ಯುದ್ಧದಲ್ಲಿ ಎಐಗೆ ಅನಿವಾರ್ಯ ಮಾನವ ಸಾರಥ್ಯ

ಕೇವಲ ಚಾಟ್ ಜಿಪಿಟಿಯಂತಹ ಎಐಯನ್ನು ಬಳಸುವುದರಿಂದಲೇ ವಿದ್ಯಾರ್ಥಿಗಳು ಯೋಚನಾ ಶಕ್ತಿ ಮತ್ತು ಬರವಣಿಗೆಯಲ್ಲಿ ದುರ್ಬಲರಾಗುತ್ತಾರೆ. ಹೀಗಿರುವಾಗ, ಯೋಧರು ಯುದ್ಧದಲ್ಲಿ ಯಂತ್ರಗಳನ್ನೇ ಅತಿಯಾಗಿ ನಂಬತೊಡಗಿದರೆ ಏನಾಗಬಹುದು? ಬಳಕೆದಾರ ರನ್ನು ಮೆಚ್ಚಿಸುವ ಸಲುವಾಗಿ, ಎಐ ಕೆಟ್ಟ ಯೋಜನೆಗಳಿಗೂ ಒಪ್ಪಿಗೆ ಸೂಚಿಸಬಹುದು. ಡಿಫೆನ್ಸ್ ವನ್ ದಾಖಲಿಸಿರುವಂತೆ ನೈಜ ಅಪಾಯ ಇರುವುದು ಆಕ್ರಮಣಕಾರಿ ರೋಬೊಟ್‌ಗಳಲ್ಲಲ್ಲ, ಬದಲಿಗೆ ದುರ್ಬಲ ಮಾನವ ನಿರ್ಧಾರಗಳಲ್ಲಿ!
ಇತ್ತೀಚಿನ ಅಮೆರಿಕ - ಇರಾನ್ ಕದನ ನಾವು ದೊಡ್ಡ ಮಿಲಿಟರಿ ಆಯ್ಕೆಗಳಿಗಾಗಿ ಎಐ ಮೇಲೆ ಎಷ್ಟರಮಟ್ಟಿಗೆ ಅವಲಂಬನೆ ಹೊಂದಿದ್ದೇವೆ ಎನ್ನುವುದನ್ನು ಸಾಬೀತುಪಡಿಸಿದೆ. ಹಾಗೆಂದು ಇದು ನಿಜಕ್ಕೂ ಜಗತ್ತಿನ ಮೊತ್ತಮೊದಲ ‘ಎಐ ಯುದ್ಧ’ ಏನಲ್ಲ. ಆದರೂ, ಇದು ಒಂದಷ್ಟು ಗಂಭೀರ ಆತಂಕಗಳನ್ನು ಸೃಷ್ಟಿಸಿದೆ. ಬಹಳಷ್ಟು ತಜ್ಞರು ಹೇಳುವಂತೆ, ತಪ್ಪುಗಳು ಬಹುತೇಕ ಬಾರಿ ಮಾನವರ ದೋಷದಿಂದ ಉಂಟಾಗುತ್ತದೆಯೇ ಹೊರತು, ಯಂತ್ರಗಳ ತಪ್ಪಿನಿಂದಲ್ಲ. ಯಾವಾಗ ಮಾನವರ ಸರಿಯಾದ ನಿರ್ಣಯ ಕೈಗೊಳ್ಳುವಲ್ಲಿನ ಅಸಮರ್ಥತೆ ಮತ್ತು ಅಸಾಧಾರಣ ಎಐ ಟೂಲ್‌ಗಳು ಜೊತೆಯಾಗುತ್ತವೋ, ಆಗ ಅಪಾಯಗಳ ಸಾಧ್ಯತೆ ಇನ್ನಷ್ಟು ಹೆಚ್ಚಾಗುತ್ತದೆ.
ಸರಳವಾಗಿ ಹೇಳುವುದಾದರೆ, ಎಐ ಕದನದ ಸಂದರ್ಭದಲ್ಲಿ ಕ್ಷಿಪ್ರ ಮಾಹಿತಿ ಮತ್ತು ಸಲಹೆಗಳನ್ನು ನೀಡಬಲ್ಲದು. ಆದರೆ, ಅಂತಿಮ ನಿರ್ಧಾರಗಳನ್ನು ಎಂದಿಗೂ ಮಾನವರೇ ಕೈಗೊಳ್ಳಬೇಕು. ಎಲ್ಲ ದೇಶಗಳೂ ಯಂತ್ರಗಳು ತಮಗೆ ನೆರವಾಗುತ್ತವೆ, ಆದರೆ ನಿರ್ಣಯ ಮಾತ್ರ ಮನುಷ್ಯರ ಕೈಯಲ್ಲಿರಬೇಕು ಎನ್ನುವುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಇರಾನ್ ವಿರುದ್ಧದ ಮಿಲಿಟರಿ ಕ್ರಮದ ಮೊದಲ ದಿನ, ಅಮೆರಿಕನ್ ಪಡೆಗಳು ಮಾವೆನ್ ಸ್ಮಾರ್ಟ್ ಸಿಸ್ಟಮ್‌ಗಳನ್ನು ಬಳಸಿದವು. ಪ್ಯಾಲಾಂತಿರ್ ಸಂಸ್ಥೆ ಅಮೆರಿಕದ ರಕ್ಷಣಾ ಇಲಾಖೆಗಾಗಿಯೇ ಅಭಿವೃದ್ಧಿ ಪಡಿಸಿರುವ ಈ ಎಐ ವ್ಯವಸ್ಥೆ ಯುದ್ಧರಂಗದ ಚಿತ್ರಣ, ಮಾಹಿತಿ ಮತ್ತು ವೀಡಿಯೋಗಳನ್ನು ಬಲುಬೇಗನೆ ಅಧ್ಯಯನ ಮಾಡುತ್ತದೆ. ಬಳಿಕ ಯೋಧರಿಗೆ ಸಂಭಾವ್ಯ ಗುರಿಗಳನ್ನು ಗುರುತಿಸಿ, ಸಂಪೂರ್ಣ ಯುದ್ಧದ ಪ್ರಕ್ರಿಯೆಯನ್ನು ವೇಗಗೊಳಿಸಲು ನೆರವಾಗುತ್ತದೆ. ವರದಿಗಳ ಪ್ರಕಾರ, ಈ ವ್ಯವಸ್ಥೆ ಕೇವಲ 24 ಗಂಟೆಗಳ ಒಳಗಾಗಿ ಬಹುತೇಕ 1,000 ಗುರಿಗಳ ಮೇಲೆ ದಾಳಿ ನಡೆಸಲು ನೆರವಾಗಿದೆ.
ಮಾವೆನ್ ವ್ಯವಸ್ಥೆ ಹಲವು ತಂತ್ರಜ್ಞಾನ ಕಂಪೆನಿಗಳ ಸಾಫ್ಟ್‌ವೇರ್‌ಗಳನ್ನು ಜೊತೆಯಾಗಿಸಿ ತರುತ್ತದೆ ಎಂದು ವಾಶಿಂಗ್ಟನ್ ಪೋಸ್ಟ್ ವರದಿ ವಿವರಿಸಿದೆ. ಮಾವೆನ್ ಮಾಹಿತಿ ಮೇಲ್ನೋಟಕ್ಕೆ ಅಪಾರ ಪ್ರಮಾಣದ ಗುಪ್ತಚರ ವರದಿಗಳು, ಡ್ರೋನ್ ದೃಶ್ಯಾವಳಿಗಳು ಮತ್ತು ಇತರ ಮಾಹಿತಿಗಳಂತೆ ಕಂಡುಬರುತ್ತದೆ. ಬಳಿಕ, ಮಾವೆನ್ ಮಹತ್ವಕ್ಕೆ ಅನುಸಾರವಾಗಿ ಗುರಿಗಳಿಗೆ ರ್ಯಾಂಕಿಂಗ್ ನೀಡುತ್ತದೆ. ಅಪಾರ ಪ್ರಮಾಣದ ಎಐ ಬಳಕೆಯ ಕಾರಣದಿಂದಾಗಿ ಒಂದಷ್ಟು ವರದಿಗಳು ಇದನ್ನು ಮೊದಲ ಎಐ ಯುದ್ಧ ಎಂದು ಕರೆದಿವೆ. ಪಾಲಾಂತಿರ್ ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿಯೂ ಸಹ ಎಐ ಇಷ್ಟೊಂದು ವಿಶಾಲ ವ್ಯಾಪ್ತಿಯಲ್ಲಿ ಯುದ್ಧಕ್ಕೆ ಮಾರ್ಗದರ್ಶನ ನೀಡಿದ ಮೊದಲ ಕಾರ್ಯಾಚರಣೆ ಇದುವೇ ಎಂದಿದ್ದಾರೆ.
ಇಷ್ಟಾದರೂ, ಎಐ ಎನ್ನುವುದು ಬಹಳ ವಿಶಾಲವಾದ ಪದ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಮಿಲಿಟರಿಗಳು ಕ್ಷಿಪಣಿಗಳಲ್ಲಿ, ರೇಡಾರ್‌ಗಳಲ್ಲಿ ಮತ್ತು ರಕ್ಷಣೆಯಲ್ಲಿ ಬಹಳಷ್ಟು ವರ್ಷಗಳಿಂದ, ಅಂದರೆ ಇಂದಿನ ಸ್ಮಾರ್ಟ್ ಉಪಕರಣಗಳ ಬಳಕೆಗೂ ಮುನ್ನವೇ ಸ್ವಯಂಚಾಲಿತ ವ್ಯವಸ್ಥೆಗಳನ್ನು ಬಳಸಿಕೊಂಡಿವೆ. ರಶ್ಯ-ಉಕ್ರೇನ್ ಯುದ್ಧ ಮತ್ತು ಇಸ್ರೇಲ್-ಹಮಾಸ್ ಯುದ್ಧಗಳಲ್ಲೂ ಗುರಿಗಳನ್ನು ಗುರುತಿಸಲು ಮತ್ತು ಅಧ್ಯಯನ ನಡೆಸಲು ಎಐ ಬಳಕೆಯಾಗಿದೆ. ಆದ್ದರಿಂದ, ಇರಾನ್‌ನಲ್ಲಿ ಅಮೆರಿಕದ ಕ್ರಮಗಳು ತೀರಾ ಹೊಸದೇನಲ್ಲ. ಆದರೆ, ಯುದ್ಧದಲ್ಲಿ ಗುರಿಗಳನ್ನು ಗುರುತಿಸಲು ಮಾನವರು ಎಷ್ಟರಮಟ್ಟಿಗೆ ತೊಡಗಿಕೊಳ್ಳಬೇಕು ಎನ್ನುವ ಹಳೆಯ ಪ್ರಶ್ನೆಯನ್ನು ಇವು ನಮಗೆ ನೆನಪಿಸುತ್ತಿವೆ.
ಇದರಲ್ಲಿನ ಪ್ರಮುಖ ಪ್ರಶ್ನೆಗಳು ಕಾನೂನಿನ ನಿಯಮಗಳು, ನೈತಿಕತೆ ಮತ್ತು ಸುರಕ್ಷತೆಯ ಕುರಿತಾಗಿವೆ. ದೇಶಗಳು ಇಂತಹ ತಂತ್ರಜ್ಞಾನಗಳ ಮೇಲೆ ಅತಿಯಾಗಿ ಅವಲಂಬಿತವಾದರೆ ಏನಾಗುತ್ತದೆ? ಜಾಗತಿಕ ಒಪ್ಪಂದಗಳು ಇವುಗಳನ್ನು ಸರಿಯಾಗಿ ನಿಯಂತ್ರಿಸಲು ಸಾಧ್ಯವೇ?
ಅಧಿಕೃತವಾಗಿ, ಮಾವೆನ್ ಕೇವಲ ಸಹಾಯಕ್ಕಾಗಷ್ಟೇ ಇರುವ ಒಂದು ವ್ಯವಸ್ಥೆ. ಯುಕೆ ಮೂಲದ ಪಾಲಂತಿರ್ ಸಿಬ್ಬಂದಿ ಮಾನವರು ಇಂದಿಗೂ ರಕ್ಷಣಾ ವ್ಯವಸ್ಥೆಯ ಉನ್ನತ ಹಂತದಲ್ಲೇ ಇದ್ದಾರೆ ಎಂದಿದ್ದಾರೆ. ಇದು ತಾನಾಗಿಯೇ ಕಾರ್ಯಾಚರಿಸುವ ‘ಕಿಲ್ಲರ್ ರೋಬೊಟ್’ ಅಲ್ಲ. ಇಷ್ಟಾದರೂ ಒಂದಷ್ಟು ಜನರು ಇದರ ಕುರಿತು ಅನುಮಾನ ಹೊಂದಿದ್ದಾರೆ. ಸ್ವತಃ ಎಐ ಇಷ್ಟೊಂದು ವೇಗವಾಗಿ ಮಾಹಿತಿಗಳನ್ನು ಒದಗಿಸುವಾಗ, ಅಧಿಕಾರಿಗಳಿಗೆ ಅವುಗಳ ಕುರಿತು ಆಳವಾಗಿ ಆಲೋಚಿಸುವಷ್ಟು ಸಮಯ ಇರುತ್ತದೆಯೇ? ಅವರು ಒತ್ತಡದ ಸಂದರ್ಭದಲ್ಲಿ ಎಐಯನ್ನು ಸರಿಯಾಗಿ ಪ್ರಶ್ನಿಸಬಲ್ಲರೇ?
ಅಮೆರಿಕ ‘ಎಐ ಫಸ್ಟ್’ ಮಿಲಿಟರಿಯಾಗುವ ಉದ್ದೇಶ ಹೊಂದಿದ್ದು, ಇದಕ್ಕಾಗಿ ಮಾವೆನ್ ಅನ್ನು ತನ್ನ ಪಡೆಗಳ ನಿಯಮಿತ ಭಾಗವಾಗಿಸಲು ಉದ್ದೇಶಿಸಿದೆ. ಇದಕ್ಕಾಗಿ ಬೃಹತ್ ಜಾಲ ವ್ಯವಸ್ಥೆಯೊಂದರಲ್ಲಿ ರಾಜಕಾರಣಿಗಳಿಂದ ಸಾಫ್ಟ್ ವೇರ್, ಡೇಟಾ ಕೇಂದ್ರಗಳು ಮತ್ತು ಖಾಸಗಿ ಕಂಪೆನಿಗಳ ತನಕ ಬಹಳಷ್ಟು ಜನರು ಪಾಲ್ಗೊಳ್ಳಲಿದ್ದಾರೆ. ಪಾಲಂತಿರ್ ಮತ್ತು ಅದರಂತಹ ಇತರ ಸಂಸ್ಥೆಗಳು ಇಂದು ಅಪಾರ ಪ್ರಭಾವವನ್ನು ಹೊಂದಿವೆ. ಇನ್ನೊಂದು ಕಂಪೆನಿಯಾದ ಆ್ಯಂಥ್ರೊಪಿಕ್ ಸಹ ಪೆಂಟಗನ್ ಜೊತೆಗೆ ಭದ್ರತಾ ಅಪಾಯದ ಕುರಿತಂತೆ ಸಮಸ್ಯೆ ಹೊಂದಿತ್ತು.
ಸಾಮಾನ್ಯ ಜನರಿಗೆ ಇದರ ಮಹತ್ವವೇನು? ಇದರ ಕುರಿತು ಒಮ್ಮೆ ಆಲೋಚಿಸೋಣ: ಕೇವಲ ಚಾಟ್ ಜಿಪಿಟಿಯಂತಹ ಎಐಯನ್ನು ಬಳಸುವುದರಿಂದಲೇ ವಿದ್ಯಾರ್ಥಿಗಳು ಯೋಚನಾ ಶಕ್ತಿ ಮತ್ತು ಬರವಣಿಗೆಯಲ್ಲಿ ದುರ್ಬಲರಾಗುತ್ತಾರೆ. ಹೀಗಿರುವಾಗ, ಯೋಧರು ಯುದ್ಧದಲ್ಲಿ ಯಂತ್ರಗಳನ್ನೇ ಅತಿಯಾಗಿ ನಂಬತೊಡಗಿದರೆ ಏನಾಗಬಹುದು? ಬಳಕೆದಾರ ರನ್ನು ಮೆಚ್ಚಿಸುವ ಸಲುವಾಗಿ, ಎಐ ಕೆಟ್ಟ ಯೋಜನೆಗಳಿಗೂ ಒಪ್ಪಿಗೆ ಸೂಚಿಸಬಹುದು. ಡಿಫೆನ್ಸ್ ವನ್ ದಾಖಲಿಸಿರುವಂತೆ ನೈಜ ಅಪಾಯ ಇರುವುದು ಆಕ್ರಮಣಕಾರಿ ರೋಬೊಟ್‌ಗಳಲ್ಲಲ್ಲ, ಬದಲಿಗೆ ದುರ್ಬಲ ಮಾನವ ನಿರ್ಧಾರಗಳಲ್ಲಿ!
ಮಿನಾಬ್ ನಗರದ ಶಾಲೆಯೊಂದರ ಮೇಲೆ ದುರಂತಮಯ ದಾಳಿಯೊಂದರ ವರದಿಗಳು ಬಂದ ಬಳಿಕ ಈ ಆತಂಕಗಳು ಇನ್ನಷ್ಟು ಹೆಚ್ಚಾದವು. ಆ ಕಟ್ಟಡ ಪತನಗೊಂಡಾಗ, 7ರಿಂದ 12 ವರ್ಷ ವಯಸ್ಸಿನ 150ಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾದರು. ಇದರಲ್ಲಿ ಮಾವೆನ್ ಪಾತ್ರವೂ ಇತ್ತೇ ಎನ್ನುವುದು ಖಚಿತವಾಗಿಲ್ಲ. ಆದರೆ, ಜನರು ಈ ಕುರಿತು ಕಠಿಣ ಸವಾಲುಗಳನ್ನು ಕೇಳುತ್ತಿದ್ದಾರೆ. ಕೇವಲ ಎಐ ಒಂದನ್ನೇ ದೂರುವುದು ಸುಲಭವಾಗಿ ತಪ್ಪಿಸಿಕೊಳ್ಳಲು ಒಂದು ನೆಪವಾಗಬಾರದು. ಸಾಮಾನ್ಯವಾಗಿ ಇಂತಹ ವೈಫಲ್ಯಗಳು ಯೋಜನೆ ರೂಪಿಸುವಿಕೆ, ವ್ಯವಸ್ಥೆಯ ವಿನ್ಯಾಸಗೊಳಿಸುವಿಕೆ, ಅದಕ್ಕೆ ತರಬೇತಿ ನೀಡುವುದು, ಮತ್ತು ಒತ್ತಡದಡಿ ಅದನ್ನು ನಿರ್ವಹಿಸುವಲ್ಲಿ ಮಾನವರ ನಿರ್ಧಾರಗಳಲ್ಲೇ ಆರಂಭಗೊಳ್ಳುತ್ತದೆ. ಮಾನವರು ಯಾವ ಎಐ ನಿರ್ಮಿಸಬೇಕು ಮತ್ತು ಅದನ್ನು ಹೇಗೆ ಬಳಸಬೇಕು ಎನ್ನುವುದನ್ನು ಪ್ರತಿಯೊಂದು ಹೆಜ್ಜೆ ಹೆಜ್ಜೆಯಲ್ಲೂ ನಿರ್ಧರಿಸುತ್ತಾರೆ.
ಆದ್ದರಿಂದಲೇ ಎಐ ಯೋಜನೆಯ ಆರಂಭದಿಂದ ಕೊನೆಯ ಹಂತದ ತನಕ ಸುರಕ್ಷತಾ ಪರಿಶೀಲನೆಗಳನ್ನು ಗಮನಿಸಲೇ ಬೇಕಾಗುತ್ತದೆ. ಆದರೆ, ಈ ಕುರಿತು ಜಾಗತಿಕ ನಿಯಮಗಳನ್ನು ರೂಪಿಸುವುದು ಕಷ್ಟಕರವಾಗಿರುತ್ತದೆ. ವಿವಿಧ ದೇಶಗಳು ಭಿನ್ನವಾದ ಅವಶ್ಯಕತೆಗಳು ಮತ್ತು ಗುರಿಗಳನ್ನು ಹೊಂದಿವೆ.
ವಿಶ್ವಸಂಸ್ಥೆಯಲ್ಲಿ ವಿವಿಧ ದೇಶಗಳು ಸ್ವಯಂಚಾಲಿತ ಆಯುಧಗಳಲ್ಲಿ ಮಾನವರು ನಿಯಂತ್ರಣ ಹೊಂದುವುದರ ಕುರಿತು ಮಾತನಾಡುತ್ತಿವೆ. ಮಿಲಿಟರಿ ವಲಯದಲ್ಲಿ ಎಐ ಬಳಕೆಯ ಜವಾಬ್ದಾರಿ ಹೊಂದಿರುವ ಆರ್‌ಇಎಐಎಂ ಸಮಾವೇಶಗಳು ನೆದರ್‌ಲ್ಯಾಂಡ್ಸ್, ದಕ್ಷಿಣ ಕೊರಿಯ ಮತ್ತು ಸ್ಪೇನ್‌ಗಳಂತಹ ಸ್ಥಳಗಳಲ್ಲಿ ಫೆಬ್ರವರಿ 2026ರಲ್ಲಿ ನಡೆದಿದ್ದು, ಅವೆಲ್ಲವೂ ಮಾನವರು ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದೇ ಆಗ್ರಹಿಸಿವೆ. ಎಐ ಮಾನವರಿಗೆ ನೆರವು ನೀಡಬೇಕೇ ಹೊರತು, ಮಾನವರಿಗೆ, ಮಾನವ ಮನಸ್ಸುಗಳಿಗೆ ಪರ್ಯಾಯವಾಗಬಾರದು. ಈ ಮಟ್ಟಿನ ನಿಯಂತ್ರಣಗಳು ಪರಿಸ್ಥಿತಿ, ಕಾರ್ಯಾಚರಣೆ ಮತ್ತು ಯೋಧರ ತರಬೇತಿಯ ಮೇಲೆ ಅವಲಂಬಿಸಿದೆ.
ಈ ಕುರಿತ ಮಾತುಕತೆಗಳು ಸ್ವಾಗತಾರ್ಹವಾಗಿದ್ದರೂ, ಅದು ಕೇವಲ ಮಾತಿಗೆ ಸೀಮಿತವಾಗಿರದೆ, ಕಾರ್ಯರೂಪಕ್ಕೆ ಬರಬೇಕು. ಪ್ರಸ್ತುತ ಟ್ರಂಪ್ ಆಡಳಿತದಲ್ಲಿ, ಅಮೆರಿಕ ಮಿಲಿಟರಿಯಲ್ಲಿ ಕಾನೂನುಬದ್ಧ ಎಐ ಬಳಕೆಯನ್ನು ವಿಸ್ತರಿಸಲು ಬಯಸುತ್ತಿದೆ. ಆದರೆ, ಅದೇ ಅಮೆರಿಕ ಕಟ್ಟುನಿಟ್ಟಿನ ಜಾಗತಿಕ ನಿಯಮಗಳಿಗೆ ಕಡಿಮೆ ಗಮನ ಹರಿಸುತ್ತಿದೆ. ಇದು ಹಿಂದಿನ ಬೈಡನ್ ಆಡಳಿತಕ್ಕಿಂತ ಭಿನ್ನವಾಗಿದ್ದು, ಬೈಡನ್ ಆಡಳಿತ 2023ರಲ್ಲಿ ಸ್ವಯಂಪ್ರೇರಿತ ನಿಯಮಗಳನ್ನು ಜಾರಿಗೆ ತಂದಿತ್ತು.
ಈಗ ಯುದ್ಧದಲ್ಲಿ ಎಐ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಒಂದು ವಿಚಾರ ಸ್ಪಷ್ಟವಾಗಿದೆ. ಮಾನವರು ಗುರಿಗಳನ್ನು ನಿಗದಿಪಡಿಸಲು ಮತ್ತು ಕ್ರಮ ಕೈಗೊಳ್ಳಲು ಪ್ರಮುಖ ಪಾತ್ರ ವಹಿಸಬೇಕು. ನಾವು ಮಾನವರು ಮತ್ತು ಯಂತ್ರಗಳು ಅವುಗಳ ನಿರ್ಮಾಣದಿಂದ ನೈಜ ಕಾರ್ಯಾಚರಣೆಯ ತನಕ ಹೇಗೆ ಜೊತೆಯಾಗಿ ಕಾರ್ಯ ನಿರ್ವಹಿಸಬೇಕು ಎನ್ನುವುದನ್ನು ಬಹಳ ಜಾಗರೂಕವಾಗಿ ಆಲೋಚಿಸಬೇಕು. ಹಾಗಾದಾಗ ಮಾತ್ರ ನಾವು ಅಪಾಯಗಳನ್ನು ಕಡಿಮೆಗೊಳಿಸಿ, ಅಮಾಯಕ ಜೀವಗಳನ್ನು ರಕ್ಷಿಸಲು ಸಾಧ್ಯ. ಇದು ಕೇವಲ ತಂತ್ರಜ್ಞಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಯುದ್ಧದ ಮಧ್ಯದಲ್ಲೂ ಮಾನವೀಯತೆಯನ್ನು ಪ್ರದರ್ಶಿಸಲು ಅವಶ್ಯಕವಾಗಿದೆ.






