ಮಾಜಿ ಗ್ರಾಪಂ ಸದಸ್ಯ
ನಾವು ಗ್ರಾಮಸ್ಥರು ಹಲವು ಬಾರಿ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಮಳೆ ಬಂದಾಗಲೆಲ್ಲಾ ಚರಂಡಿ ನೀರು ಮನೆಗಳ ಮುಂದೆ ನಿಂತು ದುರ್ವಾಸನೆ ಹರಡುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿ ಜನರು ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಪಂ ತಕ್ಷಣ ಸಮಗ್ರ ಚರಂಡಿ ವ್ಯವಸ್ಥೆ ಹಾಗೂ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು.
-ಸ್ವಾಮಿ, ಸ್ಥಳೀಯ ಯುವಕ






