ಮಡಿಲ ಮಾಧ್ಯಮಗಳ ಪತ್ರಿಕೋದ್ಯಮ ದೇಶವನ್ನು ಯಾವ ಹಂತಕ್ಕೆ ಮುಟ್ಟಿಸಲಿದೆ?

ಮಡಿಲ ಮಾಧ್ಯಮ ಈ ದೇಶದ ಪತ್ರಿಕೋದ್ಯಮವನ್ನು ಕಾಪಿ ಪೇಸ್ಟ್ ಮಟ್ಟಕ್ಕೆ ಇಳಿಸಿದೆಯೇ ಎಂಬ ಗಂಭೀರ ಪ್ರಶ್ನೆಯೊಂದು ಎದ್ದಿದೆ.
ಈಗ ಪತ್ರಕರ್ತರೆನ್ನುವ ಹೆಚ್ಚಿನವರೆಲ್ಲ ಮೋದಿ ಗುಣಗಾನದಲ್ಲಿ ಬಿದ್ದಿದ್ದಾರೆ. ವಿಷ ಕಾರುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಎಲ್ಲರೂ ಮುಸ್ಲಿಮರ ವಿರುದ್ದ ದ್ವೇಷ ಬಿತ್ತುತ್ತಿದ್ದಾರೆ. ಆದರೆ ಸರಕಾರವನ್ನು ಪ್ರಶ್ನಿಸುವುದು ಈ ಪತ್ರಕರ್ತರಿಗೆ ಮರೆತೇ ಹೋಗಿದೆ. ಬದಲಾಗಿ, ಅನೇಕ ಟಿ.ವಿ. ಚಾನೆಲ್‌ಗಳು ಆಕ್ರೋಶವನ್ನು ಪ್ರಚೋದಿಸಲು ಮತ್ತು ಜನರನ್ನು ನೈಜ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯಲು ಕಥೆಗಳನ್ನು ಕಟ್ಟುತ್ತಿವೆ.
ಈಗ ಖಾನ್ ಸರ್ ಅವರ ಸುತ್ತಲಿನ ವಿವಾದಗಳನ್ನು ನೋಡುತ್ತಿದ್ದರೆ, ಟಿ.ವಿ. ಚಾನೆಲ್‌ಗಳು ಅವರು ವಿದ್ಯಾರ್ಥಿಗಳ ಏಳಿಗೆಗೆ ಹೇಗೆ ನೆರವಾಗುತ್ತಿದ್ದಾರೆ ಎನ್ನುವುದನ್ನು ನೋಡುವ ಬದಲು ಅವರು ಮುಸ್ಲಿಮ್ ಎಂದು ಹೇಳುವುದರಲ್ಲಿ ಹೆಚ್ಚು ತೊಡಗಿವೆ. ಇದು ಯಾವ ಮಟ್ಟದ ಧೂರ್ತತನ ಎಂಬುದು ಅರ್ಥವಾಗುವುದಿಲ್ಲ.
ಅವರ ಜನಪ್ರಿಯತೆಯನ್ನು, ವಿದ್ಯಾರ್ಥಿಗಳು ಅವರ ಬಗ್ಗೆ ಹೊಂದಿರುವ ಗೌರವವನ್ನು ಹಣಿಯಲು ಆಗುತ್ತಿಲ್ಲವೆಂಬ ಕಾರಣಕ್ಕೆ ಧಾರ್ಮಿಕ ಗುರುತನ್ನು ಬಳಸಿ ಹಣಿಯುವ ಉದ್ದೇಶ ಇದಾಗಿದೆ.ಇದರಿಂದ ಅವರನ್ನು ಬೆಂಬಲಿಸುವ ಹಿಂದೂಗಳಿಗೆ ಎಚ್ಚರಿಕೆ ನೀಡಲಾಗುತ್ತದೆ. ಅವರನ್ನು ತಮ್ಮ ಗುರು ಎಂದು ಪರಿಗಣಿಸುವ ಮಕ್ಕಳು ಅವರನ್ನು ದ್ವೇಷಿಸಲು ಪ್ರಾರಂಭಿಸಬೇಕು ಎನ್ನುವ ಹುನ್ನಾರವಿದೆ.
ಹೀಗೆ, ಪ್ರೈಮ್ ಟೈಮ್ ಡಿಬೇಟ್‌ಗಳಲ್ಲಿ ಹೆಚ್ಚಾಗಿ ಸೆಲೆಕ್ಟಿವ್ ಆಕ್ರೋಶ, ರಾಜಕೀಯ ಪಕ್ಷಪಾತ ಮತ್ತು ದ್ವಂದ್ವ ನಿಲುವು ಸಾಮಾನ್ಯವಾಗುತ್ತಿದೆ.
ಬಹುತೇಕ ಎಲ್ಲ ಮಡಿಲ ಮಾಧ್ಯಮ ಆ್ಯಂಕರ್‌ಗಳು ಓದುವ ಸ್ಕ್ರಿಪ್ಟ್‌ಗಳು ಒಂದೇ ರೀತಿಯವಾಗಿವೆ. ಅವರಿಗೆ ಮೋದಿ ಗುಣಗಾನ ಬೇಕು. ಮೋದಿ ಏನೇ ಮಾಡಿದರೂ ಅದನ್ನು ಮಾಸ್ಟರ್ ಸ್ಟ್ರೋಕ್ ಎನ್ನಲೇಬೇಕು. ವಿಪಕ್ಷ ನಾಯಕರನ್ನು ಜರೆಯಬೇಕು. ಪ್ರಶ್ನಿಸಿದವರನ್ನು ಪಾಕಿಸ್ತಾನಿ ಎನ್ನಬೇಕು.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯ ಯಾವುದೇ ನಡೆ ಮತ್ತು ಹೇಳಿಕೆಗೆ ಪ್ರತಿಕ್ರಿಯಿಸುವಾಗಲೂ, ಅದರ ಬಗ್ಗೆ ಈ ಮಡಿಲ ಮಾಧ್ಯಮ ಜನರ ಕೊಂಕು ಇರುತ್ತದೆ. ‘‘ರಾಹುಲ್ ಗಾಂಧಿ ಈ ವಿಷಯವನ್ನು ಏಕೆ ರಾಜಕೀಯ ಮಾಡುತ್ತಿದ್ದಾರೆ?’’ ಎಂದು ಗಿಳಿಪಾಠದಂತೆ ಪ್ರಶ್ನೆ ಕೇಳುವ ಆ್ಯಂಕರ್‌ಗಳಿದ್ದಾರೆ.
ರಾಹುಲ್ ಗಾಂಧಿ ಸರಕಾರವನ್ನು ಪ್ರಶ್ನಿಸಿದರೆ ಸಾಕು, ಪತ್ರಕರ್ತರೆನ್ನಿಸಿಕೊಂಡ ಇವರಿಗೆ ಉರಿಬೀಳುತ್ತದೆ. ಒಬ್ಬ ವಿಪಕ್ಷ ನಾಯಕ ರಾಜಕೀಯವಾಗಿ ಪ್ರತಿಕ್ರಿಯಿಸಬಾರದು ಎಂದರೆ ಇನ್ನೇನು ಮಾಡಬೇಕು? ರಾಹುಲ್ ಗಾಂಧಿ ಯಾಕೆ ರಾಜಕೀಯ ಮಾಡುತ್ತಾರೆ ಎಂದು ಕೇಳುವ ಇದೇ ಜನ, ಸರಕಾರ ಏಕೆ ಕೆಟ್ಟ ರಾಜಕೀಯ ಮಾಡುತ್ತಿದೆ ಎಂದು ಯಾವತ್ತೂ ಕೇಳಿಲ್ಲ.
ಮೋದಿ ಸೈನಿಕರು ಹುತಾತ್ಮರಾದದ್ದನ್ನು ಏಕೆ ರಾಜಕೀಯ ಮಾಡುತ್ತಿದ್ದಾರೆ? ಹುತಾತ್ಮರ ಹೆಸರಿನಲ್ಲಿ ಅವರು ಏಕೆ ಮತ ಕೇಳುತ್ತಿದ್ದಾರೆ? ಇದರ ಬಗ್ಗೆ ಏಕೆ ಮಡಿಲ ಮಾಧ್ಯಮ ಆ್ಯಂಕರ್‌ಗಳು ಇವತ್ತಿನವರೆಗೂ ಪ್ರಶ್ನೆ ಎತ್ತಿಲ್ಲ.
ಅಷ್ಟಕ್ಕೂ ಮೊನ್ನೆ ರಾಹುಲ್ ಗಾಂಧಿ ಹೇಳಿದ್ದೇನು?
‘‘ಈಗ ದೇಶದ ಮೇಲೆ ಬೃಹತ್ ಆರ್ಥಿಕ ಸುನಾಮಿ ಬರುತ್ತಿದೆ.ಕಾರಣವೆಂದರೆ, ಜಾಗತಿಕ ಆರ್ಥಿಕ ಏರಿಳಿತಗಳ ಎದುರು ಕೆಲಸ ಮಾಡುತ್ತಿದ್ದ ಭಾರತದ ರಕ್ಷಣಾ ವ್ಯವಸ್ಥೆಯನ್ನೇ ಬಿಜೆಪಿ ತೆಗೆದುಹಾಕಿದೆ’’ ಎಂದರು. ಇದು ಹೇಗೆ ಭಾರತದ ನಿಂದನೆಯಾಯಿತು?
ಭಾರತವನ್ನು ಇಂಥ ಸ್ಥಿತಿಗೆ ಬಿಜೆಪಿ ತಂದಿಟ್ಟಿದೆ ಎಂದು ರಾಹುಲ್ ಹೇಳಿದರೆ, ಅವರು ದೇಶದ ವಿರುದ್ಧ ಮಾತಾಡಿದರು ಎಂದು ಬಿಂಬಿಸಿ ಅಪಪ್ರಚಾರವನ್ನು ವೇಗವಾಗಿ ಮಾಡಲಾಗುತ್ತದೆ. ಮೋದಿಯನ್ನು ಟೀಕಿಸಿದರೆ, ಬಿಜೆಪಿಯನ್ನು ಟೀಕಿಸಿದರೆ, ದೇಶವನ್ನು ಟೀಕಿಸಿದರು ಎನ್ನಲಾಗುತ್ತದೆ.
‘‘ಬೆಲೆಗಳು ಏರುತ್ತಿವೆ. ಈಗ ನೋಡುತ್ತಿರುವುದು ಬರೀ ಆರಂಭ. ಜೀವಿತಾವಧಿಯಲ್ಲಿ ಎಂದಿಗೂ ನೋಡಿರದ ಆರ್ಥಿಕ ಬಿಕ್ಕಟ್ಟನ್ನು ಭಾರತ ಎದುರಿಸಲಿದೆ. ಇದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ನನ್ನ ಅಂದಾಜಿನ ಪ್ರಕಾರ ಒಂದು ವರ್ಷದೊಳಗೆ ಮೋದಿ ಪ್ರಧಾನಿ ಹುದ್ದೆಯಿಂದ ಇಳಿಯುತ್ತಾರೆ. ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಇದೆ. ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ವ್ಯವಸ್ಥೆಯೊಳಗೆ ಬಂಡಾಯ ತಲೆದೋರಬಹುದು’’ ಎಂದು ರಾಹುಲ್ ಹೇಳಿದರು. ಇದೆಲ್ಲವೂ ಹೇಗೆ ದೇಶದ ನಿಂದನೆಯಾಗುತ್ತದೆ?
ದೇಶದಲ್ಲಿನ ಸ್ಥಿತಿ ಬಗ್ಗೆ ಎಚ್ಚರಿಸುವ ರಾಹುಲ್ ಅವರ ಮಾತುಗಳನ್ನು ತಪ್ಪಾಗಿ ನಿರೂಪಿಸಲು ಏಕೆ ಮಡಿಲ ಮಾಧ್ಯಮ ಆ್ಯಂಕರ್‌ಗಳು ತಮ್ಮ ಶಕ್ತಿಯನ್ನೆಲ್ಲ ಖರ್ಚು ಮಾಡುತ್ತಿದ್ದಾರೆ? ದೇಶದ ಹದಗೆಟ್ಟ ಆರ್ಥಿಕತೆ ಬಗ್ಗೆ ಮಾತನಾಡಿದರೆ ಅದು ಶಾಪವೆ?
ಆರ್ಥಿಕ ಪರಿಸ್ಥಿತಿ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂದರೆ, ಪ್ರಧಾನಿ ಸ್ವತಃ ಸಾರ್ವಜನಿಕ ಸಭೆಗಳಲ್ಲಿ ಖರ್ಚು ಕಡಿಮೆ ಮಾಡಿ, ಅಡುಗೆ ಎಣ್ಣೆ ಕಡಿಮೆ ಬಳಸಿ, ಚಿನ್ನ ಖರೀದಿಸುವುದನ್ನು ಮತ್ತು ವಿದೇಶಕ್ಕೆ ಹೋಗುವುದನ್ನು ತಪ್ಪಿಸಿ ಎಂದು ಮನವಿ ಮಾಡುತ್ತಿದ್ದಾರೆ.
ಪರಿಸ್ಥಿತಿ ತುಂಬಾ ಭೀಕರವಾಗಿದೆ. ಟ್ರಂಪ್ ಭಾರತದ ಮೇಲೆ ಸುಂಕದ ಮೇಲೆ ಸುಂಕ ವಿಧಿಸುತ್ತಿದ್ದಾರೆ. ಭಾರತವನ್ನು ಅವಮಾನಿಸಲಾಗುತ್ತಿದೆ. ಭಾರತ ಅಮೆರಿಕದ ಮುಂದೆ ಮಣಿದು, ರಶ್ಯದಿಂದ ತೈಲ ಖರೀದಿಸುವುದು ಸಾಧ್ಯವಾಗುತ್ತಿಲ್ಲ. ಜನರಿಗೆ ಡೀಸೆಲ್ ಮತ್ತು ಪೆಟ್ರೋಲ್, ಸಿಲಿಂಡರ್‌ಗಳು ಸಿಗುತ್ತಿಲ್ಲ. ಆದರೆ ಯಾರಾದರೂ ಇದನ್ನು ಉಲ್ಲೇಖಿಸಿದರೆ, ಅದನ್ನು ಅಸಹನೆಯಿಂದ ನೋಡಲಾಗುತ್ತದೆ.
ಆರ್ಥಿಕ ಬಿಕ್ಕಟ್ಟು ಬರುತ್ತಿದೆ ಎಂದು ರಾಹುಲ್ ಗಾಂಧಿ ಈಗಾಗಲೇ ಹೇಳಿದ್ದರು. ಆದರೆ ಅವರನ್ನು ಗೇಲಿ ಮಾಡಲಾಯಿತು. ಅವರನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಮತ್ತು ಈಗ ಅವರು ಏನು ಹೇಳಿದ್ದರೋ ಅದೇ ಆಗಿದೆ. ದೇಶಕ್ಕಾಗಿ ಜನರು ತ್ಯಾಗ ಮಾಡುವಂತೆ ಪ್ರಧಾನಿ ಸ್ವತಃ ಕೇಳುವ ದಿನಗಳು ಬಂದಾಗಿವೆ.
ಇನ್ನೊಂದೆಡೆ ಈ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ವ್ಯವಸ್ಥೆಯ ಲೋಪದಿಂದಾಗಿ ಹೈರಾಣಾಗುತ್ತಿದ್ದಾರೆ. ಆದರೆ ಆ ವಿದ್ಯಾರ್ಥಿಗಳ ಬಗ್ಗೆ ಈ ಮೀಡಿಯಾಗಳಿಗೆ ಚಿಂತೆಯಿಲ್ಲ.
ಇದೇ ಚಾನೆಲ್‌ಗಳು ವಿದ್ಯಾರ್ಥಿಗಳ ವಿರುದ್ಧ ವಿಷ ಕಾರಿದವು. ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಹೋರಾಟವನ್ನು ರಾಜಕೀಯ ಎಂದು ಕರೆದವು. ಪತ್ರಿಕೆ ಸೋರಿಕೆಯ ಬಗ್ಗೆ ಮಾತನಾಡುವ ಬದಲು, ಕೋಚಿಂಗ್ ಶಿಕ್ಷಕರನ್ನು ನಿಷ್ಪ್ರಯೋಜಕರು ಎನ್ನಲಾಯಿತು, ಮಾಫಿಯಾ ಎನ್ನಲಾಯಿತು. ಪ್ರಶ್ನೆ ಕೇಳಿದ ಮಕ್ಕಳನ್ನು ಪಾಕಿಸ್ತಾನಿಗಳು ಎಂದು ಕರೆಯಲಾಯಿತು. ಆದರೆ ಎಂದಿಗೂ ಶಿಕ್ಷಣ ಸಚಿವರನ್ನು ಪ್ರಶ್ನಿಸಲಿಲ್ಲ. ಶಿಕ್ಷಣ ವ್ಯವಸ್ಥೆಯನ್ನು ಪ್ರಶ್ನಿಸಲಿಲ್ಲ. ಆದರೆ ಯಾರನ್ನೋ ವರ್ಗಾವಣೆ ಮಾಡಿದ ತಕ್ಷಣ ಅದು ತಮ್ಮ ವರದಿಯ ಪರಿಣಾಮ ಎಂದು ಹೇಳಿಕೊಳ್ಳತೊಡಗಿದರು.
ತಮಾಷೆಯೆಂದರೆ, ಇಲ್ಲಿಂದ ವರ್ಗಾವಣೆ ಮಾಡಲಾದವರನ್ನು ನಂತರ, ಕೃಷಿ ಸಚಿವಾಲಯದಲ್ಲಿ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ ಎಂದು ಇವರು ಹೇಳುವುದಿಲ್ಲ. ಅದು ಶಿಕ್ಷೆಯೇ ಅಥವಾ ಮಕ್ಕಳ ಭವಿಷ್ಯವನ್ನು ಹಾಳು ಮಾಡಿದ್ದಕ್ಕಾಗಿ ಪ್ರತಿಫಲವೇ?
ಕೋವಿಡ್ ಸಂದರ್ಭದಲ್ಲೂ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದರು. ಅದನ್ನು ಕಡೆಗಣಿಸಲಾಯಿತು. ಕೊನೆಗೆ ಅವರು ಮೊದಲೇ ಎಚ್ಚರಿಸಿದ್ದ ಭೀಕರ ಪರಿಸ್ಥಿತಿಯನ್ನು ಎಲ್ಲರೂ ಎದುರಿಸಬೇಕಾಯಿತು. ನೋಟ್ ಬ್ಯಾನ್ ವಿಷಯದಲ್ಲೂ ರಾಹುಲ್ ಎಚ್ಚರಿಕೆ ನೀಡಿದ್ದರು. ಅದಕ್ಕೆ ತಮಾಷೆ ಮಾಡಲಾಯಿತು. ಕೊನೆಗೆ ಇಡೀ ದೇಶದ ಬಡವರು, ಮಧ್ಯಮ ವರ್ಗದವರು ಅದಕ್ಕೆ ಭಾರೀ ಬೆಲೆ ತೆತ್ತರು. ಇವತ್ತಿಗೂ ಬೆಲೆ ತೆರುತ್ತಲೇ ಇದ್ದಾರೆ. ಜಿಎಸ್‌ಟಿ ವಿಷಯದಲ್ಲೂ ರಾಹುಲ್ ಏನು ಹೇಳಿದ್ದರೋ ಅದು ನಿಜವಾಗಿದೆ.
ಹಾಗಾದರೆ ಆಳವಾದ ಅಧ್ಯಯನ ಮಾಡಿ, ಪರಿಣತರಿಂದ ಕೇಳಿ ತಿಳಿದುಕೊಂಡು, ದೇಶದ ಸರಕಾರವನ್ನು, ಜನರನ್ನು ಎಚ್ಚರಿಸುತ್ತಿರುವ ವಿಪಕ್ಷ ನಾಯಕ ಹೇಳಿದ್ದನ್ನು ಗಂಭೀರವಾಗಿ ಸ್ವೀಕರಿಸಲು ಸಾಧ್ಯವೇ ಇಲ್ಲವೆ? ಅದನ್ನು ಬಿಟ್ಟು ಅವರನ್ನೇ ಕಟಕಟೆಯಲ್ಲಿ ನಿಲ್ಲಿಸಿದರೆ ನಾಳೆ ಅದಕ್ಕೆ ಬೆಲೆ ತೆರಬೇಕಾದವರು ನಾವೇ ಅಲ್ಲವೇ? ಕಾಳಜಿಯಿಲ್ಲದ ಈ ಜನರು ಎಷ್ಟು ಕಡಿಮೆ ಜ್ಞಾನವನ್ನು ಹೊಂದಿದ್ದಾರೆಂಬುದು ಇದರಿಂದಲೇ ಗೊತ್ತಾಗುತ್ತದೆ.
ಸರಕಾರವನ್ನೆಂದೂ ಪ್ರಶ್ನಿಸಲಾರದವರು, ಸರಕಾರವನ್ನು ಪ್ರಶ್ನಿಸಿದವರನ್ನು, ದೇಶದ ವಾಸ್ತವದ ಬಗ್ಗೆ ಹೇಳಿದವರನ್ನು ದೂಷಿಸಲು ನಿಲ್ಲುತ್ತಾರೆ.
ದೇಶದ ಬಗ್ಗೆ ಯೋಚಿಸುವವರನ್ನು ತಪ್ಪಾಗಿ ನಿರೂಪಿಸುವ ಈ ಜನರು ಯಾರು?ಇಂಥ ಜನರು ಭವಿಷ್ಯದಲ್ಲಿ ಎಂದಾದರೂ ಸುಧಾರಿಸಬಲ್ಲರೆ?
ಈ ಬೂಟಾಟಿಕೆ ಇನ್ನೂ ಎಷ್ಟು ಕಾಲ ಹೀಗೆಯೇ ಮುಂದುವರಿಯುತ್ತದೆ?






