ಭಾರತದ ಆರ್ಥಿಕ ನೀತಿ ಮತ್ತು ಹಣದುಬ್ಬರ: ದಿಕ್ಕು ಮತ್ತು ಗತಿ

ಕಳೆದ ಮೂವತ್ತು ವರ್ಷಗಳ ಮುಕ್ತ ಮಾರುಕಟ್ಟೆ ನೀತಿಯ ಕಾರಣದಿಂದ ಆರ್ಥಿಕ ಪರಿಸ್ಥಿತಿಯ ವಿಶ್ಲೇಷಣೆಯನ್ನೂ ಸಹ ಎಲ್‌ಪಿಜಿಯ(ಉದಾರೀಕರಣ, ಖಾಸಗೀಕರಣ, ಜಾಗತೀಕರಣ) ಚೌಕಟ್ಟಿನ ಒಳಗೆ ಮಂಡಿಸುವಂತಹ ಅನಿವಾರ್ಯತೆ ಇದೆ. ಇದನ್ನು ಹೊರತುಪಡಿಸಿ ಸಮಾಜವಾದಿ ಪ್ರಣಾಳಿಕೆಯ ಆಶಯಗಳಿಗೆ ಬದ್ಧರಾಗಿ ನವ ಉದಾರೀಕರಣಕ್ಕೆ ಮುಖಾಮುಖಿಯಾಗಿ ವಿಶ್ಲೇಷಿಸಿದರೆ ಅದು ಪ್ರಸ್ತುತ ಬಿಕ್ಕಟ್ಟನ್ನು ಯಥಾವತ್ತಾಗಿ ಪರಿಚಯಿಸುವುದಿಲ್ಲ ಎನ್ನುವುದು ಸಹ ಸತ್ಯ. ಉದಾಹರಣೆಗೆ ಜಿಡಿಪಿಯನ್ನು ಅಳೆಯುವ ಮಾನದಂಡಗಳೇ ಸಂಪೂರ್ಣ ದೋಷಪೂರಿತವಾಗಿವೆ. ಬದಲಿಗೆ ಸಮತಾವಾದದ ಪ್ರಣಾಳಿಕೆ ಆಧರಿಸಿ ಜಿಡಿಪಿ ಮಾಪನ ಮಾಡಬೇಕು. ಆದರೆ ಅದು ಅವಾಸ್ತವ ಎನಿಸಿಕೊಳ್ಳುವಂತಹ ದುರಂತದ ದಿನಗಳಲ್ಲಿ ಬದುಕುತ್ತಿದ್ದೇವೆ.
ದಿನಪತ್ರಿಕೆಯೊಂದರ ಇತ್ತೀಚಿನ ವರದಿ ಪ್ರಕಾರ ಹಣದುಬ್ಬರದ ಮೌಲ್ಯಮಾಪನವನ್ನು ಹೆಚ್ಚು ವಾಸ್ತವವಾಗಿಸಲು ಸಗಟು ಬೆಲೆ ಸೂಚ್ಯಂಕವನ್ನು(ಡಬ್ಲ್ಯುಪಿಐ) ಕ್ರಮೇಣವಾಗಿ ರದ್ದುಗೊಳಿಸಿ ಉತ್ಪಾದನೆ, ತಯಾರಿಕಾ, ಸೇವೆಗಳ ಬೆಲೆಯನ್ನು ಒಳಗೊಂಡ ಉತ್ಪಾದಕ ಬೆಲೆ ಸೂಚ್ಯಂಕವನ್ನು(ಪಿಪಿಐ) ಪರಿಚಯಿಸಲು ಕೇಂದ್ರ ಸರಕಾರ ಮುಂದಾಗಿದೆ. ಇದರಿಂದ ಹಣದುಬ್ಬರವನ್ನು ಕರಾರುವಾಕ್ಕಾಗಿ ಅಳೆಯಬಹುದು ಎಂದು ಆರ್ಥಿಕತಜ್ಞರ ಅಭಿಮತವಾಗಿದೆ. ಇದನ್ನು ಮುಂದಿನ ಐದು ವರ್ಷಗಳಲ್ಲಿ ಹಂತಹಂತವಾಗಿ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ.
ಸಗಟು ಸೂಚ್ಯಂಕದಲ್ಲಿ ಸರಕುಗಳು ಚಿಲ್ಲರೆ ಮಾರುಕಟ್ಟೆಯನ್ನು ತಲುಪುವ ಮುನ್ನ ಸಗಟು ಹಂತದಲ್ಲಿ ಅಥವಾ ಉತ್ಪಾದಕ ಹಂತದಲ್ಲಿ ಆಗುವ ಸರಾಸರಿ ಬೆಲೆ ಬದಲಾವಣೆಗಳನ್ನು ಅಳೆಯುವ ಒಂದು ಸೂಚಕವಾಗಿದೆ. ಇದು ವ್ಯವಹಾರಗಳ ನಡುವೆ (Business-to-Business) ನಡೆಯುವ ಬೃಹತ್ ವ್ಯಾಪಾರದ ಸರಕುಗಳ ಬೆಲೆಯನ್ನು ಕೇಂದ್ರೀಕರಿಸುತ್ತದೆ. ಇಲ್ಲಿ ಸರಕನ್ನು ಮಾತ್ರ ಪರಿಗಣಿಸಲಾಗುತ್ತದೆ. ಅಂತಿಮ ಬೆಲೆಯು ಪರೋಕ್ಷ ತೆರಿಗೆ(ಜಿಎಸ್‌ಟಿ), ಸಾಗಣೆ, ವಿತರಣೆಯ ವೆಚ್ಚವನ್ನು ಒಳಗೊಂಡಿರುತ್ತದೆ. ಉತ್ಪಾದನೆಯಿಂದ ಖರೀದಿಯವರೆಗೂ ಪ್ರತೀ ಹಂತದಲ್ಲಿಯೂ ಇದನ್ನು ಅಳತೆ ಮಾಡುವುದರಿಂದ ಅನೇಕ ಸಂದರ್ಭಗಳಲ್ಲಿ ಬೆಲೆ ನಿಗದಿಯು ಡುಪ್ಲಿಕೇಟ್ ಆಗುವ ಸಂಭವಿರುತ್ತದೆ ಮತ್ತು ನವಉದಾರೀಕರಣದ ಭಾರತದ ಜಿಡಿಪಿಯ ಪಾಲಿನಲ್ಲಿ ಶೇ.50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುವ ಸೇವಾ ವಲಯ ಸಗಟು ಸೂಚ್ಯಂಕದ ಮಾಪನದಲ್ಲಿ ಒಳಗೊಂಡಿರುವುದಿಲ್ಲ, ಇದು ಇದರ ದೊಡ್ಡ ಮಿತಿಯಾಗಿದೆ.
ಉತ್ಪಾದಕ ಸೂಚ್ಯಂಕದಲ್ಲಿ ಉತ್ಪಾದಕರು ತಾವೇ ತಯಾರಿಸಿದ ಸರಕು ಮತ್ತು ಸೇವೆಗಳಿಗೆ ಉತ್ಪಾದನಾ ಸ್ಥಳದಿಂದ ಹೊರಬರುವಾಗ ಫ್ಯಾಕ್ಟರಿ ಗೇಟ್ ಹಂತದಲ್ಲಿ ಪಡೆಯುವ ಬೆಲೆಗಳಲ್ಲಿನ ಸರಾಸರಿ ಬದಲಾವಣೆಯನ್ನು ಅಳೆಯುವ ಒಂದು ಆರ್ಥಿಕ ಸೂಚಕವಾಗಿದೆ. ಇಲ್ಲಿ ಸರಕು ಮತ್ತು ಸೇವಾ ವಲಯ ಎರಡನ್ನೂ ಪರಿಗಣಿಸಲಾಗುತ್ತದೆ. ಇಲ್ಲಿ ಪರೋಕ್ಷ ತೆರಿಗೆ, ಸಾಗಣೆ, ವಿತರಣೆಯ ವೆಚ್ಚದ ಭಾರವಿರುವುದಿಲ್ಲ. ಅಳತೆಯು ಡ್ಯುಪ್ಲಿಕೇಶನ್ ಆಗುವ ಸಾಧ್ಯತೆಗಳಿಲ್ಲ. ಆದರೆ ಇದರ ತಂತ್ರಜ್ಞಾನ ಪರಿಣತಿಯ ಸಾಮರ್ಥ್ಯದ ಕೊರತೆ ಇದೆ. ವೈಜ್ಞಾನಿಕವಾದ ದತ್ತಾಂಶ ಸಂಗ್ರಹಣೆಯು ದೊಡ್ಡ ಸವಾಲಾಗಿದೆ. ಅನುಷ್ಠಾನದ ವೆಚ್ಚವೂ ಅಧಿಕವಾಗಿದೆ ಮತ್ತು ಇದನ್ನು ಅಳವಡಿಸಿಕೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತದೆ.
ಈ ಕುರಿತು ಮತ್ತಷ್ಟು ಚರ್ಚಿಸುವ ಮೊದಲು ಈಗಿನ ಆರ್ಥಿಕ ಪರಿಸ್ಥಿತಿಯನ್ನು ಅರಿತುಕೊಳ್ಳುವ ಅಗತ್ಯವಿದೆ.
ಮುಖ್ಯವಾಗಿ ಮೂಲದಲ್ಲಿ ಮೋದಿ ನೇತೃತ್ವದ ಸರಕಾರದ ಆರ್ಥಿಕ ನೀತಿಯಲ್ಲಿಯೇ ಬಹುಮುಖ್ಯ ದೋಷಗಳಿವೆ. ಕ್ರೂನಿ ಬಂಡವಾಳಶಾಹಿಗಳಿಗೆ ಮಾತ್ರ ಅನುಕೂಲ ಮಾಡಿಕೊಡುವ, ಆ ಮೂಲಕ ಅಗಾಧ ಪ್ರಮಾಣದ ಅಸಮಾನತೆಯನ್ನು ಸೃಷ್ಟಿಸುವ ಈ ನೀತಿಗಳು ದೇಶದ ಆರ್ಥಿಕ ವ್ಯವಸ್ಥೆಯ ಹಿಂಜರಿಕೆಗೆ ಕಾರಣವಾಗಿವೆ. ಮತ್ತು ಕಾಲಕಾಲಕ್ಕೆ ಇಲ್ಲಿನ ಆರ್ಥಿಕ ಬೆಳವಣಿಗೆಯನ್ನು ಅಳೆಯಲು ಬಳಸುವ ಮಾನದಂಡಗಳು ಸಂಶಯಾಸ್ಪದವಾಗಿವೆ ಹಾಗೂ ಸರಕಾರದ ಸಂಸ್ಥೆಗಳು ಪ್ರಕಟಿಸುವ ದತ್ತಾಂಶಗಳು ವಿಶ್ವಾಸಾರ್ಹತೆ ಕಳೆದುಕೊಂಡಿವೆ. ಈ ಕಾರಣದಿಂದ ಹಣದುಬ್ಬರವನ್ನು ಮಾಪನ ಮಾಡುವ ವಿಧಾನ ಸಗಟು ಮಾದರಿಯಿಂದ ಉತ್ಪಾದಕ ಮಾದರಿಗೆ ಬದಲಾವಣೆಯಾದರೂ ಸಹ ಅದು ತಾಂತ್ರಿಕತೆಯಲ್ಲಿನ ಪರಿವರ್ತನೆಯಾಗುತ್ತದೆ, ಆದರೆ ಒಟ್ಟಾರೆ ತಾತ್ವಿಕ ಸಮಸ್ಯೆ ಹಾಗೆಯೇ ಮುಂದುವರಿಯುತ್ತದೆ.
ಉದಾಹರಣೆಗೆ 2025-26ರ ಎನ್‌ಎಸ್‌ಒ(ರಾಷ್ಟ್ರೀಯ ಸಾಂಖ್ಯಿಕ ಕಚೇರಿ) ಜಿಡಿಪಿಯ ಎರಡನೇ ಮುಂಗಡ ಅಂದಾಜು ‘ನೈಜ’ ಬೆಳವಣಿಗೆಯನ್ನು ಶೇ.7.6 ಎಂದು ಸೂಚಿಸುತ್ತದೆ. ಆದರೆ ಇದು ಹಣದುಬ್ಬರವನ್ನು ಕೇವಲ ಶೇ.1 ಎಂದು ಪರಿಗಣಿಸುವುದರಿಂದ ಈ ಜಿಡಿಪಿ ಅಂದಾಜಿಗೆ ಯಾವುದೇ ವಿಶ್ವಾಸಾರ್ಹತೆ ಉಳಿದಿಲ್ಲ. ಕೇಂದ್ರ ಸರಕಾರವು 2025-26ರ ಜಿಡಿಪಿ ಬೆಳವಣಿಗೆಯನ್ನು ಶೇ.7.7 ಎಂದು ಅಂದಾಜಿಸಿದೆ. ಆದರೆ ಇದು ಹಣದುಬ್ಬರವನ್ನು ಶೇ.4-4.4 ಎಂದು ಪರಿಗಣಿಸಿದೆ. ಇದು ಬಳಸುವ ಮಾನದಂಡಗಳು ಅನುಮಾನಾಸ್ಪದವಾಗಿವೆ. ಮಾರ್ಚ್ 2026ರಲ್ಲಿ ಶೇ. 3.4ರಷ್ಟಿದ್ದ ಹಣದುಬ್ಬರ ಎಪ್ರಿಲ್ 2026ರಲ್ಲಿ ಶೇ.3.48ರಷ್ಟಾಗಿದೆ. ಮುಂದಿನ ದಿನಗಳಲ್ಲಿ ಶೇ.3.8ರಷ್ಟಾಗಬಹುದು. ಮೇ 2026ರಲ್ಲಿ ಸಗಟು ಹಣದುಬ್ಬರವು ಶೇ.8ರಷ್ಟಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಈಗಾಗಲೇ ಲೀಟರ್‌ಗೆ ರೂ.7.5 ಏರಿಕೆ ಕಂಡಿವೆ ಮತ್ತು ಇನ್ನಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ. ಇಂಧನ, ಅನಿಲ ಮತ್ತು ವಿಮಾನಯಾನ ವೆಚ್ಚಗಳ ಪರಿಣಾಮವಾಗಿ ಕೈಗಾರಿಕಾ ಹಾಗೂ ಕೃಷಿ ವೆಚ್ಚಗಳು ಹೆಚ್ಚುತ್ತಿದೆ. ಇಂಧನ ಬೆಲೆ ಏರಿಕೆ ಕಾರಣ ಪ್ರಸ್ತುತ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುತ್ತಿದೆ ಹಾಗೂ ರೂಪಾಯಿ ಮೌಲ್ಯ ಕುಸಿಯುತ್ತಿದೆ, ಇನ್ನೆರಡು ತಿಂಗಳಲ್ಲಿ ಡಾಲರ್ ಎದುರು ರೂ.100ಕ್ಕೆ ತಲಪುವ ಸಾಧ್ಯತೆ ಇದೆ. ಇದಕ್ಕೆ ಕೇವಲ ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳು ಮಾತ್ರ ಕಾರಣವಲ್ಲ. ಇದರ ಪರಿಣಾಮವಾಗಿ ನೈಜ ಜಿಡಿಪಿ ಶೇ.4.8-5.4ಕ್ಕೆ ಇಳಿಯುವ ಸಾಧ್ಯತೆಗಳಿವೆ. ಎಪ್ರಿಲ್ 2026ರಲ್ಲಿ ಇದರ ಬೆಳವಣಿಗೆ ಶೇ. 2.83ರಷ್ಟಿತ್ತು.
ಆರ್ಥಿಕ ಬೆಳವಣಿಗೆಯನ್ನು ನಿರ್ಧರಿಸುವ ಇತರ ಆಯಾಮಗಳೂ ಭರವಸೆದಾಯಕವಾಗಿಲ್ಲ. ರೂ. 66.50 ಲಕ್ಷ ಕೋಟಿಯಷ್ಟಿರುವ(700 ಬಿಲಿಯನ್ ಡಾಲರ್) ವಿನಿಮಯ ಮೀಸಲು ನಿಧಿಯು ಸಹ ಯಾವುದೇ ಭರವಸೆ ಮೂಡಿಸುತ್ತಿಲ್ಲ. ಯಾಕೆಂದರೆ ರೂಪಾಯಿ ಮೌಲ್ಯದ ಕುಸಿತವನ್ನು ತಡೆಯಲು ಆರ್‌ಬಿಐ ಮೀಸಲು ನಿಧಿಯಿಂದ ಡಾಲರನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಶುರು ಮಾಡುತ್ತದೆ, ಇದರ ಜೊತೆಗೆ ತನ್ನ ಸಂಗ್ರಹದಿಂದ 1.14 ಲಕ್ಷ ಕೋಟಿ ರೂ. ಮೌಲ್ಯದ 75 ಟನ್ ಚಿನ್ನವನ್ನು ಮಾರಾಟ ಮಾಡಿದೆ ಎಂದು ಬ್ಲೂಮ್‌ಬರ್ಗ್ ಪತ್ರಿಕೆಯಲ್ಲಿ ವರದಿಯಾಗಿದೆ. ಆರ್‌ಬಿಐ ಇದನ್ನು ನಿರಾಕರಿಸಿದೆ. ಆದರೂ ರೂಪಾಯಿ ಕುಸಿತವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಹೂಡಿಕೆ ವೆಚ್ಚಗಳು ಹೆಚ್ಚುತ್ತಿವೆ, ರಫ್ತು ಪ್ರಮಾಣ ಕಡಿಮೆಯಾಗುತ್ತಿದೆ. ಆಮದು ಹೆಚ್ಚಾಗುತ್ತಿದೆ. 1991ರ ನಂತರ ಭಾರತದಲ್ಲಿ ಉದಾರೀಕರಣ ನೀತಿಗಳನ್ನು ಜಾರಿಗೊಳಿಸುವಾಗ ಭಾರತೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಗಳಲ್ಲಿ ಪ್ರವೇಶ ದೊರೆಯುತ್ತದೆ ಮತ್ತು ಭಾರತದ ರಫ್ತುಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತವೆ ಎಂಬ ಭರವಸೆ ನೀಡಲಾಗಿತ್ತು. ಆದರೆ 1991ರಿಂದ ಇಂದಿನವರೆಗೆ ಭಾರತದ ಸರಕು ವ್ಯಾಪಾರದಲ್ಲಿನ (Merchandise Trade) ಗಮನಾರ್ಹ ಕೊರತೆಯಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.
ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ, ವಿಕಸಿತ ಭಾರತ ಮುಂತಾದ ಸ್ಲೋಗನ್‌ಗಳನ್ನು ಪ್ರಚಾರ ಮಾಡುವ ಮೋದಿ ನೇತೃತ್ವದ ಸರಕಾರ ಸ್ಥಳೀಯವಾಗಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ. ಉದಾಹರಣೆಗೆ ಇತ್ತೀಚೆಗೆ ಸೆಮಿಕಂಡಕ್ಟರ್‌ಗಳ ಸಂಶೋಧನೆ, ತಯಾರಿಕೆ ಬಗ್ಗೆ ತುಂಬಾ ಮಾತನಾಡುತ್ತಿರುವ ಕೇಂದ್ರ ಸರಕಾರ ಆ ಕುರಿತು ಯಾವುದೇ ನೀಲನಕ್ಷೆ ರೂಪಿಸದೆ ಅದರ ಆಮದನ್ನು ಮಾತ್ರ ಹೆಚ್ಚಿಸುತ್ತಿದೆ. ಇದರಿಂದಾಗಿ ಉಂಟಾಗುವ ವ್ಯಾಪಾರ ಕೊರತೆಯು(ಟ್ರೇಡ್ ಡೆಫಿಸಿಟ್) 2017-2018ರಲ್ಲಿ ಸುಮಾರು 2.2 ಬಿಲಿಯನ್ ಡಾಲರ್‌ಗಳಿದ್ದರೆ, 2025-2026ರ ವೇಳೆಗೆ ಸುಮಾರು 30 ಬಿಲಿಯನ್ ಡಾಲರ್‌ಗಳಿಗೆ ಏರಿದೆ. ಭಾರತವು ಎರಡು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಮೊಬೈಲ್ ಫೋನ್‌ಗಳನ್ನು ತಯಾರಿಸುತ್ತಿದ್ದರೂ ಈ ಕ್ಷೇತ್ರದಲ್ಲಿ ತಾಂತ್ರಿಕ ಮುಂಚೂಣಿಯ (technological frontier) ಮಟ್ಟವನ್ನು ತಲುಪುವ ಹಂತಕ್ಕೂ ಇನ್ನೂ ಸಮೀಪಿಸಿಲ್ಲ. ಇದೆಲ್ಲದರ ಜೊತೆಗೆ ಅನೇಕ ಕಾರಣಗಳಿಗೆ(ಉತ್ತೇಜನದ ಕೊರತೆ, ಮತಧರ್ಮಾಂಧತೆಯ ಕಾರಣ ವ್ಯವಸ್ಥೆಯಲ್ಲಿನ ಅಸಹಿಷ್ಣತೆ ಇತ್ಯಾದಿ) ವಿದೇಶಿ ಹೂಡಿಕೆದಾರರು ಹೊರಹೋಗುತ್ತಿದ್ದು ರೂಪಾಯಿಯ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಿದೆ. ದೇಶೀಯ ಮತ್ತು ವಿದೇಶಿ ಹೂಡಿಕೆಗಳು ಹಿನ್ನಡೆಯಲ್ಲಿವೆ. ಎಫ್‌ಡಿಐ ಒಳಹರಿವು 27 ಬಿಲಿಯನ್‌ಗಿಂತ(ರೂ. 2.56 ಲಕ್ಷ ಕೋಟಿ) ಕಡಿಮೆಯಾಗಿದೆ.
ನಿವೃತ್ತ ಐಎಎಸ್ ಸುಭಾಷ್ಚಂದ್ರ ಗಾರ್ಗ್ ‘‘ತಂತ್ರಜ್ಞಾನ, ನಾಯಕತ್ವದ ಕೊರತೆಯಿಂದ ಸೌರಶಕ್ತಿ, ವಿದ್ಯುತ್ ವಾಹನಗಳು, ಸೆಮಿಕಂಡಕ್ಟರ್ ಚಿಪ್‌ಗಳು, ಕಂಪ್ಯೂಟರ್ ಸರ್ವರ್‌ಗಳು, ಕೃತಕ ಬುದ್ಧಿಮತ್ತೆ (ಎಐ) ಮುಂತಾದ ಹೊಸ ತಲೆಮಾರಿನ ಕೈಗಾರಿಕೆಗಳಲ್ಲಿ ಭಾರತದಲ್ಲಿ ಹೂಡಿಕೆ ಅವಕಾಶಗಳು ಅತ್ಯಲ್ಪವಾಗಿವೆ. ಇದರಿಂದ ದೇಶೀಯ ಹೂಡಿಕೆಗಳೂ ಮಂದಗತಿಗೆ ಒಳಗಾಗಿವೆ. ಲೀಟರ್‌ಗೆ ರೂ.10 ಅಬಕಾರಿ ಸುಂಕ ಕಡಿತಗೊಳಿಸಿರುವುದರಿಂದ ಅಬಕಾರಿ ಆದಾಯದ ಸುಮಾರು ಶೇ.40ರಷ್ಟು ನಷ್ಟವಾಗಲಿದೆ. ತೈಲ ಮಾರಾಟ ಕಂಪೆನಿಗಳ (ಔಒಅs) ನಷ್ಟವನ್ನು ಸರಕಾರವೇ ಭರಿಸಬೇಕಾಗುತ್ತದೆ. ರಸಗೊಬ್ಬರ ಸಬ್ಸಿಡಿ, ತುಟ್ಟಿಭತ್ತೆ ಹೆಚ್ಚಳ ಮುಂತಾದ ವೆಚ್ಚಗಳು ಹಣಕಾಸಿನ ಕೊರತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಹಣಕಾಸು ಕೊರತೆ ರೂ.3 ಲಕ್ಷ ಕೋಟಿಗೂ ಹೆಚ್ಚು ಹೆಚ್ಚಾಗುವ ಸಾಧ್ಯತೆಯಿದೆ..’’ ಎಂದು ಬರೆಯುತ್ತಾರೆ. ಕೆಲವು ವರ್ಷಗಳ ಹಿಂದೆ ಮೋದಿ ನೇತೃತ್ವದ ಸರಕಾರದಲ್ಲಿ ಅಲ್ಪ ಅವಧಿಗೆ ಆರ್ಥಿಕ ವ್ಯವಹಾರ ಕಾರ್ಯದರ್ಶಿ, ಹಣಕಾಸು ಕಾರ್ಯದರ್ಶಿಯಾಗಿದ್ದ, ನವಉದಾರೀಕರಣದ ಬೆಂಬಲಿಗರಾದ ಗಾರ್ಗ್ ಅಂಥವರೇ ಈ ಮಾತುಗಳನ್ನು ಹೇಳುತ್ತಿರುವಾಗ ಭಾರತದ ಆರ್ಥಿಕತೆ ಎಂತಹ ದುಸ್ಥಿತಿಯಲ್ಲಿದೆ ಎಂದು ಅರ್ಥವಾಗುತ್ತದೆ.
ಇಂತಹ ಬಿಕ್ಕಟ್ಟಿನಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಸರಕಾರದ ಒಟ್ಟು ವೆಚ್ಚದಲ್ಲಿ ಆಹಾರ, ಇಂಧನ ಮತ್ತು ರಸಗೊಬ್ಬರ ಮುಂತಾದ ಸಬ್ಸಿಡಿಗಳ ಪಾಲು 2016-17ರ ಶೇ.11.7ರಿಂದ 2024-25ರಲ್ಲಿ ಶೇ.7.9ಕ್ಕೆ ಇಳಿದಿದೆ. ಪ್ರಧಾನಿ ಮೋದಿಯವರು ಹಣಕಾಸಿನ ಮಿತವ್ಯಯ (Fiscal Conservatism) ಕುರಿತು ಮಾತಾನಾಡುತ್ತಿರುವ ಕಾರಣ ಈ ಸಬ್ಸಿಡಿಗಳು ಮತ್ತಷ್ಟು ಕಡಿತಗೊಳ್ಳುತ್ತದೆ. ಪರಿಣಾಮವಾಗಿ ಬಿಪಿಎಲ್ ಆಧಾರಿತ 80 ಕೋಟಿ ಜನಸಂಖ್ಯೆ ಈಗಾಗಲೇ ತೂತು ಬಿದ್ದಿರುವ ತಮ್ಮ ಜೇಬುಗಳನ್ನು ಸಂಪೂರ್ಣ ಖಾಲಿ ಮಾಡಿಕೊಳ್ಳಬೇಕಾಗುತ್ತದೆ. ಜೊತೆಗೆ ಕುಟುಂಬಗಳ ಉಳಿತಾಯದ ಪ್ರಮಾಣವು 2011-12ರಲ್ಲಿ ದೇಶದ ಜಿಡಿಪಿಯ ಶೇ.23ರಷ್ಟಿದ್ದರೆ, 2023-24ರ ವೇಳೆಗೆ ಅದು ಶೇ.18ಕ್ಕೆ ಕುಸಿದಿದೆ. 2014ರಲ್ಲಿ ಸಾರ್ವಜನಿಕ ಬ್ಯಾಂಕುಗಳಲ್ಲಿ ಎಫ್.ಡಿ. ಮೇಲಿನ ಬಡ್ಡಿ ದರ ಶೇ.8.5ರಷ್ಟಿದ್ದರೆ 2026ರಲ್ಲಿ ಅದು ಶೇ.6.5ರಷ್ಟಾಗಿದೆ. ಇದು ಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.
ಕಳೆದ ಮೂವತ್ತು ವರ್ಷಗಳ ಮುಕ್ತ ಮಾರುಕಟ್ಟೆ ನೀತಿಯ ಕಾರಣದಿಂದ ಆರ್ಥಿಕ ಪರಿಸ್ಥಿತಿಯ ವಿಶ್ಲೇಷಣೆಯನ್ನೂ ಸಹ ಎಲ್‌ಪಿಜಿಯ(ಉದಾರೀಕರಣ, ಖಾಸಗೀಕರಣ, ಜಾಗತೀಕರಣ) ಚೌಕಟ್ಟಿನ ಒಳಗೆ ಮಂಡಿಸುವಂತಹ ಅನಿವಾರ್ಯತೆ ಇದೆ. ಇದನ್ನು ಹೊರತುಪಡಿಸಿ ಸಮಾಜವಾದಿ ಪ್ರಣಾಳಿಕೆಯ ಆಶಯಗಳಿಗೆ ಬದ್ಧರಾಗಿ ನವ ಉದಾರೀಕರಣಕ್ಕೆ ಮುಖಾಮುಖಿಯಾಗಿ ವಿಶ್ಲೇಷಿಸಿದರೆ ಅದು ಪ್ರಸ್ತುತ ಬಿಕ್ಕಟ್ಟನ್ನು ಯಥಾವತ್ತಾಗಿ ಪರಿಚಯಿಸುವುದಿಲ್ಲ ಎನ್ನುವುದು ಸಹ ಸತ್ಯ. ಉದಾಹರಣೆಗೆ ಜಿಡಿಪಿಯನ್ನು ಅಳೆಯುವ ಮಾನದಂಡಗಳೇ ಸಂಪೂರ್ಣ ದೋಷಪೂರಿತವಾಗಿದೆ. ಬದಲಿಗೆ ಸಮತಾವಾದದ ಪ್ರಣಾಳಿಕೆ ಆಧರಿಸಿ ಜಿಡಿಪಿ ಮಾಪನ ಮಾಡಬೇಕು. ಆದರೆ ಅದು ಅವಾಸ್ತವ ಎನಿಸಿಕೊಳ್ಳುವಂತಹ ದುರಂತದ ದಿನಗಳಲ್ಲಿ ಬದುಕುತ್ತಿದ್ದೇವೆ.
ಒಟ್ಟಾರೆಯಾಗಿ ನವ ಉದಾರೀಕರಣವು ಡೆಡ್ ಎಂಡ್ ತಲುಪಿ ಪ್ರಸ್ತುತ Oligarchy ಹಿಡಿತದಲ್ಲಿರುವ ಭಾರತದ ಆರ್ಥಿಕ ವ್ಯವಸ್ಥೆಯನ್ನು ಮರಳಿ ಕನಿಷ್ಠ ನೆಹರೂವಿಯನ್ ಮಿಶ್ರ ಆರ್ಥಿಕತೆ ಕಡೆಗೆ ತಿರುಗಿಸಬೇಕು ಎನ್ನುವುದು ಕನಸಿನ ಮಾತಾಯಿತೇ?






