ಪೆರ್ಡೂರು: ಅಪಾರ್ಟ್ಮೆಂಟ್ ಆವರಣಕ್ಕೆ ನುಗ್ಗಿದ ಎರಡು ಚಿರತೆಗಳು!
► ಕಟ್ಟಿಹಾಕಿದ್ದ ನಾಯಿಮರಿ ಬಲಿ ► ಸ್ಥಳೀಯರಲ್ಲಿ ತೀವ್ರ ಆತಂಕ
ಪೆರ್ಡೂರು, ಸೆ.18: ಪೆರ್ಡೂರು -ಕುಕ್ಕೆಹಳ್ಳಿ ರಸ್ತೆಯ ಗೋರೇಲು ಎಂಬಲ್ಲಿರುವ ಅಪಾರ್ಟ್ಮೆಂಟ್ ಆವರಣದೊಳಗೆ ಎರಡು ಚಿರತೆಗಳು ನುಗ್ಗಿ ನಾಯಿಮರಿಯನ್ನು ಹೊತ್ತೊಯ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರವಿವಾರ ರಾತ್ರಿ ವೇಳೆ ಅಪಾರ್ಟ್ಮೆಂಟ್ ಆವರಣದೊಳಗೆ ನುಗ್ಗಿದ ಎರಡು ಚಿರತೆಗಳ ಪೈಕಿ ಒಂದು ಚಿರತೆ ಅಲ್ಲಿ ಕಟ್ಟಿ ಹಾಕಲಾಗಿದ್ದ ನಾಯಿಮರಿ ಯನ್ನು ತೆಗೆದುಕೊಂಡು ಹೋಗಿದೆ. ಇದರಿಂದ ಪರಿಸರದ ಜನತೆಯಲ್ಲಿ ಆತಂಕ ಉಂಟು ಮಾಡಿದೆ. ಈ ದೃಶ್ಯವು ಅಲ್ಲಿನ ಸಿಸಿಟಿವಿ ಫೂಟೇಜ್ನಿಂದ ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ನವೀನ್ ಬಿ.ಎನ್. ಹಾಗೂ ಸ್ಥಳೀಯ ಅರಣ್ಯ ಗಸ್ತು ಪಾಲಕ ಶ್ರೀಕಾಂತ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಹೆಬ್ರಿ ವಲಯ ಅರಣ್ಯಾಧಿಕಾರಿ ಸಿದ್ಧೇಶ್ವರ ಕುಂಬಾರ್ ಮಾರ್ಗ ದರ್ಶನದಲ್ಲಿ ಅರಣ್ಯ ಇಲಾಖೆಯವರು ಅಪಾರ್ಟ್ಮೆಂಟ್ ಸಮೀಪದ ಸಣ್ಣ ಹಾಡಿಯಲ್ಲಿ ಬೋನನ್ನು ಇರಿಸಿ ಚಿರತೆಯ ಸೆರೆಗೆ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಪೆರ್ಡೂರು ಪರಿಸರದ ಸುತ್ತಮುತ್ತ ಚಿರತೆಗಳ ಓಡಾಟ ಹೆಚ್ಚಿದ್ದು, ಈ ಹಿಂದೆ ಗೋರೇಲಿನಿಂದ ಸುಮಾರು ಒಂದು ಕಿ.ಮೀ. ದೂರದ ಕಲ್ಪಂಡ ಎಂಬಲ್ಲಿ ಅರಣ್ಯ ಇಲಾಖೆಯವರು ಒಂದು ಬಾವಿಗೆ ಬಿದ್ದ ಮತ್ತು ಇನ್ನೊಂದು ಬೋನು ಇಟ್ಟು ಎರಡು ಚಿರತೆಗಳನ್ನು ರಕ್ಷಿಸಿದ್ದಾರೆ.