Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಒಳ ಮೀಸಲಾತಿ ಬಿಕ್ಕಟ್ಟುಗಳ ಭಾರಗಳು...

ಒಳ ಮೀಸಲಾತಿ ಬಿಕ್ಕಟ್ಟುಗಳ ಭಾರಗಳು ಸಮರ್ಪಕ ಅನುಷ್ಠಾನಕ್ಕೆ ಅಡ್ಡಿಯಾಗುತ್ತಿವೆಯೇ?

ದಾಸನೂರು ಕೂಸಣ್ಣದಾಸನೂರು ಕೂಸಣ್ಣ7 Dec 2025 12:30 PM IST
share
ಒಳ ಮೀಸಲಾತಿ ಬಿಕ್ಕಟ್ಟುಗಳ ಭಾರಗಳು ಸಮರ್ಪಕ ಅನುಷ್ಠಾನಕ್ಕೆ ಅಡ್ಡಿಯಾಗುತ್ತಿವೆಯೇ?

ಒಳ ಮೀಸಲಾತಿ ಎಂದಾಕ್ಷಣ ಅನೇಕರಿಗೆ ಎಲ್ಲಿಲ್ಲದ ಕಹಿ; ಅದರೆ ಅದನ್ನು ಬೇಡುವವರಿಗೆ ಒಂದು ಹನಿ ಸವಿ ಜೇನಂತಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ನ್ಯಾ. ನಾಗಮೋಹನ್ ದಾಸ್ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೆ ತರದೆ ರಾಜಕೀಯ ನಿರ್ಧಾರಗಳಡಿ ಅಖೈರುಮಾಡಿದೆ. ಆದರೆ ಅನುಷ್ಠಾನ ಪ್ರಕ್ರಿಯೆಗಳು ಹೂ ಹಿಡಿದು ಬೆಟ್ಟವತ್ತುವ ಯಾತ್ರಿಕನಂತಾಗದೆ; ಹೊತ್ತ ಕಟ್ಟಿಗೆಯ ಭಾರದಲ್ಲಿ ತೆವಳುತ್ತಾ ಸಾಗಿದಂತಾಗಿದೆ. ಸಾಮಾಜಿಕ ತಾರತಮ್ಯಗಳನ್ನು ಲಂಬಾಂತರ (Vertical) ಮತ್ತು ಸಮನಾಂತರ (Horizontal) ಮುಖಾಂತರ ನೋಡಿದಾಗ ಲಂಭಾಂತರ ಶೋಷಣೆಗಳು ವೇಷ್ಠಿ ಗುಣಗಳಾದರೆ; ಸಮನಾಂತರ ಶೋಷಣೆಗಳು ಅಂತರ ವೈರುಧ್ಯಗಳಾಗುತ್ತವೆ. ಈ ವೈರುಧ್ಯಗಳನ್ನು ತಹಬದಿಗೆ ತರಲು ಒಳಮೀಸಲಾತಿ ಸಿದ್ಧೌಷಧವಾಗಿದೆ ಎಂದು ಸರಿಸುಮಾರು 35 ವರ್ಷಗಳಿಂದ ಸಮುದಾಯಗಳು ಹೋರಾಡುತ್ತಿವೆ. ಕೊನೆಗೆ ಸುಪ್ರೀಂ ಕೋರ್ಟಿನ ತೀರ್ಪಿನಿಂದ ಸಂಪನ್ನವಾಗಿದೆ. ಬಹುಶಃ ಇದೇ ನ್ಯಾಯಾಲಯ ಸಾಂವಿಧಾನಿಕ ಅನುಚ್ಛೇದಗಳಿಗೆ ತಿದ್ದುಪಡಿ ಮೂಲಕ ಪಡೆಯಲು ಅಜ್ಞಾಪಿಸಿದ್ದರೆ ಹೋರಾಟಗಾರರಿಗೆ ಗಗನ ಕುಸುಮವಾಗುತ್ತಿತ್ತು ಅಥವಾ ನಿಟ್ಟುಸಿರು ಬಿಡುತ್ತಿದ್ದರು. ಆದರೂ ಕರ್ನಾಟಕ ರಾಜ್ಯ ಮೀಸಲಾತಿಯ ಜಾರಿಯಲ್ಲಿ ರಾಷ್ಟ್ರಕ್ಕೆ ಹಿರಿಯ ಮುತ್ತಜ್ಜನಾಗಿದ್ದರೂ ಒಳ ಮೀಸಲಾತಿ ವಿಚಾರದಲ್ಲಿ ಒಂದು ಸಮಷ್ಟಿ ಸ್ವರೂಪದ ಅಭಿಮತಗಳನ್ನು ಬಿತ್ತುವಲ್ಲಿ ಎಡವುತ್ತಾಬಂದಿದೆ. ಏಕೆಂದರೆ ‘ಬೇಡ’ ಅನ್ನುವವರ ಕಪಿಮುಷ್ಟಿ ಹಿಡಿತದಿಂದ ಸರಕಾರಗಳು ಹೊರಬರಲಾಗದೆ ನರಳುತ್ತಾ ಬಂದಿವೆ. ಒಂದಷ್ಟು ಸಮಧಾನಕರವಾದ ಸ್ಥಿತಿ ನಿರ್ಮಾಣವಾಗಬೇಕೆನ್ನುವಾಗ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಎಲ್ಲಾ ನೇಮಕಾತಿಗಳನ್ನು ಹಳೆಯ ನಿಯಮಗಳಡಿ ಮಾಡಲು ಆದೇಶ ನೀಡಿದ್ದೇನೆಂದು ಹೇಳಿದ್ದಾರೆ (ಡಿಸೆಂಬರ್ 2, ವಾ.ಭಾ. ಸುದ್ದಿ). ಈ ಸುದ್ದಿ ಹಿನ್ನೆಲೆಗಳನ್ನು ಸ್ವಲ್ಪ ಅವಲೋಕಿಸೋಣ.

ಪ್ರಸಂಗ-1: ಹಿಂದಿನ ಭಾಜಪ ಸರಕಾರ ಪರಿಶಿಷ್ಟ ಜಾತಿ (ಶೇ.17) ಮತ್ತು ಪಂಗಡಗಳಿಗೆ (ಶೇ.7) ಅವರ ಜನಸಂಖ್ಯಾಧಾರಿತ ಮೀಸಲಾತಿಗಾಗಿ ನ್ಯಾ. ನಾಗಮೋಹನ್ ದಾಸ್ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಿ ದಿ: 28-12-2022ರಂದು ಆದೇಶಿಸಿತ್ತು. ಆಗ ಮೀಸಲಾತಿ ಪ್ರಮಾಣ ಶೇ. 60ಕ್ಕೇರಿತ್ತು. ಸಹಜವಾಗಿ ಮೀಸಲಾತಿ ರಿಕ್ತಬಿಂದುಗಳು ಅದಲುಬದಲಾದವು. ಈ ಆದೇಶವನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧಿಕರಣ ಮುಂದೆ (ಅರ್ಜಿ ಸಂ. 2144/2024) ಪ್ರಶ್ನಿಸಲಾಗಿತ್ತು. ತರುವಾಯ ಬಂದ ಕಾಂಗ್ರೆಸ್ ಸರಕಾರ ಹಿಂದುಳಿದ ವರ್ಗಗಳ ವರ್ಗೀಕರಣ ಕೈಬಿಟ್ಟ ಕಾರಣ ಅದು 56ಕ್ಕೆ ಇಳಿಯಿತು. ನ್ಯಾಯಾಧಿಕರಣ ಒಟ್ಟಾರೆ ಸರಕಾರದ ಆದೇಶವನ್ನು ತಳ್ಳಿಹಾಕಿತು. ಸದರಿ ತೀರ್ಪಿನ ವಿರುದ್ಧ ರಾಜ್ಯ ಸರಕಾರ ಬಲವಾದ ಅಭಿಮತಗಳನ್ನು ಉಚ್ಚ ನ್ಯಾಯಾಲಯದ ಮುಂದೆ ಮಂಡನೆ ಮಾಡುವ ಮೂಲಕ ಷರತ್ತು ಬದ್ಧ ಮಧ್ಯಂತರ ಆದೇಶ ಪಡೆಯುವಲ್ಲಿ ಯಶಸ್ವಿಯಾಯಿತು.

ಪ್ರಸಂಗ-2: ರಾಯಚೂರಿನ ಮಹೇಂದ್ರ ಕುಮಾರ್ ಮಿತ್ರ ಎಂಬವರು ಈ ಹಿಂದೆ ಸ್ಪಶ್ಯ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿದ್ದು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಮುಂದೆ ಅಪೀಲು ಮಾಡಿದ್ದವರ ಮುಖಂಡರು. ಇಂದ್ರಾ ಸಹಾನಿ ಎದುರು ಭಾರತ ಸರಕಾರ ಪ್ರಕರಣದಲ್ಲಿ ರಾಜ್ಯಗಳು ಜಾತಿ ಆಧಾರಿತ ಮೀಸಲಾತಿ ನೀಡುವಾಗ 50:50 ಅನುಪಾತ ಮೀರಬಾರದೆಂದು ಸುಪ್ರೀಂ ಕೋರ್ಟ್ ಬಂಧಕ ಸ್ವರೂಪದ ತೀರ್ಪನ್ನು ನೀಡಿತ್ತು. ಒಳ ಮೀಸಲಾತಿಯ ಜಾರಿಗೆ ಸಂಬಂಧಿಸಿದ ನಿರ್ಣಾಯಾತ್ಮಕ ಘಟ್ಟದಲ್ಲಿದ್ದಾಗಲೇ ಅಂದರೆ ಫೆಬ್ರವರಿ 2025ರಂದು ಅದರಡಿ (200448/2025) ಸಂವಿಧಾನದ ಅನುಚ್ಛೇದ 226 ಪ್ರಕಾರ ಸಾರ್ವಜನಿಕ ಹಿತಾಸಕ್ತಿ ಅಪೀಲನ್ನು ರಾಜ್ಯದಲ್ಲಿಯೂ ಈ ಆದೇಶದಂತೆ ಮೀಸಲಾತಿ ಮಿತಿ ಮೀರಬಾರದೆಂದು ವಾದಿಸಿದ್ದಾರೆ. ಅದರ ಮೇರೆಗೆ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿ ಮುಂದಿನ ಆದೇಶದ ತನಕ ಯಾವುದೇ ನೇಮಕಾತಿ ಮಾಡಬಾರದೆಂದು ಸರಕಾರಕ್ಕೆ ಸೂಚಿಸಿದೆ.

ಸಮಾಜ ಕಲ್ಯಾಣ ಇಲಾಖೆ ಸಚಿವರು ಹಿಂದಿನ ನಿಯಮಾವಳಿಗಳ ಪ್ರಕಾರ ನೇಮಕಾತಿ ಮಾಡಲಾಗುವುದೆಂದು ಹೇಳಿಕೆ ನೀಡಿದ್ದಾರೆ. ಹಾಗಾದರೆ, ಒಳ ಮೀಸಲಾತಿ ಜಾರಿಗಾಗಿ ಹಿಂದಿನ ಸಚಿವ ಸಂಪುಟದ ತೀರ್ಮಾನದಲ್ಲಿ ಇವರೂ ಸಹ ಭಾಗೀದಾರರಾಗಿದ್ದರು. ‘‘ಸರಕಾರದ ಬದ್ಧತೆಯನ್ನು ಸಾಮೂಹಿಕವಾಗಿ ಸಾದರಪಡಿಸುವುದು ಇಲಾಖೆಗಳ ಸಚಿವರಾದವರ ಆದ್ಯ ಕರ್ತವ್ಯ ಕೂಡ ಆಗಿರುತ್ತದೆ’’. ಹೈಕೋರ್ಟು ತೀರ್ಪು ಬಂದ ಕೂಡಲೇ ಸಚಿವರೇ ‘ಒಳ ಮೀಸಲಾತಿ ಜಾರಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ವಿಚಾರವಾಗಿದೆ; ಅದರ ವಿರುದ್ಧ ಸರಕಾರ ಮೇಲ್ಮನವಿ ಸಲ್ಲಿಸುತ್ತದೆ’ ಎಂದು ಹೇಳುವ ಬದಲು ಸರಕಾರದೊಳಗಿಂದಲೇ ನೀಡಿರುವ ಹೇಳಿಕೆ ಬೀದಿಯಲ್ಲಿ ಬಿಸಿಬಿಸಿ ಚರ್ಚೆಗಳಾಗುತ್ತಿವೆ. ಈ ಹಿಂದೆ, ಸರತಿ ಸಾಲಿನಲ್ಲಿ ಒಳ ಮೀಸಲಾತಿಯ ಪಕ್ವ ಜಾರಿಗಾಗಿ ಹೋರಾಟಗಾರರು ಅವರಿಗೆ ಅರುಹಿದಾಗ ಪ್ರತಿಯೊಂದಕ್ಕೂ ಸಚಿವ ಸಂಪುಟದ ತೀರ್ಮಾನ ಆಗಬೇಕೆಂದು ತಿಳಿಸುತ್ತಿದ್ದರು. ಆದರೆ ಮಹೇಂದ್ರ ಮಿತ್ರ ಪ್ರಕರಣದ ಮೇಲೆ ಯಾವಾಗ ಸಚಿವ ಸಂಪುಟದಲ್ಲಿ ತೀರ್ಮಾನವಾಗಿದೆ ಎಂಬ ವಿಚಾರ ಶರವೇಗದಲ್ಲಿ ಹರಿದು ಸಾರ್ವಜನಿಕ ಚರ್ಚೆಗಳಾಗುತ್ತಿವೆ.

ಮಹೇಂದ್ರ ಕುಮಾರ್ ಮಿತ್ರ ಸುಪ್ರೀಂ ಕೋರ್ಟಿನ ಒಳ ಮೀಸಲಾತಿ ದಾವೆಯಲ್ಲಿಯೂ ಅಪಸ್ವರ ದಾಖಲಿಸಿದ್ದಾರೆಂದು ಬಲ್ಲವರ ಅಭಿಮತಗಳಾಗಿವೆ. ಜನ್ಮತಃ ಈತ ಮಾದಿಗ ಸಮುದಾಯದವರು. ಅವರ ಸಮುದಾಯ ಒಂದು ಪ್ರವಾಹದಂತೆ ಜಮಾವಣೆ ಆಗುತ್ತಿದ್ದರೆ; ಅಪಸ್ವರವೆತ್ತಿರುವ ವಿಚಾರವನ್ನು ಅವರ ಅಭಿಮತ ಸ್ವಾತಂತ್ರ್ಯ ಅಂಬೋಣ. ಒಟ್ಟಾರೆ ಇವರ ಗುಪ್ತಗಾಮಿನಿಯ ನಡೆ ಒಳ ಮೀಸಲಾತಿ ಬೇಡವೆನ್ನುವವರ ಪಾಲಿಗೆ ಹಾಲು ಜೇನಾಗಿದೆ. ಇಂದ್ರಾ ಸಹಾನಿ ತೀರ್ಪಿನ ಬಗ್ಗೆ ಅವರಿಗೆ ಅಷ್ಟೊಂದು ಕಾಳಜಿ ತುಂಬಿದ್ದರೆ, ಕೇಂದ್ರ ಸರಕಾರ 103ನೇ ತಿದ್ದುಪಡಿ ಮೂಲಕ ಶೇ.10ರಷ್ಟು ಮೀಸಲಾತಿಯನ್ನು ಸದ್ದುಗದ್ದಲವಿಲ್ಲದೆ ಇಡಬ್ಲ್ಯುಎಸ್ ವರ್ಗಗಳಿಗೆ ಶರವೇಗದಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿದಾಗ ಅದನ್ನೇ ಶ್ರೇಷ್ಠ ನ್ಯಾಯಾಲಯದ ಮುಂದೆ ಈ ಮಿತ್ರ ಏಕೆ ಪ್ರಶ್ನಿಸಲಿಲ್ಲ ಎಂಬ ಪ್ರಶ್ನೆಗಳ ಸುರಿಮಳೆಯಾಗುತ್ತಿವೆ. ಇಡಬ್ಲ್ಯುಎಸ್ ಮೀಸಲಾತಿಯ ಸಾಂವಿಧಾನಿಕ ಅರ್ಹತೆಯನ್ನು ಸದರಿ ನ್ಯಾಯಾಲಯದ ಮುಂದೆ ಅನೇಕರು ಪ್ರಶ್ನೆ ಮಾಡಿದ್ದಾಗ ಇಂದ್ರಾ ಸಹಾನಿ ಬಂಧಕ ತೀರ್ಪಿನ (Binding Verdict) ಬದ್ಧತೆಗಳು ಏಕೆ ಮಂಗಮಾಯವಾದವು? ಈ ಸಂದರ್ಭದಲ್ಲೇ ಸದರಿ ಘನ ನ್ಯಾಯಾಲಯ ಕೇಂದ್ರದ ಶೇ.59.5ರಷ್ಟು ಮೀಸಲಾತಿ ಅನುಪಾತ ( ಪ.ಜಾತಿ -15, ಪ.ವರ್ಗ -7.5, ಒಬಿಸಿ-27 ಮತ್ತು ಇಡಬ್ಲ್ಯುಎಸ್-10) ಮೀರಿದ್ದನ್ನು ಮೌನವಾಗಿ ಸಮ್ಮತ್ತಿಸಿದ್ದು ಇಂದಿಗೂ ಯಕ್ಷಪ್ರಶ್ನೆಯಾಗಿದೆ. ಸದರಿ ತೀರ್ಪಿನಲ್ಲಿ ಉಲ್ಲೇಖಿಸಿರುವ ರಾಜ್ಯ ಪದ ವ್ಯಾಖ್ಯಾನ ಕೇಂದ್ರ ಸರಕಾರದ ವ್ಯಾಪ್ತಿಗೂ ಅನ್ವಯಿಸುತ್ತದೆ. ಶ್ರೇಷ್ಠ ನ್ಯಾಯಾಲಯದಲ್ಲಿಯೇ ಇಂದ್ರಾ ಸಹಾನಿ ತೀರ್ಪಿಗೆ ಮನ್ನಣೆಯಿಲ್ಲದಿರುವಾಗ ರಾಜ್ಯಗಳ ಹೈಕೋರ್ಟ್‌ಗಳು ಹೇಗೆ ಬಾಧ್ಯವಾಗುತ್ತವೆ ಎಂಬ ಗಂಭೀರ ಪ್ರಶ್ನೆಗೆ ಉತ್ತರ ಸಿಗುವುದೆಲ್ಲಿಂದ? ಅಥವಾ ಸಂಸತ್ ಉತ್ತರದಾಯಿತ್ವ ಸ್ಥಾಪಿಸುತ್ತದೆಯೇ?

ಇತ್ತೀಚೆಗೆ ಚಿಂತಕ ಯೋಗೇಂದ್ರ ಯಾದವ್ ಹತ್ತಾರು ಯುವಕರ ಜೊತೆ ಸಂವಾದ ಮಾಡುವಾಗ ಒಂದು ಪ್ರಶ್ನೆಯನ್ನು ಅವರಿಗಿಟ್ಟರು. ‘‘ನಿಮ್ಮೊಳಗೆ ಹಿಂದುಳಿದ-ದಲಿತ-ಆದಿವಾಸಿಗಳೆಷ್ಟಿದ್ದಾರೆ’’ ಎಂದಾಗ ಎಲ್ಲರೂ ನೀರವ ಮೌನಕ್ಕೆ ಜಾರುತ್ತಾರೆ. ‘‘ಇಲ್ಲಿ ಈ ಸಮುದಾಯದವರಾರು ಇಲ್ಲದಿದ್ದಾಗ ನೀವು ಹೇಗೆ ಅವರ ಪ್ರತಿನಿಧಿಗಳಾಗಿ ನೋವು-ನಲಿವುಗಳನ್ನು ಪ್ರತಿಪಾದಿಸಲು ಮುಖವಾಣಿಗಳಾಗುತ್ತೀರಾ?’’ ಎಂದರು. ಈ ದೃಷ್ಟಿಯಲ್ಲಿ ಮೀಸಲಾತಿ ವಿಚಾರಗಳನ್ನು ವಿಶ್ಲೇಷಿಸಿದಾಗ ಯಾದವ್‌ರ ಅಂತರ್ಗತ ರಾಷ್ಟ್ರೀಯ ಮುಖ್ಯವಾಹಿನಿ ಮನೋಧರ್ಮಗಳು ಅನಾವರಣವಾಗುತ್ತವೆ. ಮೀಸಲಾತಿ ಮತ್ತು ಒಳಮೀಸಲಾತಿ ಇರುವುದು ಜನಾಂಗೀಯ ಪ್ರಾತಿನಿಧ್ಯಗಳ ಕೊರತೆಯನ್ನು ತುಂಬುವ ಕೋಮುವಾರು ಆದೇಶಗಳಾಗಿವೆ. 1960ರ ಆರಂಭಿಕ ದಿನಗಳಿಂದಲೂ ರಾಜ್ಯದಲ್ಲಿ ಹಿಂದುಳಿದ ವರ್ಗಗಳೊಳಗೆ ನಾಲ್ಕು ಸಾಮಾಜಿಕ ಮಾನದಂಡಗಳಡಿ ಒಳ ಮೀಸಲಾತಿ ವರ್ಗೀಕರಣ ತಾತ್ವಿಕತೆಯನ್ನು ಅನುಸರಿಸುತ್ತಾ ಬರಲಾಗಿದೆ. ಆದರೆ, ಪರಿಶಿಷ್ಟ ಜಾತಿ ಮತ್ತು ವರ್ಗಗಳಲ್ಲಿ ಈ ಸೂತ್ರ ತಡವಾಗಿ ಮುಖ್ಯವಾಹಿನಿಯಲ್ಲಿ ತೆರೆದುಕೊಂಡಿದೆ.

ಒಳಮೀಸಲಾತಿ ಜಾರಿ ಬೇಡಿಕೆ ಮಂಡನೆಗಳಲ್ಲಿ ಒಂದಷ್ಟು ಬೇಡದ ಉದ್ರೇಕತೆಯ ಭಾಷಣಗಳೂ ತೇಲಿ ಬಂದವು. ಇಂದಿಗೂ ಸರಿಯಾದ ಕ್ರಮದಲ್ಲಿ ಅನುಷ್ಠಾನವಾಗಿಲ್ಲವೆಂಬ ಕೂಗು ಜೀವಂತವಾಗಿದೆ. ಹೋರಾಟಗಾರರ ಪರಿಕ್ರಮಣಗಳಂತೂ ಸಂಪೂರ್ಣವಾಗಿ ನಿಂತಿಲ್ಲ. ಬಹುಶಃ ಈ ನಿಟ್ಟಿನಲ್ಲಿ ಸರಕಾರದ ನಡೆಯು ಅಷ್ಟೇ ಮುಕ್ತವಾಗಿರಬೇಕಿತ್ತು. ದೀರ್ಘಕಾಲದಿಂದ ದಣಿದಿದ್ದವನಿಗೆ ತಂಬಿಗೆ ನೀರು ಕೊಡುವ ಬದಲು ಸರಕಾರ ಬೆರಳ ಹನಿಗಳಂತೆ ನೀಡತೊಡಗಿತ್ತು. ಇದರಿಂದ ಒಳ ಮೀಸಲಾತಿ ಹೋರಾಟಗಾರರ ದಣಿವೂ ಇಂಗಲಿಲ್ಲ; ವಿಧಾನ ಸೌಧ ಸುತ್ತುವ ಧರ್ಮ ನಡಿಗೆಯೂ ನಿಲ್ಲಲಿಲ್ಲ. ತೆಲಂಗಾಣ ಮಾದರಿಯ ಆದೇಶ ಬೇಕೆಂಬ ಅನೇಕರ ಬೇಡಿಕೆ ಇಂದಿಗೂ ಅರ್ಥಪೂರ್ಣವಾಗಿದೆ. ಈ ಹಿಂದೆ, ಸಚಿವ ಬಿ. ಬಸವಲಿಂಗಪ್ಪ ಪಂಚಾಯತ್ ರಾಜ್ ವ್ಯವಸ್ಥೆಗೆ ಮಹಿಳಾ ಮೀಸಲಾತಿ ಮತ್ತು ಅಧ್ಯಕ್ಷ/ಉಪಾಧ್ಯಕ್ಷ ಹುದ್ದೆಗಳಿಗೆ ಒಳ ಮೀಸಲಾತಿ ಅಳವಡಿಸಿದ ಕಾರಣಕ್ಕಾಗಿ ಅಧಿಕಾರ ವಿಭಜನೆ ಮೂಲಕ ಸ್ಥಾಪಿತ ಶಕ್ತಿಗಳನ್ನು ಮೂಲೆ ಗುಂಪುಮಾಡಿತ್ತು. ಈ ದೃಷ್ಟಿಯಲ್ಲಿ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಒಳ ಮೀಸಲಾತಿ ಅನ್ವಯಿಸಬೇಕೆಂಬ ಬೇಡಿಕೆಯಿದೆ. ಅಸಮಾನತೆಯಲ್ಲಿ ಸಮಾನತೆ ಸ್ಥಾಪಿಸುವುದು ಸಾಂವಿಧಾನಿಕ ಆಶಯವಾಗಿವೆ. ಹಾಗೆಯೇ ಆರ್ಥಿಕ ಯೋಜನೆಗಳಿಗೂ ಅನ್ವಯಿಸಬೇಕೆಂಬ ಒತ್ತಾಯಗಳಿವೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಅನೇಕ ಸಂದರ್ಭಗಳಲ್ಲಿ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಒಂದು ಸೂಕ್ತವಾದ ಬಿಲ್ ಅನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸುತ್ತೇವೆ ಎಂದಿದ್ದಾರೆ. ಬಹುಶಃ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿಯೇ ಸೂಕ್ತ ವ್ಯಾಖ್ಯಾನಗಳೊಂದಿಗೆ ಮಜಭೂತವಾದ ಬಿಲ್ ಮಂಡನೆಯಾದರೆ ಭುಗಿಲೆದ್ದಿರುವ ಸರಣಿ ಕಾನೂನು ಬಿಕ್ಕಟ್ಟುಗಳಿಗೆ ಪರಿಹಾರಗಳು ಖಂಡಿತವಾಗಿಯೂ ಲಭಿಸುತ್ತವೆ. ಈ ಕಾರ್ಯ ಯಶಸ್ವಿಯಾದರೆ, ರಾಜ್ಯ ಸರಕಾರಕ್ಕೆ ತಡವಾಗಿಯಾದರೂ ನೊಂದವರಿಂದ ಚಂಗುಲಾಬಿ ಸಿಗುವುದಂತೂ ನಿಶ್ಚಿತ.

ಬಹುತೇಕ ಕಾಂಗ್ರೆಸ್ ಶಾಸಕರು ಒಳ ಮೀಸಲಾತಿ ತಮ್ಮನ್ನು 2028ರ ಚುನಾವಣೆಯಲ್ಲಿ ಆಹುತಿ ಪಡೆಯುತ್ತದೆಯೋ ಎಂಬ ಆಂತರಿಕ ಭೀತಿಯಲ್ಲಿದ್ದಾರೆ. ಅತ್ತ ಭಾಜಪ ಸಹ ಇದರ ಹಬೆಯಲ್ಲಿ ಸಾಧ್ಯವಾದಷ್ಟೂ ಕೈ ಕಾಯಿಸಲು ತಾಲೀಮು ಮಾಡುತ್ತಲೇ ಸಾಗಿದೆ. ಈ ಹಿಂದೆ, ಚಂದ್ರಬಾಬು ನಾಯ್ಡು ಮನೆಯಿಂದ ಮಾದಿಗ ದಂಡೋರ ಪಾದಯಾತ್ರೆ ಹೊರಟಂತೆ ಮುಖ್ಯಮಂತ್ರಿಗಳ ಹುಟ್ಟೂರಾದ ಸಿದ್ದರಾಮಯ್ಯನ ಹುಂಡಿಯಿಂದ ಮತ್ತೊಂದು ಸುತ್ತಿನ ಪಾದಯಾತ್ರೆ ಅಣಿಗೊಳ್ಳುತ್ತಿದೆ. ಬಹುಶಃ ಅನುಭವಿ ಸಚಿವರಾದ ಡಾ. ಮಹದೇವಪ್ಪ ಅವರು ತಮ್ಮ ದೀರ್ಘಕಾಲದ ರಾಜಕೀಯ ಒಡನಾಡಿಗಳಾದ ಸಿದ್ದರಾಮಯ್ಯ ಅವರ ಕೈ ಬಲಪಡಿಸಲು ಇಷ್ಟೊತ್ತಿಗೆ ಒಂದು ಸಕಾಲಿಕ ಮತ್ತು ನ್ಯಾಯೋಜಿತ ಕ್ರಮಗಳ ಅನುಪಾಲನೆಯಲ್ಲಿ ಯಶಸ್ಸು ಕಂಡಿದ್ದರೆ ಯಾರೊಬ್ಬರೂ ಪದೇ ಪದೇ ಬೀದಿಗಿಳಿಯುತ್ತಿರಲಿಲ್ಲ. ಕಡೆಗಣಿಸಿದ ಕಿಡಿಯೊಂದು ಊರನ್ನೇ ಸುಟ್ಟಂತಾಗಬಾರದು ಒಳ ಮೀಸಲಾತಿಯ ಸಾಂವಿಧಾನಿಕ ಆಶಯಗಳು. ರಾಜ್ಯ ಸರಕಾರದ ಜೈ ಸಂವಿಧಾನ್ ಜಯಘೋಷ ‘‘ಸಾಂಘಿಕ ಹಿತಾಸಕ್ತಿಯಲ್ಲಿ ವೈಯಕ್ತಿಕ ಶ್ರೇಯೋಭಿವೃದ್ಧಿ ಕಾಣುವ ಆಶಯದತ್ತ’’ ಸಮಾಜ ಕಲ್ಯಾಣ ಇಲಾಖೆಯ ಸಚಿವರ ಕಾರ್ಯವೈಖರಿ ಆಗಲೆಂದು ರಾಜ್ಯದ ಜನತೆಯ ಅಭಿಲಾಷೆ ಅಂಬೋಣ.

share
ದಾಸನೂರು ಕೂಸಣ್ಣ
ದಾಸನೂರು ಕೂಸಣ್ಣ
Next Story
X