ಕಲಬುರಗಿಗೆ ಬೇಕಿದೆ ಸಿವಿಲ್ ಸೇವೆ ಪರೀಕ್ಷಾ ಕೇಂದ್ರ

ಸಾಂದರ್ಭಿಕ ಚಿತ್ರ (AI)
ಕಲಬುರಗಿ: ವಿಶ್ವಶ್ರೇಷ್ಠ ರಾಷ್ಟ್ರಕೂಟ, ಚಾಲುಕ್ಯ, ಬಹಮನಿ ಸಾಮ್ರಾಜ್ಯ, ಹೀಗೆ ಸಹಸ್ರಾರು ವರ್ಷಗಳಿಂದ ಅನೇಕ ರಾಜಮನೆತನಗಳ ಜ್ಞಾನದ ಶಕ್ತಿ ಕೇಂದ್ರವಾಗಿದ್ದ ಕಲಬುರಗಿ ಪ್ರದೇಶವು ಇಂದು ಸಿವಿಲ್ ಸರ್ವಿಸ್ ಪರೀಕ್ಷಾ ಕೇಂದ್ರವಿಲ್ಲದೆ ಬರಡಾಗಿದೆ. ದೇಶದ ಉನ್ನತ ಅಧಿಕಾರಿಗಳನ್ನು ಹೊರತರುವ ಯುಪಿಎಸ್ಸಿ ಸಂಸ್ಥೆ ಸ್ಥಾಪನೆಯಾಗಿ ನೂರು ವರ್ಷ ಕಳೆದರೂ ಸಾಮಾಜಿಕ, ಭೌಗೋಳಿಕ, ವಿಭಾಗೀಯ ಕೇಂದ್ರವಾದ ಕಲಬುರಗಿ ಜಿಲ್ಲೆಯಲ್ಲಿ ಯುಪಿಎಸ್ಸಿ ಪರೀಕ್ಷಾ ಕೇಂದ್ರ ಸ್ಥಾಪನೆಯಾಗದಿರುವುದಕ್ಕೆ ರಾಜಕೀ ಯ ಇಚ್ಛಾಶಕ್ತಿ ಕೊರತೆಯೇ ಕಾರಣ ಎನ್ನಲಾಗುತ್ತಿದೆ.
ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎಂದು ಗುರುತಿಸಿಕೊಂಡಿರುವ ಕಲಬುರಗಿಯಲ್ಲಿ ಐದು ವಿಶ್ವ ವಿದ್ಯಾಲಯಗಳಿವೆ. ಕೇವಲ ಕಲಬುರಗಿ ಜಿಲ್ಲೆಯಲ್ಲೇ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಪದವಿಯಿಂದ ತೇರ್ಗಡೆಯಾದರೆ; ವಿಭಾಗೀಯ ಮಟ್ಟದಲ್ಲಿ ಇವರ ಸಂಖ್ಯೆ ಲಕ್ಷಾಂತರಕ್ಕೆ ಏರುತ್ತದೆ. ಇದರಲ್ಲೇ ಶೇ.60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರಕಾರಿ ಸೇವೆಯಲ್ಲಿ ಉನ್ನತ ಶ್ರೇಣಿಯ ಹುದ್ದೆ ಪಡೆಯಲು ಆಸೆ ಹೊಂದಿರುತ್ತಾರೆ. ಅಂಥವರ ಆಸೆ ಪೂರೈಸುವ ಯುಪಿಎಸ್ಸಿ ಸಂಸ್ಥೆಯು ಇನ್ನೂ ಈ ಭಾಗಕ್ಕೆ ತನ್ನ ಪರೀಕ್ಷಾ ಕೇಂದ್ರ ಸ್ಥಾಪಿಸದಿರುವುದು ವಿಷಾದನೀಯ.
ಕಲ್ಯಾಣ ಕರ್ನಾಟಕವನ್ನು ಹಿಂದುಳಿದ ಭಾಗ ವೆಂದು ಹಣೆಪಟ್ಟಿ ಕಟ್ಟುತ್ತಾ ಬರಲಾಗಿದೆ. ಆದರೆ ಇಲ್ಲಿಯೂ ಅಪ್ರತಿಮ ಸಾಧಕರು ಇದ್ದಾರೆ ಎನ್ನುವುದು ಹಲವು ಅಭ್ಯರ್ಥಿಗಳು ತೋರಿಸಿಕೊಟ್ಟಿದ್ದು, ಯುಪಿಎಸ್ಸಿ ಪರೀಕ್ಷೆಯಲ್ಲಿ ವಿವಿಧ ರ್ಯಾಂಕ್ ಸಹ ಗಳಿಸಿದ್ದಾರೆ. ಇತ್ತೀಚೆಗೆ ಯಾದಗಿರಿ ಜಿಲ್ಲೆಯೊಂದರಲ್ಲೇ ನಾಲ್ವರು ಐಎಎಸ್ ಪರೀಕ್ಷೆ ಪಾಸಾಗಿರುವುದು ತಾಜಾ ಉದಾಹರಣೆಯಾಗಿದೆ. ಒಂದು ವೇಳೆ ಕಲಬುರಗಿಯಲ್ಲಿ ಪರೀಕ್ಷಾ ಕೇಂದ್ರ ಸ್ಥಾಪಿಸಿದ್ದಲ್ಲಿ 1 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಎದುರಿಸಲಿದ್ದು, ಎರಡಂಕಿಯಲ್ಲಾದರೂ ಪಾಸಾಗುವ ಸಾಮರ್ಥ್ಯ ಹೊಂದಿದ್ದಾರೆ.
ಯುಪಿಎಸ್ಸಿ ನೇಮಕಾತಿಗೆ ಬೇಕು 371(ಜೆ) ಮೀಸಲಾತಿ: ಈ ಭಾಗದ ಅಭಿವೃದ್ಧಿಗಾಗಿ 371 (ಜೆ) ಸ್ಥಾಪನೆ ಮಾಡಲಾಗಿದೆ. ಶೈಕ್ಷಣಿಕ ಹಾಗೂ ಉದ್ಯೋಗ ನೇಮಕಾತಿಯಲ್ಲಿ ಕ್ಷಿಪ್ರ ಬದಲಾವಣೆಗೆ ರಾಜ್ಯದಲ್ಲಿ ಮೀಸಲಾತಿ ಕೊಡಲಾಗುತ್ತಿದೆ. ಅದರಂತೆಯೇ ಈ ಭಾಗದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಹಾಗೂ ಇತರೆ ಉನ್ನತಮಟ್ಟದ ಹುದ್ದೆಗಳನ್ನು ಪಡೆಯಲು ಯುಪಿಎಸ್ಸಿ ನೇಮಕಾತಿಯಲ್ಲೂ ಮೀಸಲಾತಿ ನೀಡಬೇಕು. ಅಂದಾಗ ಮಾತ್ರ ಇಲ್ಲಿನ ಅಭ್ಯರ್ಥಿಗಳು ಉನ್ನತ ಶ್ರೇಣಿಯ ಹುದ್ದೆಗಳನ್ನು ಪಡೆಯಲು ಸಾಧ್ಯ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಬಿ.ಎಂ.ರಾವೂರ ಅವರು.
ಐಎಎಸ್ ತರಬೇತಿಯಾಯ್ತು; ಪರೀಕ್ಷಾ ಕೇಂದ್ರ ಯಾವಾಗ?
ಕಲ್ಯಾಣ ಕರ್ನಾಟಕ ಭಾಗದ ಸ್ಪರ್ಧಾ ಆಕಾಂಕ್ಷಿಗಳ ಬೂಸ್ಟ್ ಕೊಡಲು ಇತ್ತೀಚೆಗೆ ಕಲಬುರಗಿಯಲ್ಲಿ ಪ್ರಬುದ್ಧ ಅಕಾಡೆಮಿ ಹೆಸರಲ್ಲಿ ಐಎಎಸ್/ಕೆಎಎಸ್ ಪರೀಕ್ಷಾ ಪೂರ್ವ ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಆದರೆ ತರಬೇತಿ ಪಡೆದ ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆ ಬರೆಯಲು ದೂರದ ಬೆಂಗಳೂರು, ಧಾರವಾಡ, ಮೈಸೂರಿಗೆ ಹೋಗಬೇಕಾದ ಅನಿವಾರ್ಯತೆಯಿದೆ. ಈಗಿನ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮನಸ್ಸು ಮಾಡಿದ್ದಲ್ಲಿ ಪರೀಕ್ಷಾ ಕೇಂದ್ರದ ಸ್ಥಾಪನೆಗೆ ಕೇಂದ್ರಕ್ಕೆ ಶಿಫಾರಸು ಮಾಡಿಸಿ, ಅಲ್ಲಿಂದ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಬಹುದು. ಸಚಿವರು ಇದಕ್ಕೆ ಗಮನ ಹರಿಸಿದರೆ ಸಹಸ್ರಾರು ಆಕಾಂಕ್ಷಿಗಳ ಬೇಡಿಕೆ ಈಡೇರಿದಂತಾಗುತ್ತದೆ. ಕೇಂದ್ರೀಯ ವಿವಿ, ಗುಲ್ಬರ್ಗಾ ವಿವಿ ಸೇರಿದಂತೆ ಇತರೆ ಪ್ರಮುಖ ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರ ಸ್ಥಾಪಿಸಬಹುದಾಗಿದೆ.
ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳು ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆಗೆ ಬೆಂಗಳೂರು, ಮೈಸೂರು ಅಥವಾ ಧಾರವಾಡಕ್ಕೆ ನೂರಾರು ಕಿಲೋಮೀಟರ್ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಏಕೆ? ಕಲಬುರಗಿ ಪ್ರಾದೇಶಿಕ ಮುಖ್ಯ ಕೇಂದ್ರವಾಗಿದ್ದು, ಪ್ರಮುಖ ಶಿಕ್ಷಣ ನಗರವೂ ಆಗಿದೆ. ಆದ್ದರಿಂದ ವಿದ್ಯಾರ್ಥಿಗಳ ಆರ್ಥಿಕ ಭಾರ, ಪ್ರಯಾಣದ ಒತ್ತಡ ಮತ್ತು ಅಸಮಾನತೆಯನ್ನು ಕಡಿಮೆ ಮಾಡಲು ಯುಪಿಎಸ್ಸಿ ಪರೀಕ್ಷಾ ಕೇಂದ್ರವನ್ನು ಕಲಬುರಗಿಯಲ್ಲೇ ಸ್ಥಾಪಿಸಬೇಕು.
<ಸಂತೋಷ್ ನಾಯಕ,
ಸಂತೋಷ್ ನಾಯಕ (ಸಿವಿಲ್ ಸರ್ವಿಸ್ ಪರೀಕ್ಷಾರ್ಥಿ)
ನಾನು ಸಂಸದನಾಗಿದ್ದಾಗ ಯುಪಿಎಸ್ಸಿ ಪರೀಕ್ಷಾ ಕೇಂದ್ರ ಸ್ಥಾಪನೆ ಬಗ್ಗೆ ಬೇಡಿಕೆ ಬಂದಿಲ್ಲ. ಈಗಲೂ ಕಾಲ ಮಿಂಚಿಲ್ಲ. ಈ ಕುರಿತು ರಾಜ್ಯ ಸರಕಾರ ಶಿಫಾರಸು ಮಾಡಿದರೆ ಮಾನದಂಡಗಳನ್ನು ಪರಿಶೀಲಿಸಿ ಕೇಂದ್ರ ಸರಕಾರ ಕ್ರಮ ಕೈಗೊಳ್ಳುತ್ತದೆ. ಕಲಬುರಗಿಯಲ್ಲಿ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಬೇಕಾಗುವ ಎಲ್ಲ ಪ್ರಯತ್ನಗಳು ಮಾಡಲು ಸಿದ್ಧ.
<ಡಾ.ಉಮೇಶ್ ಜಾಧವ್,
ಮಾಜಿ ಸಂಸದ
ಕಲ್ಯಾಣ ಕರ್ನಾಟಕ ಹೆಸರಾಯಿತು, ಉಸಿರಾಗಲಿಲ್ಲ. ಕಲಬುರಗಿಯಲ್ಲಿ ಯುಪಿಎಸ್ಸಿ ಪರೀಕ್ಷಾ ಕೇಂದ್ರ ಸ್ಥಾಪಿಸುವುದರ ಮೂಲಕ ಪರೀಕ್ಷೆ ಎದುರಿಸುವ ಸಾವಿರಾರು ಅಭ್ಯರ್ಥಿಗಳ ಸಮಯ ಉಳಿತಾಯ ಮತ್ತು ನೆಮ್ಮದಿಯಿಂದ ಪರೀಕ್ಷೆ ಬರೆಯಲು ಅನುಕೂಲ ಮಾಡಿದಂತಾಗುತ್ತದೆ.
<ಬಿ.ಎಂ.ರಾವೂರ, ಕಾರ್ಯದರ್ಶಿ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ






