ವಿಶೇಷ ತೀವ್ರ ಪರಿಷ್ಕರಣೆ: ಅಸಾಂವಿಧಾನಿಕ ಹಾಗೂ ಅಸಂಗತ

ಹಿಂದಿನ ಎರಡು ಹಂತಗಳಲ್ಲಿ ತುರ್ತಾಗಿ ವಿಶೇಷ ತೀವ್ರ ಪರಿಷ್ಕರಣೆ ನಡೆಸಿದ ಪ್ರದೇಶಗಳಲ್ಲಿ ಸಾಂವಿಧಾನಿಕ ಹಕ್ಕಿನಿಂದ ವಂಚಿತರಾದ ಪ್ರಜೆಗಳು ನೂರಾರು ಸಂಖ್ಯೆಯಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ; ಅವುಗಳ ವಿಚಾರಣೆ ನಡೆದು ಸಾಂವಿಧಾನಿಕ ನ್ಯಾಯಿಕತೆ ಸಾಬೀತಾಗುವುದಕ್ಕೆ ಕಾಯದೆ ಮತ್ತೆ ಅವಸರದಲ್ಲಿ ಮೂರನೇ ಹಂತದ ಪ್ರಕ್ರಿಯೆ ಶುರುಮಾಡುವ ತುರ್ತು ಏನಿದೆ?
ರಾಜ್ಯದಲ್ಲಿ ಜೂನ್ ತಿಂಗಳ ಕೊನೆಯಿಂದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ವಿತೀಪ)ಯನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಅಸಾಂವಿಧಾನಿಕತೆ:
ವಿತೀಪವು ಅಸಾಂವಿಧಾನಿಕ ನಡಾವಳಿಯಾಗಿದೆ ಎನ್ನುವುದಕ್ಕೆ ಕಾರಣಗಳು ನೇರವಾಗಿವೆ; (1) 1950ರ ಪ್ರಜಾಪ್ರತಿನಿಧಿ ಕಾಯ್ದೆಯ ಅನ್ವಯ ಭಾರತದ ಚುನಾವಣಾ ಆಯೋಗಕ್ಕೆ ‘ಸಾರ ರೂಪದ ಪರಿಷ್ಕರಣೆ’ ಹಾಗೂ ‘ತೀವ್ರ ಪರಿಷ್ಕರಣೆ’ ಎಂಬ ಎರಡು ಬಗೆಯ ಮತದಾರ ಪಟ್ಟಿಯನ್ನು ಕಾಲ ಕಾಲಕ್ಕೆ ತಿದ್ದಿ ಸರಿಪಡಿಸುವ ಅಧಿಕಾರ ಇದೆಯೇ ಹೊರತಾಗಿ, ‘ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಕಾರವೇ ಕಾಯ್ದೆಯಲ್ಲಿ ಇಲ್ಲ. (2) ಈ ವಿತೀಪದ ಉದ್ದೇಶವು ಮತದಾರರ ಪಟ್ಟಿಯನ್ನು ತಿದ್ದಿ ಸಕ್ಷಮಗೊಳಿಸುವ ನಡಾವಳಿ ಆಗಿರದೆ, ದೇಶದ ಜನರ ನಾಗರಿಕತ್ವವನ್ನು ಸಿಂಧು/ಅಸಿಂಧುಗೊಳಿಸುವ ಉದ್ದೇಶದ್ದಾಗಿದೆ-ಅಂತಹ ಅಧಿಕಾರವನ್ನು ಸಂವಿಧಾನವು ಚುನಾವಣಾ ಆಯೋಗಕ್ಕೆ ನೀಡಿಲ್ಲ. ಇದು ಸಂವಿಧಾನದ 324ನೇ ವಿಧಿಯು ಚುನಾವಣಾ ಆಯೋಗಕ್ಕೆ ನೀಡಿರುವ ಅಧಿಕಾರದ ಮಿತಿಯನ್ನೂ ಮೀರಿದ ಅಸಾಂವಿಧಾನಿಕ ನಡೆಯಾಗಿದೆ.
ಇಷ್ಟಿರುವಾಗಲೂ ಚುನಾವಣಾ ಆಯೋಗವು 324ನೇ ವಿಧಿಯ ದುರ್ಬಳಕೆ ಮಾಡಿಕೊಂಡು ವಿತೀಪ ನಡೆಸುತ್ತಿರುವುದನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಐದು ದಾವೆಗಳನ್ನು ಹೂಡಲಾಗಿದೆ; ಅವುಗಳ ವಿಚಾರಣೆ ನಡೆಯುತ್ತಿರುವಾಗಲೇ, ಆಯೋಗವು ದಾಂಗುಡಿಯಲ್ಲಿ ದೇಶಾದ್ಯಾಂತ ಎರಡು ಹಂತಗಳಲ್ಲಿ 13 ರಾಜ್ಯ ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿತೀಪವನ್ನು ಪೂರ್ಣಗೊಳಿಸಿದೆ; ಮೂರನೇ ಹಂತದ ಪ್ರಕ್ರಿಯೆಯನ್ನು 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೇ 30, 2026ರಿಂದ ಆರಂಭಿಸಲಿದೆ. ಹಿಂದಿನ ಎರಡು ಹಂತಗಳ ಪ್ರಕ್ರಿಯೆ ನಡೆದ ರಾಜ್ಯಗಳಲ್ಲಿ ಶಾಸನಸಭಾ ಚುನಾವಣೆಗಳ ಘೋಷಣೆ ಹಾಗೂ ಚುನಾವಣಾ ದಿನಾಂಕಗಳ ನಡುವಿನ ಕಡಿಮೆ ಅವಧಿಯಲ್ಲಿ, ವಿತೀಪವನ್ನು ತುರ್ತಾಗಿ ನಡೆಸುವ ಮೂಲಕ ರಾತ್ರೋರಾತ್ರಿ ಲಕ್ಷಾಂತರ ಪ್ರಜೆಗಳನ್ನು ಮತದಾನ ವಂಚಿತರನ್ನಾಗಿ ಮಾಡಲಾಯಿತು. ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕ್ರಿಯೆಯ ಸಾಂವಿಧಾನಿಕ ಸಿಂಧುತ್ವವು ಇತ್ಯರ್ಥವಾಗುವುದಕ್ಕೆ ಮುನ್ನವೇ ಅವಸರ ತೋರುವುದೇಕೆ? ಎಂಬ ಪ್ರಶ್ನೆಗೆ ಚುನಾವಣಾ ಆಯೋಗವು ಯಾವ ಸೂಕ್ತ ಉತ್ತರವನ್ನೂ ನೀಡಿಲ್ಲ. ಚುನಾವಣೆಗಳು ಘೋಷಿತವಾಗಿದ್ದ ರಾಜ್ಯಗಳಲ್ಲಿ ಕಾಯ್ದೆಯನುಸಾರ ‘ಸಾರ ರೂಪದ ಪರಿಷ್ಕರಣೆ’ ನಡೆಸಿ, ಮೃತರು ಹಾಗೂ ಎರಡು ಸಾರಿ ನೋಂದಾಯಿತರ ಹೆಸರುಗಳನ್ನು ಸರಿಪಡಿಸಿ, ಚುನಾವಣೆ ನಡೆಸಿದ್ದರೆ ಏನು ಪ್ರಮಾದವಾಗುತ್ತಿತ್ತು? ಎಂಬ ಪ್ರಶ್ನೆಗೂ ಚುನಾವಣಾ ಆಯೋಗವು ಸಮರ್ಪಕ ಉತ್ತರ ನೀಡುತ್ತಿಲ್ಲ. ಇದೀಗ ಮೂರನೇ ಹಂತದ ಪ್ರಕ್ರಿಯೆಗೆ ಸಿದ್ಧವಾಗಿರುವ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸದ್ಯಕ್ಕೆ ಚುನಾವಣೆಗಳು ನಡೆಯುತ್ತಿಲ್ಲ. ಹಿಂದಿನ ಎರಡು ಹಂತಗಳಲ್ಲಿ ತುರ್ತಾಗಿ ವಿತೀಪ ನಡೆಸಿದ ಪ್ರದೇಶಗಳಲ್ಲಿ ಸಾಂವಿಧಾನಿಕ ಹಕ್ಕಿನಿಂದ ವಂಚಿತರಾದ ಪ್ರಜೆಗಳು ನೂರಾರು ಸಂಖ್ಯೆಯಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ; ಅವುಗಳ ವಿಚಾರಣೆ ನಡೆದು ಸಾಂವಿಧಾನಿಕ ನ್ಯಾಯಿಕತೆ ಸಾಬೀತಾಗುವುದಕ್ಕೆ ಕಾಯದೆ ಮತ್ತೆ ಅವಸರದಲ್ಲಿ ಮೂರನೇ ಹಂತದ ಪ್ರಕ್ರಿಯೆ ಶುರುಮಾಡುವ ತುರ್ತು ಏನಿದೆ? ಈ ಮಹತ್ವದ ಸಮಸ್ಯೆಗಳಿಗೆ ಚುನಾವಣಾ ಆಯೋಗವು ಉತ್ತರದಾಯಿತ್ವ ತೋರಲು ಹಿಂಜರಿದರೂ, ಎರಡು ವಾಸ್ತವಿಕ ವಿದ್ಯಮಾನಗಳು ಗಮನಾರ್ಹವಾಗಿವೆ: 1. ಅಸ್ಸಾಂ ರಾಜ್ಯದಲ್ಲಿ ‘ರಾಷ್ಟ್ರೀಯ ನಾಗರಿಕ ದಸ್ತಾವೇಜು’ ತಯಾರಿ ಪ್ರಕ್ರಿಯೆ ಪೂರ್ಣಗೊಂಡಿದೆ. ಚುನಾವಣಾ ಆಯೋಗಕ್ಕೆ ಅಧಿಕಾರ ಇಲ್ಲದಿದ್ದರೂ, ಆಯೋಗವು ಅಲ್ಲಿ ಕ್ಷೇತ್ರ ಪುನರ್‌ವಿಂಗಡನೆಯ ಪ್ರಶ್ನಾರ್ಹ ಪ್ರಕ್ರಿಯೆ ಪೂರ್ಣಗೊಳಿಸಿದೆ. ಬೇರೆ ರಾಜ್ಯಗಳಂತೆ ಅಲ್ಲೂ ಶಾಸನ ಸಭಾ ಚುನಾವಣೆ ಘೋಷಣೆಯಾದರೂ ವಿತೀಪ ನಡೆಸಲಾಗಿಲ್ಲ. ಇದರ ಅರ್ಥ ನಿಚ್ಚಳವಾಗಿದೆ: ವಿತೀಪ 1950ರ ಪ್ರಜಾಪ್ರತಿನಿಧಿ ಕಾಯ್ದೆಯನ್ವಯದ ಮತದಾರ ಪಟ್ಟಿಯ ಪರಿಷ್ಕರಣೆ ಆಗಿರದೆ, ಆಯೋಗಕ್ಕೆ ಅಧಿಕಾರ ಇರದ ‘ನಾಗರಿಕ ಸಿಂಧುತ್ವ ಸಾಬೀತು’ ಪಡಿಸುವ ಪ್ರಕ್ರಿಯೆ ಆಗಿದೆ. (2) ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಭಾಜಪವು ಅಧಿಕಾರಕ್ಕೆ ಬಂದಾಕ್ಷಣವೇ ವಿತೀಪವು ಹೊರಗಿಟ್ಟಿರುವ ಪ್ರಜೆಗಳನ್ನು ಪ್ರಭುತ್ವ ಕಲ್ಯಾಣ ಯೋಜನೆಗಳ ಫಲಾನುಭವಕ್ಕೆ ಅನರ್ಹರು ಎಂದು ಆದೇಶ ಹೊರಡಿಸಿವೆ. ವಿತೀಪದ ಸಾಂವಿಧಾನಿಕತೆಯ ವಿಚಾರಣೆಯು ಸರ್ವೋಚ್ಚ ನ್ಯಾಯಾಲಯದಲ್ಲಿ ಇರುವಾಗಲೇ, ವಿತೀಪ ಬಲಿಪಶುಗಳ ಸಾಂವಿಧಾನಿಕ ಪ್ರಜಾಹಕ್ಕುಗಳನ್ನು ಅಧಿಕೃತವಾಗಿ ದಮನ ಮಾಡಲಾಗುತ್ತಿದೆ. ಈ ವಿದ್ಯಮಾನಗಳು ವಿತೀಪದ ಸಂವಿಧಾನ ಬಾಹಿರ ರಾಜಕೀಯ ದುರುದ್ದೇಶವನ್ನು ಸಾಬೀತು ಪಡಿಸುವುದಿಲ್ಲವೇ??
ಅಸಂಗತತೆ:
1. ಈ ಹಿಂದೆ 13 ರಾಜ್ಯ ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದಿರುವ ಎರಡು ಹಂತದ ವಿತೀಪದಲ್ಲಿ 5.5-6 ಕೋಟಿ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಟ್ಟಲಾಗಿದೆ. ಇದರಲ್ಲಿ ಮೃತರು ಹಾಗೂ ಎರಡು ಸಲ ನೋಂದಾವಣೆ ಆದವರ ಸಂಖ್ಯೆಯು ಕಡಿಮೆ ಇದೆ. ‘ಶಾಶ್ವತವಾಗಿ ಸ್ಥಳ ಬದಲಾವಣೆ ಮಾಡಿದವರು’ ಎಂಬ ಪ್ರಕಾರದಡಿ ಹೊರಗಿಡಲ್ಪಟ್ಟವರ ಸಂಖ್ಯೆಯು ಶೇ.50ಕ್ಕಿಂತ ಅಧಿಕವಾಗಿದೆ! (ಉದಾಹರಣೆಗೆ: ಉತ್ತರ ಪ್ರದೇಶದಲ್ಲಿ ಶೇ.75, ತಮಿಳುನಾಡಿನಲ್ಲಿ ಶೇ.54) ಇಷ್ಟು ದೊಡ್ಡ ಪ್ರಮಾಣದ ಜನರು ಎಲ್ಲಿಗೆ ‘ಶಾಶ್ವತವಾಗಿ ಸ್ಥಳಾಂತರ’ವಾದರು? ಆಯಾ ರಾಜ್ಯಗಳಲ್ಲೇ ಬೇರೆ ಊರುಗಳಿಗೆ ಸ್ಥಳಾಂತರ ಮಾಡಿದ್ದರೆ ಆ ರಾಜ್ಯದ ಮತದಾರರ ಪಟ್ಟಿಯಲ್ಲಿ, ಸದ್ಯ ನೆಲೆಗೊಂಡಿರುವ ಸ್ಥಳದ ಮತದಾರರ ಪಟ್ಟಿಯಲ್ಲಿ ಯಾಕೆ ಒಳಗೊಳ್ಳಲಿಲ್ಲ? ಬೇರೆ ರಾಜ್ಯಗಳಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸ್ಥಳಾಂತರ ಆಗಿದ್ದರೆ, ಆಯಾ (ವಿತೀಪ ಮುಗಿದಿರುವ) ರಾಜ್ಯಗಳ ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವರೇ/ (ವಿತೀಪ ನಡೆಯಬೇಕಾಗಿರುವ) ರಾಜ್ಯಗಳ ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆಯೇ? 2002ರಲ್ಲಿ ಒಂದು ಸ್ಥಳದಲ್ಲಿ ಮತದಾರರಾಗಿದ್ದ ಅರ್ಧಕ್ಕರ್ಧ ಜನ 2025ರಲ್ಲಿ ಜೀವಂತವಾಗಿದ್ದಾರೆ, ದೇಶದಲ್ಲೇ ಇದ್ದಾರೆ, ಆದರೆ ಅವರಿಗೆ ತಮ್ಮ ನಾಗರಿಕ ಇರುವಿಕೆಯನ್ನು ರುಜು ಮಾಡಲಿಕ್ಕೆ ಆಗಿಲ್ಲ ಎಂದರೆ ಏನರ್ಥ? ಇದು ಗಹನ ತಾತ್ವಿಕ ಅಸಂಗತತೆಯಲ್ಲ; ವಿಕಾರವಾದ ಅಧಿಕಾರಶಾಹಿ ಅಸಂಗತತೆ-ಇವರಿಗೆ ಆಯೋಗ ತಾಕೀತು ಮಾಡುವ 11 ದಾಖಲೆಗಳಲ್ಲಿ ಒಂದನ್ನೂ ಕೊಡಲೂ ಆಗುತ್ತಿಲ್ಲ; ಇವರಲ್ಲಿ ಶೇ.90ಕ್ಕೂ ಹೆಚ್ಚು ಜನ ಮಹಿಳೆಯರು, ಅಲ್ಪಸಂಖ್ಯಾತ, ಆದಿವಾಸಿ, ದಲಿತ, ಕೆಳ ಜಾತಿ ಗಳಿಗೆ ಸೇರಿದವರು ಎಂಬ ಪ್ರಾಥಮಿಕ ಅಂದಾಜಿದೆ. ಪ್ರಭುತ್ವ ಈ ಜನರಿಗೆ, ಈ ದಾಖಲೆಗಳನ್ನು ಹೊಂದಿರುವಂತಹ ಬದುಕುವ ವಾತಾವರಣ ಮಾಡಿಲ್ಲ, ಅವರ ದುಡಿಮೆಯಿಂದ ಉಳ್ಳವರ ಸಂಪತ್ತು ವೃದ್ಧಿಸಿದೆ, ಆದರೆ ಈಗ ಇವರ ನಾಗರಿಕತ್ವವೇ ಪ್ರಶ್ನಾರ್ಹ! ಇದು ಅತೀಪ ಸೃಷ್ಟಿಸಿರುವ ಕರಾಳ ಅಸಂಗತತೆಯ ಭಾಗ-1. ಮೂರನೇ ಹಂತದಲ್ಲಿ ಭಾಗ-2ನ್ನು ಬಿಡುಗಡೆ ಮಾಡಲು ಆಯೋಗವು ಉತ್ಸುಕವಾಗಿದೆ.
2. ಪಶ್ಚಿಮ ಬಂಗಾಳದಲ್ಲಿ ವಿತೀಪದ ಮೊದಲ ಹಂತದಲ್ಲಿ 63 ಲಕ್ಷ ಜನರನ್ನು ಹೊರಗಿಡಲಾಯಿತು. ಇವರಲ್ಲಿ ‘ಶಾಶ್ವತವಾಗಿ ಸ್ಥಳಾಂತರ ಆದವರು’ ಎಷ್ಟೆಂಬ ಸಂಖ್ಯೆ ಸಿಕ್ಕಿಲ್ಲ. ಇರಲಿ. ಇಷ್ಟಕ್ಕೆ ತೃಪ್ತಿಯಾಗದ ಆಯೋಗವು, ಕೃತಕ ಬುದ್ಧಿಮತ್ತೆ ಉಪಯೋಗಿಸಿ ‘ತಾರ್ಕಿಕವಾಗಿ ತಾಳೆಯಾಗದವರು’ ಎಂದು 1 ಕೋಟಿ 20 ಲಕ್ಷ ಪ್ರಜೆಗಳನ್ನು ಕಟಕಟೆಯಲ್ಲಿ ನಿಲ್ಲಿಸಿತ್ತು! ಇವರು, ಆಯೋಗ ವಿಧಿಸಿದ್ದ ದಾಖಲೆಗಳ ಅಗ್ನಿಪರೀಕ್ಷೆ ಜಯಿಸಿದರೂ ಮತ್ತೊಂದು ಕೆಂಡದ ಹೊಳೆಗೆ ದೂಡಲ್ಪಟ್ಟರು. ಐದು ಬಗೆಯಲ್ಲಿ ‘ತಾರ್ಕಿಕವಾಗಿ ತಾಳೆಯಾಗದವರನ್ನು’ ಬಲೆಗೆ ಹಾಕಲಾಯಿತು. ಈ ಐದೂ ಬಗೆಗಳನ್ನು ಕರ್ನಾಟಕದಲ್ಲೂ ಪ್ರಯೋಗಿಸುವುದಾಗಿ ಆಯೋಗವು ಘೋಷಿಸಿರುವ ಕಾರಣ ಹೆಸರಿಗೆ ಸಂಬಂಧಿಸಿದ ಬಗೆಯನ್ನು ಸರಳವಾದ ಉದಾಹರಣೆಯಿಂದ ವಿವರಿಸಬಹುದು. 2002ರ ಮತದಾರರ ಪಟ್ಟಿಯಲ್ಲಿ ಹೆಸರು ‘ಪಣಿರಾಜ ಕೆ.’ ಎಂದು ಇದೆ; 2025ರ ಮತದಾರರ ಪಟ್ಟಿಯಲ್ಲಿ ‘ಕೆ. ಫಣಿರಾಜ’ ಎಂದು ಇದೆ; ಆಯೋಗ ನೀಡಿದ ಗುರುತಿನ ಚೀಟಿಯಲ್ಲಿ ‘ಕೆ. ಫಣಿರಾಜ್’ ಎಂದು ಇದೆ; 2002 ಹಾಗೂ 2025ರ ಮತದಾರರ ಪಟ್ಟಿಗಳನ್ನು ತಾಳೆ ಹಾಕಿ ಬ್ಲಾಕ್ ಮಟ್ಟದ ಅಧಿಕಾರಿ ನಕ್ಷೆ ಮಾಡಿದ್ದರೂ ಯಂತ್ರ ಜೀವಿಗೆ ಇದು ‘ತಾರ್ಕಿಕವಾಗಿ ತಾಳೆಯಾಗದಿರುವ’ ಲೋಪ! ಹೀಗೆ 2002 ಹಾಗೂ 2025ರ ಪಟ್ಟಿಗಳಲ್ಲಿ ಮತದಾರರ/ಅವರ ಪಾಲಕರ ಹೆಸರುಗಳಲ್ಲಿ ಸಾಸಿವೆ ಕಾಳಿನಷ್ಟು ವ್ಯತ್ಯಾಸವಿದ್ದರೂ ಮತದಾರರು ಅಧಿಕಾರಶಾಹಿ ಕೆಂಡ ಹಾಯಲು ಸಿದ್ಧವಾಗಬೇಕು. ಮೂಲಭೂತವಾಗಿ ಈ ವ್ಯತ್ಯಾಸ ಯಾಕಾಗುತ್ತದೆ? ಯಾರು ಇದಕ್ಕೆ ಕಾರಣ? ಎನ್ನುವ ನ್ಯಾಯ ತರ್ಕಕ್ಕೆ ಇಲ್ಲಿ ಆಸ್ಪದವಿಲ್ಲ. ‘ಅಳಿಯ’ ಬೇರೆ ‘ಮಗಳ ಗಂಡ’ ಬೇರೆ. 2002ರಲ್ಲಿ ‘ಅಳಿಯ’ ಎಂದು ಬರೆದುಕೊಂಡವರಿಗೂ 2025ರಲ್ಲಿ ’ಮಗಳ ಗಂಡ’ ಎಂದು ಬರೆದುಕೊಂಡವರಿಗೂ ಕನ್ನಡದ ಜನಪದದ ಅರಿವು ಇದ್ದದ್ದೇ ವೀತಪ ಪ್ರಕ್ರಿಯೆಯಲ್ಲಿ ಅಸಂಗತವಾಗುತ್ತದೆ. ಮತದಾರರ ನಾಗರಿಕತ್ವ ಪ್ರಶ್ನಾರ್ಹವಾಗುತ್ತದೆ.
ತಾನು ಸೃಜಿಸಿದ ಕರಾಳ ಅಸಂಗತತೆ ಈ ಬಗೆಯಲ್ಲಿ ನಿಜ ರೂಪ ತಳೆಯುವುದನ್ನು ಫ್ರಾಂಜ್ ಕಾಫ್ಕ ಖಂಡಿತ ಇಷ್ಟ ಪಡುತ್ತಿರಲಿಲ್ಲ.
ಕರ್ನಾಟಕದ ಜನ ವಿತೀಪ ವಿಪರೀತದ ಬಗ್ಗೆ ಎಚ್ಚರವಾಗುವುದು ಒಳಿತು.






