ಮಳೆಯಿಂದ ಹಾನಿಗೊಳಗಾದ ಬೆಳೆಗಳಿಗೆ ಸಮರ್ಪಕ ಪರಿಹಾರ ನೀಡಲಾಗುವುದು: ಶಾಸಕ ಬಸನಗೌಡ ದದ್ಧಲ್

ರಾಯಚೂರು :ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಅ.1ರಂದು ಬೆಳಿಗ್ಗೆಯಿಂದ ಸಂಜೆವರೆಗೆ ಕ್ಷೇತ್ರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಮಳೆಯಿಂದಾದ ಬೆಳೆ ಹಾನಿಯನ್ನು ಪರಿಶೀಲಿಸಿದರು.
ಬೆಳಗ್ಗೆ 10.30ರಿಂದ ಆರಂಭವಾದ ಸಂಚಾರದಲ್ಲಿ ಅವರು ಚಿಕ್ಕಸೂಗುರು, ದೇವಸಗೂರು, ಚಂದ್ರಬಂಡಾ ಪ್ರದೇಶಗಳಲ್ಲಿ ಸುತ್ತಾಟ ನಡೆಸಿ ಹತ್ತಿ ಹಾಗೂ ಇತರೆ ಬೆಳೆ ಹಾನಿಯನ್ನು ಪರಿಶೀಲಿಸಿದರು. ರೈತರು ಈ ಸಂದರ್ಭದಲ್ಲಿ ತಮ್ಮ ದುಃಖವನ್ನು ಹಂಚಿಕೊಂಡು, “ಸಂಪನ್ನವಾಗಿ ಬಂದಿದ್ದ ಹತ್ತಿ ಬೆಳೆ ಮಳೆಯಿಂದ ಸಂಪೂರ್ಣ ಹಾನಿಗೊಂಡಿದೆ. ಹಸಿರು ಕಾಯಿಗಳು ಕೊಳೆತಿವೆ, ಗಿಡಗಳು ಒಣಗುತ್ತಿವೆ. ನಮಗೆ ಸಮರ್ಪಕ ಪರಿಹಾರ ದೊರಕಿಸಬೇಕು ಎಂದು ಮನವಿ ಮಾಡಿದರು.
ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿ, ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಅಂದಾಜು 6 ಸಾವಿರ ಎಕರೆ ಪ್ರದೇಶದ ಬೆಳೆ ಹಾನಿಗೊಂಡಿದೆ. ತಹಶೀಲ್ದಾರರು, ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ಕಾರ್ಯವನ್ನು ಅಚ್ಚುಕಟ್ಟಾಗಿ ನಡೆಸಬೇಕು. ಯಾವ ರೈತನಿಗೂ ಅನ್ಯಾಯವಾಗಬಾರದು. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ಒದಗಿಸಲಾಗುವುದು. ಜೊತೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಘೋಷಿಸಿದಂತೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಪ್ರೋತ್ಸಾಹ ಧನವನ್ನೂ ನೀಡಲಾಗುವುದು ಎಂದು ಭರವಸೆ ನೀಡಿದರು.
ರೈತರಿಗೆ ಸಹಾಯ ಮಾಡುವುದು ನಮ್ಮ ಆದ್ಯ ಕರ್ತವ್ಯ. ಪ್ರಕೃತಿ ವಿಕೋಪಗಳಿಂದ ಹಾನಿ ಸಂಭವಿಸಿದಾಗ ಸರ್ಕಾರ ರೈತರಿಗೆ ಬೆಂಬಲವಾಗಿ ನಿಂತುಕೊಳ್ಳುತ್ತದೆ. ಎಲ್ಲರೂ ಧೈರ್ಯದಿಂದ ಇರಬೇಕು ಎಂದು ರೈತರಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸುರೇಶ್ ವರ್ಮಾ, ಕೃಷಿ ಅಧಿಕಾರಿ ದೀಪಾ, ತೋಟಗಾರಿಕಾ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.







